ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ, 8 ಮಂದಿ ಬಂಧನ
Kerala RSS Worker Killed: ಕೇರಳದ ಆಲಪ್ಪುಳ ಜಲ್ಲೆಯ ವಯಲಾರ್ ನಗರದಲ್ಲಿ ಆರ್ಎಸ್ಎಸ್ ಮತ್ತು ಎಸ್ಡಿಪಿಐ (SDPI) ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ನಂದು ಕೃಷ್ಣ ಎಂಬ ವ್ಯಕ್ತಿಯ ಹತ್ಯೆಯಾಗಿದೆ.
ತಿರುವನಂತಪುರಂ: ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ( RSS) ಕಾರ್ಯಕರ್ತನ ಹತ್ಯೆಯಾಗಿದೆ. ಈ ಘಟನೆಯನ್ನು ಖಂಡಿಸಿ ಬಿಜೆಪಿ ಆಲಪ್ಪುಳ ಜಿಲ್ಲೆಯಲ್ಲಿ 12 ಗಂಟೆಗಳ ಕಾಲ ಬಂದ್ ಘೋಷಿಸಿದೆ. ಬುಧವಾರ ಸಂಜೆ ವಯಲಾರ್ ನಗರದಲ್ಲಿ ಆರ್ಎಸ್ಎಸ್ ಮತ್ತು ಎಸ್ಡಿಪಿಐ (SDPI) ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ನಂದು ಕೃಷ್ಣ ಎಂಬ ವ್ಯಕ್ತಿಯ ಹತ್ಯೆಯಾಗಿದೆ. ಈ ಪ್ರಕರಣದಲ್ಲಿ 8 ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಜಗಳದಲ್ಲಿ ನಂದು ಕೃಷ್ಣ (22)ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಎರಡೂ ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಲಾರ್ ಬಳಿ ಎರಡು ತಂಡಗಳ ನಡುವೆ ಜಗಳ ನಡೆದಿತ್ತು. ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ಆಯುಧಗಳಿಂದ ದಾಳಿ ನಡೆದಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ. ಈವರೆಗೆ 8 ಎಸ್ಡಿಪಿಐ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಭಯ ತಂಡಗಳ ನಡುವಿನ ವಾಗ್ವಾದವೇ ಜಗಳಕ್ಕೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ರಾಜಕೀಯ ಮೆರವಣಿಗೆ ವಿಷಯದಲ್ಲಿ ಈ ಜಗಳ ನಡೆದಿದೆ. ಬಿಜೆಪಿ ಮತ್ತು ಎಸ್ಡಿಪಿಐ ನಡುವೆ ಪರಸ್ಪರ ವಾಗ್ವಾದ ನಡೆದಿದ್ದು ಆಮೇಲೆ ಜಗಳ ನಡೆದಿದೆ ಎಂದು ಚೇರ್ತಲದ ಸಬ್ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಘಟನೆಯನ್ನು ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಈ ಕೃತ್ಯದ ಹಿಂದೆ ಪಿಎಫ್ ಐ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ನಂದು ಕೃಷ್ಣ ಹತ್ಯೆ ಪ್ರಕರಣವನ್ನು ಖಂಡಿಸಿದ ಕೇಂದ್ರ ಸಚಿವ ವಿ.ಮುರಳೀಧರನ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಒತ್ತಾಯಿಸಿದ್ದಾರೆ.
ಇದು ಒಂದು ಕಡೆಯಿಂದಾದ ದಾಳಿ. ಇದೇ ರೀತಿಯ ದಾಳಿ ನಡೆಯುವ ಸಾಧ್ಯತೆ ಇದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಇದಕ್ಕೆ ಕಾರಣ ಏನು ಎಂಬುದನ್ನು ರಾಜ್ಯ ಸರ್ಕಾರ ಹೇಳಬೇಕು. ಈ ಘಟನೆಯನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಮುರಳೀಧರನ್ ಹೇಳಿದ್ದಾರೆ.
ಇದು ಆರ್ಎಸ್ಎಸ್ನ ಪೂರ್ವಯೋಜಿತ ಕೃತ್ಯ ಎಂದು ಎಸ್ಡಿಪಿಐ ಆರೋಪಿಸಿದ್ದು, ಕೃಷ್ಣ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. ಚುನಾವಣೆಗೆ ಪೂರ್ವಭಾವಿಯಾಗಿ ಎಸ್ಡಿಪಿಐ ಪ್ರತಿ ಚುನಾವಣಾ ಕ್ಷೇತ್ರದಲ್ಲಿ ಮೆರವಣಿಗೆ ಆಯೋಜಿಸಿದೆ. ವಯಲಾರ್ ತಲುಪಿದಾಗ ಆರ್ಎಸ್ಎಸ್ ಕಾರ್ಯಕರ್ತರು ಮೆರವಣಿಗೆಗೆ ಅಡ್ಡಿಪಡಿಸಿದ್ದಾರೆ. ಎಸ್ಡಿಪಿಐ ಮೆರವಣಿಗೆ ಮುಂದುವರಿಸಿದಾಗ ಆಯುಧದಾರಿಗಳಾದ ಆರ್ಎಸ್ಎಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ನಾಲ್ವರು ಕಾರ್ಯಕರ್ತರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದುಎಸ್ಡಿಪಿಐ ಹೇಳಿಕೆ ನೀಡಿದೆ.
Kerala: Visuals from Cherthala town in Alappuzha district where BJP and some Hindu outfits have called for a dawn to dusk shutdown in protest against the killing of an RSS worker allegedly by SDPI workers. https://t.co/QsU216dFnr pic.twitter.com/6k4uwJhHMM
— ANI (@ANI) February 25, 2021
ಬಂದ್ಗೆ ಕರೆ ನೀಡಿದ ಬಿಜೆಪಿ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ಖಂಡಿಸಿ ಬುಧವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಇಲ್ಲಿನ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ ಆಚರಿಸುವಂತೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿ. ಗೋಪಕುಮಾರ್ ಆಹ್ವಾನ ನೀಡಿದ್ದರು. ಆಲಪ್ಪುಳದಲ್ಲಿ ಇಂದು ಯಾವುದೇ ವಾಹನಗಳು ರಸ್ತೆಗಿಳಿದಿಲ್ಲ, ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಪ್ರಸ್ತುತ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Rahul Gandhi at Kerala: ಕೇರಳದಲ್ಲಿ ರಾಹುಲ್ ಗಾಂಧಿ; ಮೀನುಗಾರರ ಒಡನಾಟ, ಮತಬೇಟೆಯ ಉತ್ಸಾಹ