ಭಾರತಕ್ಕೆ ಆಪರೇಷನ್ ಸಿಂಧೂರ್ ಸಮಯದಲ್ಲಾದ ಹಾನಿ ಎಷ್ಟು? ವಾಯುಪಡೆ ಅಧಿಕಾರಿ ಹೇಳಿದ್ದೇನು?
Operation Sindoor: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳನ್ನು ಪಾಕಿಸ್ತಾನವು ಹೊಡೆದುರುಳಿಸಿದೆ. ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಲೇ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ವಾಯು ಸೇನೆ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ.

ನವದೆಹಲಿ, ಜೂನ್ 30: ಪಹಲ್ಗಾಮ್ ಭಯೋತ್ಪಾದನಾ ದಾಳಿ(Pahalgam Terror Attack)ಯ ಬಳಿಕ ಭಾರತವು ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಪ್ರಾರಂಭಿಸಿತು. ಮೇ 7ರ ಮಧ್ಯರಾತ್ರಿ ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳುಮತ್ತು ಉಡಾವಣಾ ಪ್ಯಾಡ್ಗಳನ್ನು ನಾಶಪಡಿಸಿತು. ನಂತರ ಪಾಕಿಸ್ತಾನವು ಪ್ರತೀಕಾರ ತೀರಿಸಿಕೊಂಡಿತು.
ಕೆಲವು ದಿನಗಳ ಹಿಂದಷ್ಟೇ ಸಿಡಿಎಸ್ ಅನಿಲ್ ಚೌಹಾಣ್ ಆಪರೇಷನ್ ಸಿಂಧೂರ್‌ನ ಆರಂಭಿಕ ಹಂತದಲ್ಲಿ ಭಾರತವು ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದರು. ಈಗ ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ಸಹ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.
ಭಾರತದ ರಾಜಕೀಯ ನಾಯಕತ್ವವು ಪಾಕಿಸ್ತಾನದಲ್ಲಿರುವ ಮಿಲಿಟರಿ ಸ್ಥಾಪನೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಬಾರದು ಎಂದು ಹೇಳಿತ್ತು. ಆದ್ದರಿಂದ, ಭಾರತವು ಆರಂಭಿಕ ಹಂತದಲ್ಲಿ ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿತು ಎಂದು ಕ್ಯಾಪ್ಟನ್ ಶಿವ ಕುಮಾರ್ ಇಂಡೋನೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಜೂನ್ ಆರಂಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದರು.
ಕ್ಯಾಪ್ಟನ್ ಶಿವ ಕುಮಾರ್ ಕರ್ನಲ್ ಶ್ರೇಣಿಯ ಅಧಿಕಾರಿ. ಮೇ 31 ರಂದು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಇದೇ ರೀತಿಯ ಹೇಳಿಕೆ ನೀಡಿದ್ದರು. ಭಾರತೀಯ ವಾಯುಪಡೆಯು ನಷ್ಟ ಅನುಭವಿಸಿದೆ ಎಂದು ಚೌಹಾಣ್ ಆರಂಭದಲ್ಲಿ ಒಪ್ಪಿಕೊಂಡಿದ್ದರು. ಆದರೆ ಅನಿಲ್ ಚೌಹಾಣ್ ಹೊಡೆದುರುಳಿಸಿದ ಯುದ್ಧ ವಿಮಾನಗಳ ಸಂಖ್ಯೆಯನ್ನು ನೀಡಿರಲಿಲ್ಲ.
ಮತ್ತಷ್ಟು ಓದಿ: ಪಹಲ್ಗಾಮ್ ದಾಳಿಗೆ ಒಂದು ತಿಂಗಳು, ಆಪರೇಷನ್ ಸಿಂಧೂರ್ನಿಂದ ಸರ್ವಪಕ್ಷ ಸಂಸದರ ನಿಯೋಗ ರಚನೆವರೆಗೆ ಇಲ್ಲಿದೆ ಮಾಹಿತಿ
ಆಪರೇಷನ್ ಸಿಂಧೂರ್ ಸಮಯದಲ್ಲಿ ಐಎಎಫ್ ಎಷ್ಟು ನಷ್ಟ ಅನುಭವಿಸಿದೆ ಎಂದು ಕೇಂದ್ರ ಸರ್ಕಾರ ಇನ್ನೂ ಹೇಳಿಲ್ಲ. ಮೇ 7 ರಂದು ಮೂರು ರಫೇಲ್ ಸೇರಿದಂತೆ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಪಾಕಿಸ್ತಾನದ ಈ ಹೇಳಿಕೆ ಸಂಪೂರ್ಣವಾಗಿ ತಪ್ಪು ಎಂದು ಸಿಡಿಎಸ್ ಅನಿಲ್ ಚೌಹಾಣ್ ಸಿಂಗಾಪುರ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದ್ದರು.
ಕ್ಯಾಪ್ಟನ್ ಶಿವಕುಮಾರ್ ಅವರ ಹೇಳಿಕೆಯು ಕಾಂಗ್ರೆಸ್‌ಗೆ ಮತ್ತೊಮ್ಮೆ ಮೋದಿ ಸರ್ಕಾರವನ್ನು ಗುರಿಯಾಗಿಸಲು ಅವಕಾಶವನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಏನು ಮರೆಮಾಡುತ್ತಿದ್ದಾರೆ? ಎಂದು ಕಾಂಗ್ರೆಸ್ ಕೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆಯನ್ನು ಕರೆದು ಅದರ ನೇತೃತ್ವ ವಹಿಸಿಕೊಳ್ಳಲು ಯಾಕೆ ನಿರಾಕರಿಸುತ್ತಿದ್ದಾರೆ. ಪಹಲ್ಗಾಮ್ ದಾಳಿ ಮತ್ತು ‘ಪರೇಷನ್ ಸಿಂಧೂರದ ಕುರಿತು ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಬೇಕು ಎನ್ನುವ ವಿರೋಧ ಪಕ್ಷಗಳ ಆಗ್ರಹವನ್ನು ಯಾಕಾಗಿ ಒಪ್ಪಿಕೊಳ್ಳುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಏನು ವಿವರಣೆ ನೀಡಿತು?
ಕ್ಯಾಪ್ಟನ್ ಶಿವಕುಮಾರ್ ಅವರ ಹೇಳಿಕೆ ಬೆಳಕಿಗೆ ಬಂದ ಬಳಿಕ, ಕಾಂಗ್ರೆಸ್ ಈಗ ಸರ್ಕಾರದ ಮೇಲೆ ದಾಳಿ ಮಾಡಿದೆ. ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕ್ಯಾಪ್ಟನ್ ಶಿವಕುಮಾರ್ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದೆ. ಕ್ಯಾಪ್ಟನ್ ಶಿವಕುಮಾರ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಾಧ್ಯಮ ವರದಿಗಳು ಅವರ ಹೇಳಿಕೆಯ ಉದ್ದೇಶ ಮತ್ತು ಮಹತ್ವವನ್ನು ತಪ್ಪಾಗಿ ಪ್ರಸ್ತುತಪಡಿಸಿವೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕ್ಯಾಪ್ಟನ್ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಕೇಂದ್ರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:06 am, Mon, 30 June 25








