ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು

| Updated By: ganapathi bhat

Updated on: Aug 14, 2021 | 1:06 PM

ವಿಡಿಯೋ ವೈರಲ್ ಆದ ಬಳಿಕ ಅವರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಅವರ ತನಿಖಾ ಮಾಹಿತಿಯಂತೆ ಸಿದ್ಧಾರ್ಥ್​ ನಗರದ ನಿವಾಸಿ ಪ್ರೇಮ್​ನಾಥ್ ಮಿಶ್ರಾರ ಮೃತದೇಹ ಇದಾಗಿದೆ.

ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು
ಕೊರೊನಾ ಸೋಂಕಿತನ ಮೃತದೇಹ
Follow us on

ಲಕ್ನೋ: ಕೊರೊನಾ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಕೊವಿಡ್-19 ಸೋಂಕಿನಿಂದ ಬಹಳಷ್ಟು ಸಾವು ನೋವು ಕೂಡ ಸಂಭವಿಸಿದೆ. ಕೊರೊನಾದಿಂದ ಮೃತಪಟ್ಟ ಮೃತದೇಹದ ಬಗ್ಗೆ ಜನರು ಭಯ, ಆತಂಕ ಹೊಂದಿರುವುದು ಅಥವಾ ಅದನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನೀಡದೇ ಇರುವುದು ಇಂಥಾ ಕೆಲವು ಘಟನೆಗಳು ಆಗಿದೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿತನ ಮೃತದೇಹವನ್ನು ಸಂಬಂಧಿಕರು ನದಿಗೆ ಎಸೆದಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಲರಾಮ್​ಪುರ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಆ ಮೂಲಕ ನದಿಗೆ ಎಸೆದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರದ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಮಾಹಿತಿ ಪಡೆದು ಭಾನುವಾರ ತನಿಖೆ ಆರಂಭಿಸಿದ್ಧಾರೆ.

ಇಲ್ಲಿನ ಮುಖ್ಯ ಆರೋಗ್ಯ ಅಧಿಕಾರಿ ಡಾ. ವಿಜಯ್ ಬಹದ್ದೂರ್ ಸಿಂಗ್ ಹೇಳಿರುವಂತೆ, ವಿಡಿಯೋ ವೈರಲ್ ಆದ ಬಳಿಕ ಅವರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಅವರ ತನಿಖಾ ಮಾಹಿತಿಯಂತೆ ಸಿದ್ಧಾರ್ಥ್​ ನಗರದ ನಿವಾಸಿ ಪ್ರೇಮ್​ನಾಥ್ ಮಿಶ್ರಾರ ಮೃತದೇಹ ಇದಾಗಿದೆ. ಮಿಶ್ರಾ, ಮೇ 25ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ, ಮೇ 28ರಂದು ಮೃತಪಟ್ಟಿದ್ದರು. ಕೊರೊನಾ ಮಾರ್ಗಸೂಚಿಗಳ ಅನುಸಾರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ. ಅಲ್ಲೇ ಸಮೀಪದಲ್ಲಿ ಕಾರ್​ನಲ್ಲಿದ್ದ ಸವಾರರೊಬ್ಬರು ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಕೊರೊನಾ ಸೋಂಕಿತನ ಮೃತದೇಹದ ಜೊತೆಗೆ ಇಬ್ಬರು ಇರುವುದು ಮತ್ತು ಪಿಪಿಇ ಕಿಟ್ ಧರಿಸಿರುವ ಒಬ್ಬಾತ ಮೃತದೇಹವನ್ನು ನದಿಗೆ ಎಸೆದಿರುವುದು 45 ಸೆಕೆಂಡ್​ಗಳ ವಿಡಿಯೋ ಕ್ಲಿಪ್​ನಲ್ಲಿ ಕಂಡುಬಂದಿದೆ.

ಈ ತಿಂಗಳ ಮೊದಲ ಭಾಗದಲ್ಲಿ ಗಂಗಾ ನದಿಯಲ್ಲಿ ನೂರಾರು ಮೃತದೇಹಗಳು ತೇಲಿಬಂದಿರುವುದು ಕಂಡುಬಂದಿತ್ತು. ಜೊತೆಗೆ, ಉತ್ತರ ಪ್ರದೇಶ ಹಾಗೂ ಬಿಹಾರದ ನದಿಯ ಮರಳು ಪ್ರದೇಶದಲ್ಲಿ ಸಾವಿರಾರು ಹೆಣಗಳನ್ನು ಸಂಸ್ಕಾರ ಮಾಡಿರುವುದು ಕಂಡುಬಂದಿತ್ತು. ಇವುಗಳಲ್ಲಿ ಹಲವು ಕೊವಿಡ್-19 ಸೋಂಕಿನಿಂದ ಮೃತಪಟ್ಟ ಜನರ ಮೃತದೇಹಗಳು ಎಂದು ಅಂದಾಜಿಸಲಾಗಿತ್ತು. ಈ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ: ಕೊರೊನಾಗೆ 13 ತಿಂಗಳ ಮಗು ಬಲಿ, ಆಕ್ಸಿಜನ್ ಕೊರತೆ ಕಾರಣವೆಂದು ಕಣ್ಣೀರಿಟ್ಟ ತಂದೆ

ಜೂನ್​ನಲ್ಲಿ 12 ಕೋಟಿ ಡೋಸ್​​ಗಳಷ್ಟು ಕೊರೊನಾ ಲಸಿಕೆ ಲಭ್ಯ; ಕೇಂದ್ರ ಸರ್ಕಾರದಿಂದ ಅಭಯ

Published On - 5:02 pm, Sun, 30 May 21