ಇನ್ಮುಂದೆ ಡಾರ್ಕ್ ಮೋಡ್ನಲ್ಲೂ ಲಭ್ಯ ಗೂಗಲ್ ಮ್ಯಾಪ್; ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ಸಿಂಪಲ್ ಆಗಿ ಸೆಟ್ಟಿಂಗ್ಸ್ ಬದಲಿಸಿಕೊಂಡರೆ ಆಯಿತು..
ಮೊದಲು ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ ಹೊಸ ಆವೃತ್ತಿಯ ಗೂಗಲ್ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಿ. ಈಗಾಗಲೇ ಡೌನ್ಲೋಡ್ ಮಾಡಿಕೊಂಡಿದ್ದರೆ ಅಪ್ಡೇಟ್ ಮಾಡಿಕೊಳ್ಳಬೇಕು.
ಅತಿ ಹೆಚ್ಚು ಬಳಕೆಯಲ್ಲಿರುವ ಆ್ಯಪ್ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ ಇದೀಗ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಡಾರ್ಕ್ ಮೋಡ್ನಲ್ಲೂ ಲಭ್ಯವಿದೆ. ಮ್ಯಾಪ್ಗೆ ಡಾರ್ಕ್ ಮೋಡ್ ಸೂಕ್ತವೇ ಎಂಬುದನ್ನು ಕಳೆದ ಸೆಪ್ಟೆಂಬರ್ನಿಂದಲೂ ಪರೀಕ್ಷೆ ಮಾಡುತ್ತಿತ್ತು. ಇದೀಗ ಅಂತಿಮವಾಗಿ ಮ್ಯಾಪ್ನ್ನು ಡಾರ್ಕ್ ಮೋಡ್ನಲ್ಲಿ ಅಭಿವೃದ್ಧಿಪಡಿಸಿದ್ದಾಗಿ ಮಂಗಳವಾರ ಗೂಗಲ್ ತಿಳಿಸಿದೆ.
ಗೂಗಲ್ ಮ್ಯಾಪ್ನ ಬಳಕೆ ಏನು? ಹೇಗೆ ಎಂಬುದನ್ನು ಹೊಸದಾಗಿ ಹೇಳುವುದು ಬೇಡ. ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಬ್ಬರೂ ಇದನ್ನ ಬಳಸುತ್ತಾರೆ. ಅಪರಿಚಿತ ಸ್ಥಳಗಳಿಗೆ ಹೋಗುವಾಗ ದಾರಿ ತೋರುವುದಷ್ಟೇ ಅಲ್ಲದೆ, ಆ ಪ್ರದೇಶದಲ್ಲಿ ಎಲ್ಲಿ ಹೋಟೆಲ್ಗಳಿವೆ? ರೆಸ್ಟೋರೆಂಟ್, ಪಾರ್ಕ್, ಲಾಡ್ಜ್ಗಳು ಎಲ್ಲಿವೆ ಎಂಬುದನ್ನೂ ತೋರಿಸುತ್ತದೆ. ಇದರ ಇನ್ನೂ ಒಂದು ಉಪಯೋಗವೆಂದರೆ ಆದಷ್ಟು ಶಾರ್ಟ್ಕಟ್ (ಸನಿಹದ ದಾರಿ)ನ್ನೇ ಮಾರ್ಗದರ್ಶನ ಮಾಡುತ್ತದೆ.
ಇದೀಗ ಗೂಗಲ್ ಮ್ಯಾಪ್ನ್ನು ಪರಿಷ್ಕರಿಸಲಾಗಿದ್ದು, ಅದರಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನೂ ನೀಡಲಾಗಿದೆ. ನಿಮ್ಮ ಮೊಬೈಲ್ನಲ್ಲೂ ಡಾರ್ಕ್ ಮೋಡ್ ಮ್ಯಾಪ್ ಬೇಕೆಂದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.:
- ಮೊದಲು ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ ಹೊಸ ಆವೃತ್ತಿಯ ಗೂಗಲ್ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಿ. ಈಗಾಗಲೇ ಡೌನ್ಲೋಡ್ ಮಾಡಿಕೊಂಡಿದ್ದರೆ ಅಪ್ಡೇಟ್ ಮಾಡಿಕೊಳ್ಳಬೇಕು.
- ನಂತರ ಬಲಬದಿಯಲ್ಲಿ ಕಾಣುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ ಸೆಟಿಂಗ್ಸ್ ಆಯ್ಕೆ ಬರುತ್ತದೆ. ಸೆಟಿಂಗ್ಸ್ ಮೇಲೆ ಕ್ಲಿಕ್ ಮಾಡಿದರೆ ಅದರಲ್ಲಿ ಥೀಮ್ಸ್ ಎಂಬ ಆಪ್ಷನ್ ಬರುತ್ತದೆ. ಅದರಲ್ಲಿ ಹೋಗಿ Always in Dark Themeನ್ನು ಟರ್ನ್ ಆನ್ ಮಾಡಬೇಕು. ಆಗ ನಿಮ್ಮ ಗೂಗಲ್ ಮ್ಯಾಪ್ ಡಾರ್ಕ್ ಮೋಡ್ಗೆ ಪರಿವರ್ತನೆಯಾಗುತ್ತದೆ.
- ಇಲ್ಲ, ಮೊದಲಿನಂತೇ ಲೈಟ್ ಮೋಡ್ ಇರಲಿ ಎಂದರೆ ಮತ್ತೆ ಇದೇ ಕ್ರಮ ಅನುಸರಿಸಿ ಹೋಗಿ, Always in light Theme ನ್ನು ಟರ್ನ್ ಆಫ್ ಮಾಡಿದರಾಯಿತು.
ಲೈಟ್ ಮೋಡ್ನಲ್ಲಿದ್ದಾಗ ಗೂಗಲ್ ಮ್ಯಾಪ್ ನೋಡಿಕೊಂಡು ವಾಹನ ಓಡಿಸುವುದರಿಂದ ಸಹಜವಾಗಿಯೇ ಕಣ್ಣಿಗೆ ಆಯಾಸ ಆಗುತ್ತದೆ. ಹಾಗಾಗಿ ಡಾರ್ಕ್ ಮೋಡ್ ಆಯ್ಕೆಯನ್ನು ತಂದಿದ್ದೇವೆ. ಶೀಘ್ರದಲ್ಲೇ ಜಗತ್ತಿನ ಎಲ್ಲ ಆ್ಯಂಡ್ರಾಯ್ಡ್ ಬಳಕೆದಾರರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಇದರಿಂದ ಕಣ್ಣಿಗೂ ಹಿತವಾಗಿರುತ್ತದೆ, ಮೊಬೈಲ್ನ ಬ್ಯಾಟರಿ ಚಾರ್ಜ್ ಕೂಡ ಉಳಿಯುತ್ತದೆ ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Published On - 6:41 pm, Thu, 25 February 21