ಬಿಜೆಪಿ ತಾನು ಹೇಳಿದ್ದನ್ನೇ ಮಾಡುವ ಏಕೈಕ ಪಕ್ಷ; ಬಿಹಾರದಲ್ಲಿ ರಾಜನಾಥ್ ಸಿಂಗ್

ಬಿಹಾರ ಚುನಾವಣೆಗೂ ಮುನ್ನ ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಆರಂಭವಾದಾಗಿನಿಂದ ಸಾರ್ವಜನಿಕರ ವಿಶ್ವಾಸ ಗಳಿಸಿದೆ ಎಂದು ಹೇಳಿದ್ದಾರೆ. ಬಿಹಾರದ ಎಲ್ಲಾ 243 ಕ್ಷೇತ್ರಗಳಿಗೆ ಅಕ್ಟೋಬರ್ ಅಥವಾ ನವೆಂಬರ್ 2025ರಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಹಿಂದಿನ ವಿಧಾನಸಭಾ ಚುನಾವಣೆಗಳು ಅಕ್ಟೋಬರ್- ನವೆಂಬರ್ 2020ರಲ್ಲಿ ನಡೆದಿದ್ದವು.

ಬಿಜೆಪಿ ತಾನು ಹೇಳಿದ್ದನ್ನೇ ಮಾಡುವ ಏಕೈಕ ಪಕ್ಷ; ಬಿಹಾರದಲ್ಲಿ ರಾಜನಾಥ್ ಸಿಂಗ್
Rajnath Singh In Bihar

Updated on: Jul 02, 2025 | 5:34 PM

ಪಾಟ್ನಾ, ಜುಲೈ 2: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಇಂದು (ಬುಧವಾರ) ಪಾಟ್ನಾದಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷದ ಕಾರ್ಯಕರ್ತರ ಮನೋಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ಸಾರ್ವಜನಿಕರು ಕೆಲವು ನಾಯಕರ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದರೂ, ಪಾರದರ್ಶಕ ಆಡಳಿತ ಮತ್ತು ಬಲವಾದ ನಾಯಕತ್ವದ ಮೂಲಕ ನಂಬಿಕೆಯನ್ನು ಪುನಃಸ್ಥಾಪಿಸಲು ಬಿಜೆಪಿ ನಿರಂತರವಾಗಿ ಕೆಲಸ ಮಾಡುವ ಮೂಲಕ ಸವಾಲನ್ನು ಎದುರಿಸಿದೆ ಎಂದು ಒಪ್ಪಿಕೊಂಡಿದ್ದಾರೆ.

“ನೀವು ಸಾಮಾನ್ಯ ಪಕ್ಷದ ಕಾರ್ಯಕರ್ತರಲ್ಲ. ಸ್ವತಂತ್ರ ಭಾರತದಲ್ಲಿ ನಾಯಕರ ಮಾತು ಮತ್ತು ಕಾರ್ಯಗಳ ನಡುವಿನ ವ್ಯತ್ಯಾಸದಿಂದಾಗಿ ಸಾರ್ವಜನಿಕರು ನಿಧಾನವಾಗಿ ಭಾರತೀಯ ರಾಜಕಾರಣಿಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ನೀವು ನೋಡಿದ್ದೀರಿ. ಆದರೆ ನೀವು ಎದೆಯುಬ್ಬಿಸಿ ನಿಲ್ಲಬಹುದು. ಏಕೆಂದರೆ, ಬಿಜೆಪಿ ಏನು ಹೇಳುತ್ತದೆಯೋ ಅದನ್ನೇ ಮಾಡುವ ಪಕ್ಷ” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ನಮ್ಮ ಸರ್ಕಾರವು ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದು ಅವರು ಹೇಳಿದರು. “ನಾವು ಚುನಾವಣೆಯ ಸಮಯದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಧಾನಿ ಮೋದಿಯವರ ಮೂರನೇ ಅವಧಿಯಲ್ಲಿ ಇನ್ನೂ 4 ವರ್ಷಗಳು ಉಳಿದಿವೆ, ಆದ್ದರಿಂದ ಇದನ್ನು ಸಹ ಪರಿಗಣಿಸಬೇಕು” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಕೇವಲ 23 ನಿಮಿಷದಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಸರ್ವನಾಶ; ಐಎಎಫ್ ಸಾಧನೆಗೆ ರಾಜನಾಥ್ ಸಿಂಗ್ ಶ್ಲಾಘನೆ


ಬಿಹಾರದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರನ್ನು ಟೀಕಿಸಿದ ರಾಜನಾಥ್ ಸಿಂಗ್, ಬಿಹಾರದ ಮಾಜಿ ಮುಖ್ಯಮಂತ್ರಿ ಬಡವರ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅಧಿಕಾರ ವಹಿಸಿಕೊಂಡ ನಂತರ ಅವರಿಗೆ ಏನನ್ನೂ ಮಾಡಲಿಲ್ಲ ಎಂದು ಟೀಕಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರು ಕರ್ಪೂರಿ ಠಾಕೂರ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂದು ರಾಜನಾಥ್ ಸಿಂಗ್ ಆರೋಪಿಸಿದರು.


“ಕರ್ಪೂರಿ ಠಾಕೂರ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಮತ್ತು ಅವರ ಆರೋಗ್ಯ ಸರಿಯಿಲ್ಲದಿದ್ದಾಗ ಅವರು ವಿಧಾನಸಭೆಯಲ್ಲಿ ಭಾಗವಹಿಸಲು ತಮ್ಮ ಮನೆಯಿಂದ ಹೊರಹೋಗಬೇಕಾಯಿತು. ಕರ್ಪೂರಿ ಸರಳ ಜೀವನವನ್ನು ನಡೆಸುತ್ತಿದ್ದರು. ಒಮ್ಮೆ ಅವರು ತಮ್ಮ ಸಹೋದ್ಯೋಗಿ ಶಿವಾನಂದ ಪಾಸ್ವಾನ್ ಅವರನ್ನು ತಮ್ಮ ಜೀಪಿನಲ್ಲಿ ವಿಧಾನಸಭೆಗೆ ಬಿಡಲು ಲಾಲು ಪ್ರಸಾದ್ ಅವರನ್ನು ಕೇಳಲು ಸೂಚಿಸಿದರು. ಆದರೆ ಅವರು ಸುಮ್ಮನೆ ನೆಪ ಹೇಳಿ ತಮ್ಮ ವಾಹನದಲ್ಲಿ ಪೆಟ್ರೋಲ್ ಇಲ್ಲ ಎಂದು ಹೇಳಿದರು” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆಯನ್ನು ಬೇರುಗಳಿಂದಲೇ ಕಿತ್ತೊಗೆಯಲು ಜಾಗತಿಕ ಸಮುದಾಯ ಒಗ್ಗೂಡಬೇಕು; ಸಚಿವ ರಾಜನಾಥ್ ಸಿಂಗ್ ಆಗ್ರಹ


“ಲಾಲು ಪ್ರಸಾದ್ ಉದ್ಯೋಗಗಳನ್ನು ಕಸಿದುಕೊಂಡರು. ಮಹಿಳೆಯರು ತಮ್ಮ ಮನೆಗಳಿಂದ ಹೊರಬರಲು ಹೆದರುತ್ತಿದ್ದರು. ಆದರೆ, ಎನ್‌ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಾಗ ಪರಿಸ್ಥಿತಿ ಬದಲಾಯಿತು” ಎಂದು ಅವರು ಹೇಳಿದ್ದಾರೆ. “ಭಾರತೀಯ ಜನತಾ ಪಕ್ಷದ ಉದ್ದೇಶ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳುವುದು. ನಾವೆಲ್ಲರೂ ಭಾರತದ ಆರ್ಥಿಕತೆಯನ್ನು ವಿಶ್ವದಲ್ಲೇ ಅತಿ ದೊಡ್ಡದಾಗಿಸಲು ಶ್ರಮಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ