ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ರಾಮನವಮಿ ದಿನ ಸಾರ್ವತ್ರಿಕ ರಜೆ ಎಂದು ಘೋಷಣೆ; ಇದ್ಯಾವ ನಾಟಕ ಎಂದು ಬಿಜೆಪಿ ವ್ಯಂಗ್ಯ
Ram Navami public holiday in West Bengal: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ರಾಮನವಮಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿದೆ. ಆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಹಬ್ಬಕ್ಕೆ ರಜೆ ಘೋಷಿಸಲಾಗಿರುವುದು. ಹಿಂದೂ ವಿರೋಧಿ ಸರ್ಕಾರ ಎಂಬ ಹಣೆ ಪಟ್ಟಿ ಹೊತ್ತುಕೊಂಡಿರುವುದರಿಂದ ರಾಮನವಮಿಗೆ ರಜೆ ಘೋಷಿಸಲಾಗಿದೆ. ಜೈ ಶ್ರೀರಾಮ್ ಘೋಷಣೆ ಕೇಳಿದರೇ ಉರಿದುಬೀಳುವ ಮಮತಾ ಬ್ಯಾನರ್ಜಿ ಅವರಿಂದ ಈ ನಡೆ ಬಹಳ ತಡವಾಗಿ ಬಂತು ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.
ಕೋಲ್ಕತಾ, ಮಾರ್ಚ್ 10: ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ರಾಮನವಮಿ (Ram Navami) ದಿನವನ್ನು ಸಾರ್ವಜನಿಕ ರಜೆ (Public Holiday) ಎಂದು ಘೋಷಿಸಿದೆ. ಈ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಮನವಮಿಗೆ ಸಾರ್ವತ್ರಿಕ ರಜೆ ಎಂದು ಘೋಷಿಸಲಾಗಿರುವುದು. ಶನಿವಾರ ಈ ಸಂಬಂಧ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ದುರ್ಗಾ ಪೂಜೆ ಮತ್ತು ಕಾಳಿ ಪೂಜೆ ಬಂಗಾಳದಲ್ಲಿ ಮೊದಲಿಂದಲೂ ಪ್ರಧಾನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆ ಎರಡು ಹಿಂದೂ ಹಬ್ಬಗಳಿಗೆ ಅಲ್ಲಿ ಸಾರ್ವತ್ರಿಕ ರಜೆ ಇದೆ. ರಾಮನವಮಿಗೆ ರಜೆ ಘೋಷಿಸಿದ್ದು ಇದೇ ಮೊದಲು. ಈ ಹಿಂದೆ ರಾಮನವಮಿ ಹಬ್ಬದಂದು ಮೆರವಣಿಗೆ ನಡೆಯುವ ವೇಳೆ ಬಂಗಾಳದ ಕೆಲವೆಡೆ ಹಿಂಸಾಚಾರಗಳಾಗಿ, ಬಂಗಾಳ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಅದರ ಬೆನ್ನಲ್ಲೇ ಲೋಕಸಭೆ ಚುನಾವಣೆಗೆ ಮುನ್ನ ಸರ್ಕಾರ ರಾಮನವಮಿಗೆ ರಜೆ ಘೋಷಿಸುವ ನಿರ್ಧಾರ ಮಾಡಿದೆ.
ರಾಮನವಮಿಗೆ ರಜೆ ಘೋಷಣೆ: ಬಿಜೆಪಿ ವ್ಯಂಗ್ಯ…
ಬಂಗಾಳ ಸರ್ಕಾರ ರಾಮನವಮಿಗೆ ರಜೆ ಘೋಷಿಸಿರುವ ಕ್ರಮವನ್ನು ವಿಪಕ್ಷವಾದ ಬಿಜೆಪಿ ಸ್ವಾಗತಿಸಿದೆಯಾದರೂ ಸರ್ಕಾರದ ನಡೆಗೆ ವ್ಯಂಗ್ಯ ಮಾಡಿದೆ. ಬಂಗಾಳದಲ್ಲಿ ಕಾಲ ಬದಲಾಗುತ್ತಿದ್ದು, ಸರ್ಕಾರ ರಾಮನವಮಿಗೆ ರಜೆ ಘೋಷಿಸುವುದು ಅನಿವಾರ್ಯವಾಯಿತು. ಹಿಂದೂ ವಿರೋಧಿ ಹಣೆಪಟ್ಟಿ ತೊಡೆದುಹಾಕಲು ಸಿಎಂ ಮಮತಾ ಬ್ಯಾನರ್ಜಿ ಈ ಕ್ರಮ ಕೈಗೊಂಡಿದ್ದಾರೆ. ಆದರೆ, ಜೈ ಶ್ರೀರಾಮ್ ಎಂದರೆ ಬೆಂಕಿಯಂತಾಗುವ ವ್ಯಕ್ತಿಯಿಂದ ಈ ನಡೆ ಬಹಳ ನಿಧಾನವಾಯಿತು ಎಂದು ಬಿಜೆಪಿ ನಾಯಕ ಅಮಿತ್ ಮಾಲವೀಯ ಲೇವಡಿ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ರಾಮನವಮಿಗೆ ರಜೆಯೇನೋ ನೀಡಿದ್ದಾರೆ. ಆದರೆ, ಈ ಬಾರಿಯಾದರೂ ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟವಾಗದಂತೆ ಭದ್ರತೆ ಏರ್ಪಡಿಸುತ್ತಾರಾ ನೋಡಬೇಕು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥರಾದರೂ ಅಮಿತ್ ಕೇಳಿದ್ದಾರೆ.
ಇದನ್ನೂ ಓದಿ: ಬುಡಕಟ್ಟು ಭಾಷೆಗಳು ಸೇರಿದಂತೆ ಅನುಸೂಚಿತವಲ್ಲದ ಭಾಷೆಗಳ 52 ಕಿರು ಪಠ್ಯಪುಸ್ತಕ ಬಿಡುಗಡೆ
ಒತ್ತಡ ಇಲ್ಲದೇ ಬೆಕ್ಕು ಮರ ಏರೋದಿಲ್ಲ ಎಂದ ಸುವೇಂದು
ವಿಪಕ್ಷಗಳ ಒತ್ತಡಕ್ಕೆ ಮಣಿದು ಸರ್ಕಾರ ರಾಮನವಮಿಗೆ ರಜೆ ಘೋಷಿಸಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
‘ಬೆಕ್ಕುಗಳು ಒತ್ತಡಕ್ಕೆ ಬೀಳದೇ ಹೋದರೆ ಮರ ಹತ್ತುವುದಿಲ್ಲ. ಕಾಲ ಬದಲಾಗಿದೆ. ರಾಮನವಮಿಗೆ ಸರ್ಕಾರ ರಜೆ ನೀಡಿಲ್ಲ ಎಂದು ಜನವರಿಯಲ್ಲಷ್ಟೇ ನಾನು ಟೀಕಿಸಿದ್ದೆ. ಈಗ ಸರ್ಕಾರ ಬಲವಂತವಾಗಿ ರಜೆ ಘೋಷಿಸಿದೆ,’ ಎಂದು ಸುವೇಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ