ಆಪರೇಷನ್ ಸಿಂಧೂರ್ ವೇಳೆ ಹೇರಲಾಗಿದ್ದ ಪಾಕಿಸ್ತಾನದ ನ್ಯೂಸ್ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್‌ಗಳ ಮೇಲಿನ ನಿಷೇಧ ತೆರವು
ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ನ್ಯೂಸ್ ಚಾನೆಲ್, ಸೆಲೆಬ್ರಿಟಿಗಳ ಸಾಮಾಜಿಕ ಖಾತೆಗಳು, ಮನರಂಜನಾ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಭಾರತ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಗಿದೆ. ಮಾವ್ರಾ ಹೊಕೇನ್, ಸಬಾ ಕಮರ್, ಅಹದ್ ರಜಾ ಮಿರ್, ಯುಮ್ನಾ ಜೈದಿ ಮತ್ತು ಡ್ಯಾನಿಶ್ ತೈಮೂರ್ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳು ಈಗ ಭಾರತದಲ್ಲಿ ಗೋಚರಿಸುತ್ತಿವೆ. ಪಾಕಿಸ್ತಾನದ ಯೂಟ್ಯೂಬ್ ಮನರಂಜನಾ ಚಾನೆಲ್‌ಗಳ ಮೇಲಿನ ನಿಷೇಧವನ್ನು ಭಾರತ ತೆಗೆದುಹಾಕಿದೆ.

ನವದೆಹಲಿ, ಜುಲೈ 2: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ನಿಗ್ನತೆ ಇನ್ನೂ ಕಡಿಮೆಯಾಗಿಲ್ಲ. ಆದರೂ ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ನಿಷೇಧಿಸಲ್ಪಟ್ಟಿದ್ದ ಪಾಕಿಸ್ತಾನಿ ಸುದ್ದಿ ಚಾನೆಲ್‌ಗಳು ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳು ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಅವುಗಳ ಮೇಲಿನ ನಿರ್ಬಂಧಗಳನ್ನು ಭಾರತ ತೆಗೆದುಹಾಕಿದೆ. ಆದರೆ, ನಿಷೇಧವನ್ನು ತೆಗೆದುಹಾಕುವ ಬಗ್ಗೆ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಮಾವ್ರಾ ಹೊಕೇನ್, ಸಬಾ ಕಮರ್, ಅಹದ್ ರಜಾ ಮಿರ್, ಯುಮ್ನಾ ಜೈದಿ ಮತ್ತು ಡ್ಯಾನಿಶ್ ತೈಮೂರ್ ಸೇರಿದಂತೆ ಹಲವಾರು ಪಾಕಿಸ್ತಾನಿ ನಟರ ಇನ್‌ಸ್ಟಾಗ್ರಾಮ್ ಖಾತೆಗಳು ಈಗ ಭಾರತದಲ್ಲಿ ಗೋಚರಿಸುತ್ತಿವೆ.
ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಅವರು ಮಾಡಿದ ಕಾಮೆಂಟ್‌ಗಳಿಗಾಗಿ ಪಾಕಿಸ್ತಾನಿ ನಟರಾದ ಮೌರಾ ಹೊಕೇನ್, ಯುಮ್ನಾ ಜೈದಿ, ಅಹದ್ ರಜಾ ಮಿರ್ ಮತ್ತು ಡ್ಯಾನಿಶ್ ತೈಮೂರ್ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಆದರೆ, ಜುಲೈ 2ರಿಂದ ಅವರ ಖಾತೆಗಳು ಈಗ ಭಾರತೀಯ ಅಭಿಮಾನಿಗಳಿಗೆ ಗೋಚರಿಸುತ್ತಿವೆ. ಭಾರತದಲ್ಲಿ ಗೋಚರಿಸುತ್ತಿರುವ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಅನೇಕ ಅಭಿಮಾನಿಗಳು ನಿಷೇಧವನ್ನು ರದ್ದುಗೊಳಿಸಲಾಗಿದೆಯೇ ಎಂದು ಕೇಳುತ್ತಿದ್ದಾರೆ.
ಪಾಕಿಸ್ತಾನಿ ನಾಟಕಗಳು, ಇತರ ಮನರಂಜನಾ ವಿಷಯಗಳು ಮತ್ತು ಕಲಾವಿದರ ಸಾಮಾಜಿಕ ಮಾಧ್ಯಮ ಫೀಡ್‌ಗಳನ್ನು ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್‌ಗಳ ಮೇಲಿನ ನಿಷೇಧವನ್ನು ಭಾರತ ಸರ್ಕಾರ ತೆಗೆದುಹಾಕಿದೆ. ಏಪ್ರಿಲ್ 22ರಂದು ಭಾರತ ಆಕ್ರಮಿತ ಕಾಶ್ಮೀರದ ಪ್ರವಾಸಿ ಪಟ್ಟಣವಾದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ, ಭಾರತ ಸರ್ಕಾರವು ಹಲವಾರು ಪಾಕಿಸ್ತಾನಿ ಸುದ್ದಿ ಚಾನೆಲ್‌ಗಳು, ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪಾಕಿಸ್ತಾನಿ ಸೀರಿಯಲ್ಗಳನ್ನು ಪ್ರದರ್ಶಿಸುವ ಪ್ರಮುಖ ಮನರಂಜನಾ ಯೂಟ್ಯೂಬ್ ಚಾನೆಲ್‌ಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.
ಭಾರತ ಸರ್ಕಾರವು ARY ಡಿಜಿಟಲ್, ಜಿಯೋ ಟಿವಿ ಮತ್ತು ಹಮ್ ಟಿವಿಯ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು. ಅವುಗಳನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಕರೆದಿತ್ತು. ಪಾಕಿಸ್ತಾನಿ ಡ್ರಾಮಾಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿವೆ. ಅದಕ್ಕಾಗಿಯೇ ಈ ಚಾನೆಲ್‌ಗಳನ್ನು ಭಾರತ ನಿಷೇಧಿಸಿದಾಗ ಪಾಕಿಸ್ತಾನಿ ಡ್ರಾಮಾಗಳ ಜನಪ್ರಿಯತೆ ಸ್ವಲ್ಪ ಕಡಿಮೆಯಾಯಿತು. ಆದರೆ, ಈಗ ಈ ನಿಷೇಧವನ್ನು ತೆಗೆದುಹಾಕಿರುವುದರಿಂದ ಭಾರತೀಯ ವೀಕ್ಷಕರು ಇನ್ನು ಮುಂದೆ ಪಾಕಿಸ್ತಾನಿ ಡ್ರಾಮಾಗಳನ್ನು ವೀಕ್ಷಿಸಲು VPN ಬಳಸಬೇಕಾಗಿಲ್ಲ. YouTubeನಲ್ಲಿ ಪಾಕಿಸ್ತಾನಿ ಡ್ರಾಮಾಗಳನ್ನು ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಕೃಷಿ ಚಟುವಟಿಕೆಗೆ ತೊಡಕಾಗ್ತಿದೆ; ಜಲ ಒಪ್ಪಂದ ರದ್ದತಿಯ ಬಗ್ಗೆ ಪಾಕಿಸ್ತಾನಿ ರೈತರ ಕಳವಳ
ಮತ್ತೊಂದೆಡೆ, ಭಾರತೀಯ ಬಳಕೆದಾರರು ತಮ್ಮ ಟೈಮ್‌ಲೈನ್‌ನಲ್ಲಿ ಕೆಲವು ಪಾಕಿಸ್ತಾನಿ ಕಲಾವಿದರ ಪೋಸ್ಟ್‌ಗಳನ್ನು ನೋಡಬಹುದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಕೆಲವು ಕಲಾವಿದರ ಖಾತೆಗಳ ಮೇಲಿನ ನಿಷೇಧವನ್ನು ಸಹ ತೆಗೆದುಹಾಕಲಾಗಿದೆ ಎಂದು ಸೂಚಿಸುತ್ತದೆ. ವರದಿಗಳ ಪ್ರಕಾರ, ಅಹದ್ ರಜಾ ಮಿರ್, ಮಾವ್ರಾ ಹೊಕೇನ್, ಯುಮ್ನಾ ಜೈದಿ ಮತ್ತು ಡ್ಯಾನಿಶ್ ತೈಮೂರ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳ ಖಾತೆಗಳನ್ನು ಮರುಸ್ಥಾಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




