ರಿಲಯನ್ಸ್ ಆಸ್ಪತ್ರೆ ಮತ್ತು ಅಂಬಾನಿ ಕುಟುಂಬಕ್ಕೆ ಬಾಂಬ್ ಬೆದರಿಕೆ
ವ್ಯಕ್ತಿಯೊಬ್ಬರು ಆಸ್ಪತ್ರೆಯ ಸ್ಥಿರ ದೂರವಾಣಿ ಸಂಖ್ಯೆಗೆ ಮಧ್ಯಾಹ್ನ 12.57ಕ್ಕೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ...
ಮುಂಬೈ : ದಕ್ಷಿಣ ಮುಂಬೈನಲ್ಲಿರುವ ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ (Sir H N Reliance Foundation Hospital) ಆಸ್ಪತ್ರೆಗೆ ಬುಧವಾರ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರೆ ಮಾಡಿದವರು ಅಂಬಾನಿ ಕುಟುಂಬದ ಕೆಲವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ವ್ಯಕ್ತಿಯೊಬ್ಬರು ಆಸ್ಪತ್ರೆಯ ದೂರವಾಣಿ ಸಂಖ್ಯೆಗೆ ಮಧ್ಯಾಹ್ನ 12.57ಕ್ಕೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
A call was received on the landline number of Sir HN Reliance Foundation Hospital at 12.57pm today from an unknown number in which the caller threatened to blow up the Hospital and issued threats in name of some members of the Ambani family: Mumbai Police pic.twitter.com/6LwL14l27A
— ANI (@ANI) October 5, 2022
ಈ ವರ್ಷದ ಆಗಸ್ಟ್‌ನಲ್ಲಿ, ಆಭರಣ ವ್ಯಾಪಾರಿಯೊಬ್ಬರು ಆಸ್ಪತ್ರೆಗೆ ಕರೆ ಮಾಡಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಫೆಬ್ರವರಿ 2021 ರಲ್ಲಿ, ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸ ‘ಆಂಟಿಲಿಯಾ’ ಬಳಿ ಸ್ಫೋಟಕಗಳನ್ನು ಹೊತ್ತ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಪತ್ತೆಯಾಗಿದೆ. ನಂತರ, ಘಟನೆಗೆ ಸಂಬಂಧಿಸಿದಂತೆ ಅಂದಿನ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು.
ಇಂದು ಮುಂಬೈನ ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರ ಆಸ್ಪತ್ರೆ ಮತ್ತು “ಆಂಟಿಲಿಯಾ” ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
“ಇಂದು 12:57 ಕ್ಕೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಕರೆ ಮಾಡಲಾಗಿದೆ. ಕರೆ ಮಾಡಿದವರು ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಅಂಬಾನಿ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ಪತ್ರೆ ಮತ್ತು ಆಂಟಿಲಿಯಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ, ”ಎಂದು ಡಿಸಿಪಿ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅನಿಟಿಲಿಯಾ ಮತ್ತು ಆಸ್ಪತ್ರೆಯಲ್ಲಿ ವಿಧ್ವಂಸಕ ವಿರೋಧಿ ತಪಾಸಣೆ ನಡೆಸಲಾಗಿದೆ ಎಂದು ಅವರು ಹೇಳಿದರು.
“ಮುಂಬೈ ಪೊಲೀಸರು ಇಂತಹ ಘಟನೆಗಳ ಬಗ್ಗೆ ಗಂಭೀರವಾಗಿದ್ದಾರೆ. ಶೀಘ್ರದಲ್ಲೇ ಕರೆ ಮಾಡಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಕರೆ ವಿವರಗಳನ್ನು ವಿಶ್ಲೇಷಿಸುತ್ತಿದ್ದೇವೆ” ಎಂದು ಡಿಸಿಪಿ ನೀಲೋತ್ಪಾಲ್ ಹೇಳಿದರು.
ಇದೇ ಆಗಸ್ಟ್ 15 ರಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆ ಮಾಡಲಾಗಿತ್ತು. “ಆಗಸ್ಟ್‌ನಲ್ಲಿ ಆಸ್ಪತ್ರೆಯ ಸ್ಥಿರ ದೂರವಾಣಿ ಸಂಖ್ಯೆಗೆ ಬೆದರಿಕೆ ಕರೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಮುಂಬೈ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಆಸ್ಪತ್ರೆಯ ಡಿಸ್ಪ್ಲೇ ಸಂಖ್ಯೆಗೆ ಎಂಟು ಬೆದರಿಕೆ ಕರೆಗಳನ್ನು ಮಾಡಿದ್ದು, ಮುಖೇಶ್ ಅಂಬಾನಿ ಅವರ ಜೀವಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬೆದರಿಕೆ ಕರೆಗೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಮುಂಬೈನ ಪಶ್ಚಿಮ ಉಪನಗರದಲ್ಲಿ ಬಂಧಿಸಲಾಗಿತ್ತು
ಈ ಬಗ್ಗೆ ಹೇಳಿಕೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಕ್ತಾರರು“ಇಂದು ಮಧ್ಯಾಹ್ನ 12.57 ಕ್ಕೆ ಮತ್ತು ಸಂಜೆ 5.04 ಕ್ಕೆ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್‌ಗೆ ಕರೆ ಬಂದಿದ್ದು, ಆಸ್ಪತ್ರೆಯನ್ನು ಸ್ಫೋಟಿಸುವ ಬೆದರಿಕೆ ಮತ್ತು ಬೆದರಿಕೆ ಹಾಕಲಾಗಿದೆ. ಮುಖೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿಯವರ ಜೀವಕ್ಕೂ ಬೆದರಿಕೆಯೊಡ್ಡಿದ್ದಾರೆ. ಕರೆ ಮಾಡಿದವರು ಆಂಟಿಲಿಯಾವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರು, ಪೊಲೀಸ್ ದೂರು ದಾಖಲಿಸಲಾಗಿದೆ. ನಾವು ತನಿಖೆಗೆ ಸಹಕರಿಸುತ್ತೇವೆ ಎಂದಿದ್ದಾರೆ.
Published On - 7:56 pm, Wed, 5 October 22