ದಿತ್ವಾ ಚಂಡಮಾರುತದ ಅಬ್ಬರ; ಭಾರೀ ಮಳೆಯಿಂದ ಚೆನ್ನೈ, ತಿರುವಲ್ಲೂರಿನಲ್ಲಿ ರೆಡ್ ಅಲರ್ಟ್

ದಿತ್ವಾ ಚಂಡಮಾರುತದ ಅಬ್ಬರದಿಂದ ತಿರುವಲ್ಲೂರು ಮತ್ತು ಚೆನ್ನೈಗೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ನಿರಂತರ ಮಳೆಯಿಂದಾಗಿ ಚೆನ್ನೈನ ವಿವಿಧ ಪ್ರದೇಶಗಳಲ್ಲಿ ನೀರು ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ನಾಳೆ (ಡಿಸೆಂಬರ್ 2) ಈ ಎರಡು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೊಣಕಾಲು ಆಳದ ನೀರಿನಲ್ಲಿ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ನಾಳೆ ರಜೆ ನೀಡಲಾಗಿದೆ.

ದಿತ್ವಾ ಚಂಡಮಾರುತದ ಅಬ್ಬರ; ಭಾರೀ ಮಳೆಯಿಂದ ಚೆನ್ನೈ, ತಿರುವಲ್ಲೂರಿನಲ್ಲಿ ರೆಡ್ ಅಲರ್ಟ್
Tamil Nadu Rains

Updated on: Dec 01, 2025 | 9:55 PM

ಚೆನ್ನೈ, ಡಿಸೆಂಬರ್ 1: ದಿತ್ವಾ ಚಂಡಮಾರುತದಿಂದ (Ditwah Cyclone) ತಮಿಳುನಾಡಿನ ಚೆನ್ನೈ ಮತ್ತು ತಿರುವಲ್ಲೂರುಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆಯಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ನಾಳೆ (ಡಿಸೆಂಬರ್ 2) ಚೆನ್ನೈ, ಚೆಂಗಲ್ಪಟ್ಟು, ಕಾಂಚಿಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಘೋಷಿಸಿದೆ.

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರಿನಲ್ಲಿ ಮಂಗಳವಾರ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ ಮತ್ತು ಹತ್ತಿರದ ಜಿಲ್ಲೆಗಳು ಮಂಗಳವಾರ ಮತ್ತೆ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಐಸಿಎಫ್ ರೈಲು ಮೇಲ್ಸೇತುವೆಯ ಬಳಿ ಬಲವಾದ ಗಾಳಿಯಿಂದ ದೊಡ್ಡ ಮರವೊಂದು ಬುಡಮೇಲಾಯಿತು ಮತ್ತು ಪಟ್ಟಲಂನಂತಹ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ವರದಿಯಾಗಿದೆ.

ಇದನ್ನೂ ಓದಿ: ಶ್ರೀಲಂಕಾ ಚಂಡಮಾರುತ; ಸಾವಿನ ಸಂಖ್ಯೆ 200ಕ್ಕೂ ಹೆಚ್ಚು; ಪಾಕಿಸ್ತಾನೀ ಸೇರಿ ವಿವಿಧ ದೇಶಗಳ ಜನರನ್ನು ರಕ್ಷಿಸಿದ ಭಾರತೀಯ ವಾಯುಪಡೆ

ನೈಋತ್ಯ ಬಂಗಾಳ ಕೊಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಉತ್ತರ ತಮಿಳುನಾಡು, ಪುದುಚೇರಿ ಕರಾವಳಿಗಳಲ್ಲಿ ಕಳೆದ 6 ಗಂಟೆಗಳಲ್ಲಿ ಗಂಟೆಗೆ 3 ಕಿ.ಮೀ ವೇಗದಲ್ಲಿ ವಾಯುಭಾರ ಕುಸಿತವು ನಿಧಾನವಾಗಿ ಉತ್ತರದ ಕಡೆಗೆ ಚಲಿಸಿದೆ. ಚೆನ್ನೈನಿಂದ ಸುಮಾರು 50 ಕಿ.ಮೀ, ಪುದುಚೇರಿ ಬಳಿ 140 ಕಿ.ಮೀ, ಕಡಲೂರಿನಿಂದ 160 ಕಿ.ಮೀ ಮತ್ತು ನೆಲ್ಲೂರು ಬಳಿ 170 ಕಿ.ಮೀ ದೂರದಲ್ಲಿ ಚಂಡಮಾರುತ ಚಲಿಸಿದೆ.


ಇದಲ್ಲದೆ, ಇಂದು ಸಂಜೆಯಿಂದ ರಾತ್ರಿಯವರೆಗೆ ಚೆನ್ನೈ ಮತ್ತು ತಿರುವಲ್ಲೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಮಳೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ನಾಳೆ ಚೆನ್ನೈ, ಚೆಂಗಲ್ಪಟ್ಟು, ಕಾಂಚಿಪುರಂ ಮತ್ತು ತಿರುವಲ್ಲೂರು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:51 pm, Mon, 1 December 25