ಹೈದರಾಬಾದ್: ಕನ್ನಡದ ಡಕೋಟ ಎಕ್ಸ್ಪ್ರೆಸ್ ಸಿನಿಮಾದಲ್ಲಿ ಒಂದು ಪುಟ್ಟ ಇಲಿ ಸುಂದರನ್ನ ಜೀವನದಲ್ಲಿ ಹೇಗೆ ಆಟ ಆಡಿದೆ ಎಂಬುವುದನ್ನು ನೋಡಿದ್ದೇವೆ. ಈಗ ಅದೇ ರೀತಿ ಇಲ್ಲೊಂದು ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ. ಗಣೇಶನ ವಾಹನ ಇಲಿ ಮಾಡಿದ ಚೇಷ್ಟೆಗೆ ಕಾರು ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 1 ಕೋಟಿ ನಷ್ಟವಾಗಿದೆ.
ಇದೇ ವರ್ಷದ ಫೆಬ್ರವರಿ 8 ರಂದು ಹೈದರಾಬಾದ್‌ನ ಮುಶೀರಾಬಾದ್‌ನಲ್ಲಿರುವ ಕಾರು ಸೇವಾ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾರುತಿ ನೆಕ್ಸಾ ಕಾರುಗಳ ಮಾರಾಟ ಮತ್ತು ಸೇವೆಗಳ ಬಗ್ಗೆ ವ್ಯವಹರಿಸುವ ಮಿತ್ರ ಮೋಟಾರ್ಸ್‌ನಲ್ಲಿ ಈ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮೂರು ಕಾರುಗಳು ಸುಟ್ಟುಹೋಗಿದ್ದವು ಮತ್ತು 1 ಕೋಟಿ ರೂ. ನಷ್ಟವಾಗಿತ್ತು. ಆದರೆ ಘಟನೆಗೆ ಕಾರಣವೇನು ಎಂಬುವುದು ಯಾರಿಗೂ ತಿಳಿದಿರಲಿಲ್ಲ. ಈಗ ಆರು ತಿಂಗಳ ಬಳಿಕ ಬೆಂಕಿಗೆ ಕಾರಣವಾದದ್ದು ಅಂತಿಮವಾಗಿ ಬೆಳಕಿಗೆ ಬಂದಿದೆ.