ಹೈದರಾಬಾದ್ನಲ್ಲಿ ಕೊವಿಡ್ 19ನಿಂದ ಚೇತರಿಸಿಕೊಂಡವರೊಬ್ಬರಲ್ಲಿ ಬಿಳಿ ಫಂಗಸ್ (White Fungus) ಕಾಣಿಸಿಕೊಂಡಿದೆ. ಬಿಳಿ ಫಂಗಸ್ ಅಥವಾ ಆಸ್ಪರ್ಗಿಲ್ಲಸ್ (Aspergillus) ತುಂಬ ಅಪರೂಪವಾಗಿದ್ದು, ಶಿಲೀಂದ್ರದಿಂದ ರೋಗಿಯ ಮಿದುಳಿನಲ್ಲಿ ಬಾವು ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ವ್ಯಕ್ತಿ ಮೇ ತಿಂಗಳಲ್ಲಿ ಕೊವಿಡ್ ಸೋಂಕಿ (Covid 19) ಗೆ ಒಳಗಾಗಿ ನಂತರ ಗುಣಮುಖರಾಗಿದ್ದರು. ಆದರೆ ಬರಬರುತ್ತ ಅವರ ಕೈಕಾಲುಗಳು ತುಂಬ ದುರ್ಬಲವಾದವು. ಮಾತು ಕೂಡ ಸರಿಯಾಗಿ ಆಡಲು ಸಾಧ್ಯವಾಗುತ್ತಿರಲಿಲ್ಲ. ನಂತರ ಮಿದುಳಿ (Brain)ನ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಗಂಟಾದ ರಚನೆಗಳು ಕಂಡುಬಂತು. ಅದಕ್ಕಾಗಿ ಔಷಧಗಳನ್ನು ನೀಡಲಾಯಿತಾದರೂ ರೋಗಿ ಚೇತರಿಸಿಕೊಂಡಿಲ್ಲ. ನಂತರ ಅದನ್ನು ಸರ್ಜರಿ ಮೂಲಕ ತೆಗೆಯಬೇಕಾಯಿತು. ಹಾಗೆ, ಶಸ್ತ್ರಚಿಕಿತ್ಸೆ ಮಾಡಿದಾಗಲೇ ಆ ವ್ಯಕ್ತಿಯ ಮಿದುಳಲ್ಲಿ ಬಿಳಿ ಶಿಲೀಂದ್ರ ಇದ್ದಿದ್ದು ಗೊತ್ತಾಯಿತು. ಈ ವೈಟ್ ಫಂಗಸ್ (White Fungus) ಕಾರಣದಿಂದಲೇ ಅಲ್ಲಿ ಬಾವು ಬಂದು, ಗಂಟುಗಂಟಾಗಿತ್ತು ಎಂದು ಹೈದರಾಬಾದ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಅಂದಹಾಗೆ ಈ ವ್ಯಕ್ತಿಗೆ ಸರ್ಜರಿ ಮಾಡಿದ್ದು ಹೈದರಾಬಾದ್ನ ಸನ್ಶೈನ್ ಆಸ್ಪತ್ರೆಯ ವೈದ್ಯ ಡಾ. ಪಿ.ರಂಗನಾಥಂ. ಇವರು ಹಿರಿಯ ನರತಜ್ಞರಾಗಿದ್ದಾರೆ. ಬಿಳಿ ಫಂಗಸ್ ತುಂಬ ಅಪರೂಪ. ಇದು ಮಿದುಳು ಪ್ರವೇಶಿಸಿ, ಅಲ್ಲಿ ತೊಂದರೆ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಡಯಾಬಿಟಿಸ್ ಇದ್ದವರಿಗೆ ಕೊವಿಡ್ 19 ಬಂದು ನಂತರ ಗುಣಮುಖರಾದಾಗ ಅಂಥವರಲ್ಲಿ ಫಂಗಲ್ ಸೋಂಕು ಕಾಣಿಸಿಕೊಳ್ಳುತ್ತದೆ. ಆದರೆ ಈಗ ವೈಟ್ ಫಂಗಸ್ ಪತ್ತೆಯಾದ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇರಲಿಲ್ಲ. ಅದರಲ್ಲೂ ರೋಗಿಯಲ್ಲಿ ಬಿಳಿ ಫಂಗಸ್ ಹೇಗೆ ಮಿದುಳಿಗೆ ತಗುಲಿತು ಎಂಬುದು ಗೊತ್ತಾಗಿಲ್ಲ. ಕಪ್ಪು ಶಿಲೀಂದ್ರ ಮೂಗಿನ ನಾಳದ ಮೂಲಕ ಮಿದುಳು ಸೇರುತ್ತದೆ. ಆದರೆ ಈ ವ್ಯಕ್ತಿಯ ಪರಾನಾಸಲ್ ಸೈನಸ್ನಗಳ ಮೂಲಕ ಬಿಳಿ ಶಿಲೀಂದ್ರ ವರ್ಗಾವಣೆಯಾಗಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ವೈದ್ಯ ರಂಗನಾಥಂ ಮಾಹಿತಿ ನೀಡಿದ್ದಾರೆ.
ಕೊವಿಡ್ 19ನಿಂದ ಈ ವ್ಯಕ್ತಿ ಚೇತರಿಸಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಕೈಕಾಲುಗಳೆಲ್ಲ ತುಂಬ ದುರ್ಬಲ ಆಗಲು ಶುರುವಾಯಿತು. ಮಾತನಾಡಲೂ ತೊದಲುತ್ತಿದ್ದರು. ಹೀಗೆ ಆಗಲು ಶುರುವಾಗಿ ಆರು ದಿನಗಳ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾರಂಭದಲ್ಲಿ ಅವರಿಗೆ ಹೆಮಟೋಮಾ ಚಿಕಿತ್ಸೆ ನೀಡಲಾಯಿತು. ಆದರೆ ಮತ್ತೊಮ್ಮೆ ಎಂಆರ್ಐ ಸ್ಕ್ಯಾನ್ ಮಾಡಿದಾಗ ಅದು ಹೆಮಟೋಮಾ ಅಲ್ಲವೆಂದು ಗೊತ್ತಾಗಿ, ಚಿಕಿತ್ಸೆ ನಿಲ್ಲಿಸಿದೆವು. ಅಷ್ಟೇ ಅಲ್ಲ, ಮಿದುಳಿನ ಒಳಗಿನ ಗಾಯ ಇನ್ನಷ್ಟು ದೊಡ್ಡಾಗಿ ಗೋಚವಾಯಿತು. ಶಸ್ತ್ರಚಿಕಿತ್ಸೆ ನಡೆಸಿದಾಗಲೇ ಅದು ಬಿಳಿ ಫಂಗಸ್ ಎಂಬುದು ಗೊತ್ತಾಯಿತು. ಮೃದುವಾದ ನೆಕ್ರೋಟಿಕ್ ವಸ್ತುಗಳಿಂದ ಸುತ್ತುವರಿದ ಬಾವು ಮಿದುಳಿನಿಂದ ಹೊರಗೆ ಎದ್ದುಬಂದಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಸಿಎಂ ಬೊಮ್ಮಾಯಿಗೆ ಸಿ.ಟಿ.ರವಿ ಮನವಿ
Raj Kundra: ‘ತಕ್ಷಣ ಬಿಡುಗಡೆ ಮಾಡಿ’ ಎಂದು ರಾಜ್ ಕುಂದ್ರಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್!
Published On - 12:38 pm, Sat, 7 August 21