ಇತ್ತೀಚೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವಷ್ಟು. ಪೆಟ್ರೋಲ್ ದರ ಏರಿಕೆ ಒಂದು ಕಡೆಯಾದರೆ, ತಂತ್ರಜ್ಞಾನ ಅಭಿವೃದ್ಧಿ ಆಗಿದ್ದು ಮತ್ತೊಂದು ಕಡೆ. ಮೊದಲೆಲ್ಲ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ತುಂಬಾನೇ ಸಮಯ ಹಿಡಿಯುತ್ತಿತ್ತು. ಆದರೆ, ಈಗ ಈ ಸಮಸ್ಯೆ ಇಲ್ಲ. ಚಾರ್ಜಿಂಗ್ ಸ್ಟೇಷನ್ಗಳು ಕೂಡ ಭಾರತದಲ್ಲಿ ಹೆಚ್ಚುತ್ತಿದೆ. ಈ ಕಾರಣಕ್ಕೆ ಎಲಾನ್ ಮಸ್ಕ್ ಟೆಸ್ಲಾ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರಿ ಕೂಡ ಬ್ಯಾಟರಿ ತಯಾರಿಕೆಗೆ ಮುಂದಾಗುವ ಸೂಚನೆ ನೀಡಿದೆ.
ಹಸಿರು ಇಂಧನಕ್ಕೆ ಹೆಚ್ಚು ಒತ್ತು ನೀಡುವ ಬಗ್ಗೆ ರಿಲಯನ್ಸ್ ಸಂಸ್ಥೆ ಸೂಚನೆ ನೀಡಿತ್ತು. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ರಿಲಯನ್ಸ್ ಸಂಸ್ಥೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹಸಿರು ಇಂಧನಕ್ಕೆ ಒತ್ತು ನೀಡಲಿದೆ ಎಂದು ಹೇಳಿತ್ತು. ಈ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ದೊಡ್ಡ ಯೋಜನೆಯನ್ನೇ ರೂಪಿಸುತ್ತಿದೆ ಎನ್ನಲಾಗಿದೆ.
ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವುದರ ಮೂಲಕ ಟೆಸ್ಲಾ ಕಂಪೆನಿಯ ಆದಾಯ ಹೆಚ್ಚುತ್ತಿದೆ. ಇದರ ಜತೆ ಟೆಸ್ಲಾ ಮಾಲೀಕ ಎಲಾನ್ ಮಸ್ಕ್, ಬ್ಯಾಟರಿ ಹಾಗೂ ಮತ್ತು ಸೌರ ಶಕ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ, ಅಂಬಾನಿ ಕೂಡ ಇದೇ ಮಾದರಿಯ ವ್ಯವಾಹರದಲ್ಲಿ ತೊಡಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಬ್ಯಾಟರಿ ತಯಾರಿಕೆಗೆ ಮುಂದಿನ 10 ವರ್ಷಗಳಲ್ಲಿ ರಿಲಯನ್ಸ್ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಒಟ್ಟೂ ಆದಾಯದಲ್ಲಿ, ಕಚ್ಚಾ ತೈಲದಿಂದ ರಿಲಯನ್ಸ್ಗೆ ಶೇ.60 ಆದಾಯ ಬರುತ್ತಿದೆ. ಆದರೆ, ಇದನ್ನು ಕಡಿಮೆ ಮಾಡಿ, ಹಸಿರು ಇಂಧನಕ್ಕೆ ಒತ್ತು ನೀಡುವುದು ರಿಲಯನ್ಸ್ ಉದ್ದೇಶ.
ಬಹುತೇಕ ಕಾರು ಹಾಗೂ ಬೈಕ್ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಸಿದ್ಧಪಡಿಸುತ್ತಿವೆ. ಜನರು ಕೂಡ ಎಲೆಕ್ಟ್ರಿನ್ ವಾಹನ ಖರೀದಿಗೆ ಒತ್ತು ನೀಡುತ್ತಿದ್ದಾರೆ. ಹೀಗಾಗಿ, ಮುಂದಿನ 10 ವರ್ಷಗಳಲ್ಲಿ ಪಟ್ರೋಲ್-ಡೀಸೆಲ್ ವಾಹನಗಳು ಕಡಿಮೆ ಆಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.