ರಾಮ ಮಂದಿರ ನಿರ್ಮಾಣಕ್ಕೆ ನೀಡಿದ 22 ಕೋಟಿ ಮೊತ್ತದ 15 ಸಾವಿರ ಚೆಕ್ ಬೌನ್ಸ್

| Updated By: ರಶ್ಮಿ ಕಲ್ಲಕಟ್ಟ

Updated on: Apr 16, 2021 | 3:51 PM

Ram Mandir: ನೂತನ ಶ್ರೀ ರಾಮ ಮಂದಿರವನ್ನು ನಿರ್ಮಿಸಲು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಅಭಿಯಾನ ರೂಪಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ದೇಶದಾದ್ಯಂತ ಜನವರಿ 15ರಿಂದ ಫೆಬ್ರವರಿ 17ರವರೆಗೆ ಈ ಅಭಿಯಾನ ನಡೆಸಿತ್ತು.

ರಾಮ ಮಂದಿರ ನಿರ್ಮಾಣಕ್ಕೆ ನೀಡಿದ 22 ಕೋಟಿ ಮೊತ್ತದ 15 ಸಾವಿರ ಚೆಕ್ ಬೌನ್ಸ್
ಸಾಂಕೇತಿಕ ಚಿತ್ರ
Follow us on

ಅಯೋಧ್ಯಾ: ರಾಮ ಮಂದಿರ ನಿರ್ಮಾಣ ಅಭಿಯಾನಕ್ಕೆ ಹರಿದುಬಂದ ದೇಣಿಗೆಯಲ್ಲಿ 22 ಕೋಟಿ ಮುಖಬೆಲೆಯ 15 ಸಾವಿರ ಬ್ಯಾಂಕ್ ಚೆಕ್​ಗಳು ಬೌನ್ಸ್ ಆಗಿವೆ ಎಂದು ಪಿಟಿಐ ವರದಿ ಮಾಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಆಡಿಟ್ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ದೇಣಿಗೆಗೆಂದು ನೀಡಿದ ಚೆಕ್​ನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೇ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಚೆಕ್ ಬೌನ್ಸ್ ಆಗಿದೆ ಎಂದು ವರದಿ ತಿಳಿಸಿದೆ.

ತಾಂತ್ರಿಕ ಕಾರಣಗಳಿಂದ ಬೌನ್ಸ್ ಆದ ಚೆಕ್​ಗಳನ್ನು ಪುನಃ ಸರಿಪಡಿಸಲು ಬ್ಯಾಂಕ್​ಗಳು ಪ್ರಯತ್ನಿಸುತ್ತಿವೆ. ಬೌನ್ಸ್​ ಆದವುಗಳಲ್ಲಿ ಸುಮಾರು 200ದಷ್ಟು ಚೆಕ್​ಗಳು ಅಯೋಧ್ಯೆ ಮತ್ತು ಸುತ್ತಮುತ್ತಲಿನ ಭಾಗದಿಂದಲೇ ಬಂದಿವೆ. ಬೌನ್ಸ್ ಆದ ಚೆಕ್​ಗಳನ್ನು ಸಲ್ಲಿಸಿದವರ ಬಳಿ ಮತ್ತೊಮ್ಮೆ ದೇಣಿಗೆ ನೀಡಲು ಮನವಿ ಮಾಡುತ್ತಿದ್ದೇವೆ ಎಂದು ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಟ್ರಸ್ಟ್​ನ ಸದಸ್ಯರಾದ ಡಾ.ಅನಿಲ್ ಮಿಶ್ರಾ ಅವರು ತಿಳಿಸಿದ್ದಾರೆ.

ನೂತನ ಶ್ರೀ ರಾಮ ಮಂದಿರವನ್ನು ನಿರ್ಮಿಸಲು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಅಭಿಯಾನ ರೂಪಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ದೇಶದಾದ್ಯಂತ ಜನವರಿ 15ರಿಂದ ಫೆಬ್ರವರಿ 17ರವರೆಗೆ ಈ ಅಭಿಯಾನ ನಡೆಸಿತ್ತು. ಸುಮಾರು 5 ಸಾವಿರ ಕೋಟಿ ಹಣ ದೇಣಿಗೆ ರೂಪದಲ್ಲಿ ಸಲ್ಲಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಈವರೆಗೂ ಸಂಗ್ರಹಿಸಲಾದ ದೇಣಿಗೆಯ ಮೊತ್ತವನ್ನು ಖಚಿತವಾಗಿ ಘೋಷಿಸಲಾಗಿಲ್ಲ.

4 ಲಕ್ಷ ಹಳ್ಳಿಗಳು ಹಾಗೂ 11 ಕೋಟಿ ಕುಟುಂಬಗಳು
ಸಂಪೂರ್ಣ ಭಾರತವು ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಧನಸಹಾಯ ಮಾಡುತ್ತಿದೆ. ನಾವು ನಿಧಿ ಸಂಗ್ರಹಕ್ಕಾಗಿ, 4 ಲಕ್ಷ ಹಳ್ಳಿಗಳನ್ನು ಹಾಗೂ 11 ಕೋಟಿ ಕುಟುಂಬಗಳನ್ನು ತಲುಪಿದ್ದೇವೆ. ಜನವರಿ 15ರಿಂದ ಈ ಅಭಿಯಾನ ನಡೆಸುತ್ತಿದ್ದೇವೆ. ಫೆಬ್ರವರಿ 27ರ ವರೆಗೆ ಅಭಿಯಾನ ಮುಂದುವರಿಸುತ್ತೇವೆ. ನಿಧಿ ಸಂಗ್ರಹ ಯೋಜನೆಗಾಗಿ ಈಗ ಸೂರತ್​ಗೆ ಭೇಟಿ ನೀಡಿದ್ದೇನೆ. ಜನರು ದೇಣಿಗೆ ನೀಡುತ್ತಿದ್ದಾರೆ. 492 ವರ್ಷಗಳ ಬಳಿಕ, ಧರ್ಮಕ್ಕಾಗಿ ಕೆಲಸ ಮಾಡಲು ಜನತೆಗೆ ಅವಕಾಶ ಲಭಿಸಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್​ನ ಖಜಾಂಜಿ, ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ದೇವ್ ಗಿರಿ ಸ್ವಾಮಿ ತಿಳಿಸಿದ್ದರು.

ಫೆಬ್ರವರಿ 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸುವ ಬಗ್ಗೆ ಘೋಷಿಸಿದ್ದರು. ನಂತರ 2020ರ ಆಗಸ್ಟ್ 5ರಂದು ರಾಮ ಮಂದಿರದ ಶಿಲಾನ್ಯಾಸ ಪೂಜೆಯನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದರು.

ಇದನ್ನೂ ಓದಿ: Explainer: ಮಂದಿರವೋ? ಮಸೀದಿಯೋ? ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಲಿವೆಯೇ ಈ ಪ್ರಕರಣಗಳು?

RSS ABPS 2021: ರಾಮ ಮಂದಿರ ನಿಧಿ ಅಭಿಯಾನಕ್ಕೆ ದೇಣಿಗೆ ನೀಡಿದ್ದಾರೆ 12 ಕೋಟಿ ಜನ!

(Ram Janmabhoomi donation 1500 check bounce worth 22 crore says source)