ನಿಮಗೆ ಕೆಂಪು ಬೆಂಡೆ ಗೊತ್ತಾ?-ಆರೋಗ್ಯಕ್ಕೆ ತುಂಬ ಒಳ್ಳೆಯದಾದ ಈ ತರಕಾರಿ ಬೆಲೆ ಕಡಿಮೆ ಅಲ್ಲ !

| Updated By: Lakshmi Hegde

Updated on: Sep 06, 2021 | 4:47 PM

Red Okra: ಹಸಿರು ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಈ ಕೆಂಪು ಬೆಂಡೆ ಮತ್ತೂ ಒಳ್ಳೆಯದು ಎನ್ನುತ್ತಾರೆ ಮಿಸ್ರಿಲಾಲ್ ರಜಪೂತ್.

ನಿಮಗೆ ಕೆಂಪು ಬೆಂಡೆ ಗೊತ್ತಾ?-ಆರೋಗ್ಯಕ್ಕೆ ತುಂಬ ಒಳ್ಳೆಯದಾದ ಈ ತರಕಾರಿ ಬೆಲೆ ಕಡಿಮೆ ಅಲ್ಲ !
ಕೆಂಪು ಬೆಂಡೆ
Follow us on

ಬೆಂಡೆಕಾಯಿ (LadyFinger) ಎಂದಾಕ್ಷಣ ಹಸಿರು ಬಣ್ಣದಲ್ಲಿ ಇರುತ್ತದೆ ಎಂದು ನಮ್ಮ ಅನಿಸಿಕೆ. ಆದರೆ ಮಧ್ಯಪ್ರದೇಶ (Madhya Pradesh) ದ ರೈತರೊಬ್ಬರು ಕೆಂಪು ಬೆಂಡೆಕಾಯಿ (Red Ladyfinger, Kashi Lalima) ಬೆಳೆಯುತ್ತಿದ್ದಾರೆ. ಭೋಪಾಲ್​ನ ಖಜೂರಿ ಕಲಾನ್ ಪ್ರದೇಶದ ಮಿಸ್ರಿಲಾಲ್​ ರಜಪೂತ್​ ತೋಟವೀಗ ಕೆಂಪು ಬೆಂಡೆಯ ಮೂಲಕ ಜನರ ಆಕರ್ಷಣೆಯ ಕೇಂದ್ರವಾಗಿದೆ. ತೋಟದಲ್ಲಿ ಕೆಂಪು ಬೆಂಡೆ ಬೀಜಗಳನ್ನು ಹಾಕಿದ್ದ ಮಿಸ್ರಿಲಾಲ್​ ಕೇವಲ 40ದಿನಗಳಲ್ಲಿ ಗಿಡ ಬೆಳೆದು, ಕಾಯಿಯೂ ಬಿಟ್ಟಿದೆ ಎಂದು ತಿಳಿಸಿದ್ದಾರೆ.

ಆರೋಗ್ಯಕ್ಕೆ ತುಂಬ ಒಳ್ಳೆಯದು
ಹಸಿರು ಬೆಂಡೆಕಾಯಿ ಕೂಡ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಈ ಕೆಂಪು ಬೆಂಡೆ ಮತ್ತೂ ಒಳ್ಳೆಯದು ಎನ್ನುತ್ತಾರೆ ಮಿಸ್ರಿಲಾಲ್ ರಜಪೂತ್. ಹಸಿರು ಬೆಂಡೆಕಾಯಿಯಲ್ಲಿ ಇರುವುದಕ್ಕಿಂತಲೂ ಜಾಸ್ತಿ ಪೌಷ್ಟಿಕಾಂಶ ಕೆಂಪು ಬೆಂಡೆಯಲ್ಲಿ ಇದೆ. ಅದರಲ್ಲೂ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಕಾಯಿಲೆ, ಡಯಾಬಿಟಿಸ್​, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಂಪು ಬೆಂಡೆಕಾಯಿ ಹೇಳಿಮಾಡಿಸಿದ ತರಕಾರಿ ಎಂದು ಹೇಳಿದ್ದಾರೆ.

ಭರ್ಜರಿ ಬೆಲೆ
ಕೆಂಪು ಬೆಂಡೆಕಾಯಿ ಬೆಲೆ ಸ್ವಲ್ಪ ಜಾಸ್ತಿಯೇ ಇದೆ. ಮಿಸ್ರಿಲಾಲ್​ ರಜಪೂತ್ ಹೇಳುವ ಪ್ರಕಾರ ಅವರು 250 ಗ್ರಾಂ. ಕೆಂಪು ಬೆಂಡೆಯನ್ನು 75-80 ರೂಪಾಯಿಗೆ ಮಾರಾಟ ಮಾಡುತ್ತಾರೆ. ಹಾಗೇ, 500 ಗ್ರಾಂ.ಗೆ 300-400 ರೂ.ನಿಗದಿ ಮಾಡಿದ್ದಾರೆ. ಅಲ್ಲಿಗೆ 1 ಕೆಜಿ ಕೆಂಪುಬೆಂಡೆಯನ್ನು ಅವರ ಬಳಿ ಕೊಂಡರೆ 800 ರೂ. ನೀಡಬೇಕಾಗುತ್ತದೆ. ಮಾರುಕಟ್ಟೆ ಬೆಲೆ ಇರುವುದೇ ಹೀಗೆ ಎನ್ನುತ್ತಾರೆ ಮಿಸ್ರಿಲಾಲ್​. ತಾವು ಈ ಕೆಂಪು ಬೆಂಡೆ ಬೆಳೆಸಲು ಸ್ವಲ್ಪವೂ ವಿಷಕಾರಿ ಕ್ರಿಮಿ ನಾಶಕ ಬಳಸಲಿಲ್ಲ ಎಂದಿರುವ ಅವರು, ಒಂದು ಎಕರೆ ಜಾಗದಲ್ಲಿ ಕನಿಷ್ಠ 40-50 ಕ್ವಿಂಟಲ್​ ಮತ್ತು ಗರಿಷ್ಠ 70-80 ಕ್ವಿಂಟಲ್​ ಕೆಂಪು ಬೆಂಡೆ ಬೆಳೆಯಬಹುದು ಎಂದು ತಿಳಿಸಿದ್ದಾರೆ.

ಬೀಜ ಕೊಂಡಿದ್ದು ಎಲ್ಲಿಂದ?
ತಾನು ಈ ಕೆಂಪು ಬೆಂಡೆಯ ಬೀಜವನ್ನು ವಾರಾಣಸಿಯ ಕೃಷಿ ಸಂಶೋಧನಾ ಸಂಸ್ಥೆ (ಇಂಡಿಯನ್​ ಇನ್​ಸ್ಟಿಟ್ಯೂಟ್ ಆಫ್​ ವೆಜಿಟೆಬಲ್​ ರಿಸರ್ಚ್​ ಸಂಸ್ಥೆ)ಯಿಂದ ಒಂದು ಕೆಜಿಯಷ್ಟು ತಂದಿದ್ದೆ ಎಂದು ರಜಪೂತ್ ತಿಳಿಸಿದ್ದಾರೆ. ಅಂದಹಾಗೆ ಈ ರಿಸರ್ಚ್ ಸಂಸ್ಥೆ ಭಾರತೀಯ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. 23 ವರ್ಷಗಳ ಸಂಶೋಧನೆ ನಂತರ 2019ರಲ್ಲಿ ಈ ಕೆಂಪು ಬೆಂಡೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಕಾಶಿ ಲಲಿಮಾ ಎಂದು ಅಧಿಕೃತವಾಗಿ ನಾಮಕರಣ ಮಾಡಿದೆ.

ಇದನ್ನೂ ಓದಿ: ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ; TOCIRA ಔಷಧ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ