ನಾಳೆ ಬೆಳಗ್ಗೆಯೊಳಗೆ ಮಾಳವಿಯಾನನ್ನು ಐಟಿ ಸೆಲ್​ನಿಂದ ಕಿತ್ತೊಗೆಯಿರಿ: ಸುಬ್ರಮಣಿಯನ್​ ಸ್ವಾಮಿ

  • Publish Date - 2:47 pm, Wed, 9 September 20
ನಾಳೆ ಬೆಳಗ್ಗೆಯೊಳಗೆ ಮಾಳವಿಯಾನನ್ನು ಐಟಿ ಸೆಲ್​ನಿಂದ ಕಿತ್ತೊಗೆಯಿರಿ: ಸುಬ್ರಮಣಿಯನ್​ ಸ್ವಾಮಿ

ಬೆಳಗ್ಗೆಯಷ್ಟೇ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಸಿಡಿದೆದ್ದಿದ್ದ ಹೆಸರಾಂತ ವಕೀಲ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್​ ಸ್ವಾಮಿ ಅವರು ಮತ್ತೊಂದು ಟ್ವೀಟ್ ಮೂಲಕ ಎನ್ಇಇಟಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪರ ಬ್ಯಾಟ್ ಬೀಸಿದ್ದಾರೆ. ಮೊದಲಿಗೆ ಅವರು ಮಾಳವಿಯಾ ಕುರಿತು ಮಾಡಿರುವ ಟ್ವೀಟ್ ನೋಡೋಣ.

‘‘ನಾಳೆ ಬೆಳಗ್ಗೆಯೊಳಗೆ ಅಮಿತ್ ಮಾಳವಿಯಾರನ್ನು ಬಿಜೆಪಿ ಐಟಿ ಸೆಲ್‌ನಿಂದ ಕಿತ್ತೊಗೆಯದಿದ್ದರೆ ಪಕ್ಷಕ್ಕೆ ನನ್ನನ್ನು ಸಮರ್ಥಿಸುವ ಇರಾದೆ ಇಲ್ಲವೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪಕ್ಷದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬೇರೆ ವೇದಿಕೆ ಇಲ್ಲದಿರುವುದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳಬೇಕಾಗಿದೆ.,’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮಾಳವಿಯಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಟ್ವೀಟ್ ಮಾಡಿದ್ದು ಅದರಲ್ಲಿ, ‘‘ಮಾಳವಿಯಾ ಅವರಿಂದಾಗಿ ಪಕ್ಷದ ಐಟಿ ಸೆಲ್ ಗಬ್ಬು ನಾರುತ್ತಿದೆ, ನಮ್ಮದು ಮರ್ಯಾದಾ ಪರುಷೋತ್ತಮ ರಾಮನ ಪಕ್ಷವೇ ಹೊರತು, ರಾವಣ ಅಥವಾ ದುಶ್ಶಾಸನನ ಪಕ್ಷವಲ್ಲ,’’ ಎಂದಿದ್ದಾರೆ.

ಎನ್ಇಇಟಿ ಪರೀಕ್ಷೆಯ ಬಗ್ಗೆ ಮಾಡಿರುವ ಟ್ವೀಟ್​ನಲ್ಲಿ ಸ್ವಾಮಿ, ವಿದ್ಯಾರ್ಥಿಗಳ ಪರ ಕೆ ಟಿ ಎಸ್ ತುಳ್ಸಿ ಅವರು ವಕಾಲತ್ತು ಮಾಡಲಿದ್ದು ಅವರೊಬ್ಬ ಅತ್ಯಂತ ಸಮರ್ಥ ವಕೀಲರಾಗಿದ್ದಾರೆ ಎಂದು ಹೇಳಿದ್ದಾರೆ.

‘‘ಇಂದು ಸರ್ವೋಚ್ಛ ನ್ಯಾಯಾಲಯ ಎನ್ಇಇಟಿ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ವಿದ್ಯಾರ್ಥಿಗಳ ಪರವಾಗಿ ಕೆ ಟಿ ಎಸ್ ತುಳ್ಸಿ ಅವರು ವಾದಿಸಲಿದ್ದಾರೆ. ಅವರು ನಿಸ್ಸಂದೇಹವಾಗಿಯೂ ಒಬ್ಬ ಅತ್ಯುತ್ತಮ ವಕೀಲ. 1990-91ರಲ್ಲಿ ನಾನು ಕಾನೂನು ಸಚಿವನಾಗಿದ್ದಾಗ ತುಳ್ಸಿಯವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಿದ್ದೆ. ಹೀಗಾಗಿ ವಿದ್ಯಾರ್ಥಿಗಳು ತಮಗೆ ಒಳ್ಳೆಯದಾಗುವ ಬಗ್ಗೆ ನಿರೀಕ್ಷೆಯಿಟ್ಟುಕೊಳ್ಳಬಹುದಾಗಿದೆ. ಆದರೆ, ಜೀವನದಲ್ಲಿ ನಾವಂದುಕೊಂಡಿರುವುದು ಸಂಭವಿಸುವವರೆಗೆ ಯಾವುದೂ ನಿಶ್ಚಿತವಲ್ಲ,’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಹಾಗೆಯೇ, ಇವತ್ತಿನ ಮತ್ತೊಂದು ಟ್ವೀಟ್​ನಲ್ಲಿ ಸ್ವಾಮಿ ಅವರು, ನಟಿ ಕಂಗನಾ ರನೌತ್ ಅವರಿಗೆ ಹೆದರದಿರುವಂತೆ ಹೇಳಿದ್ದಾರೆ. ‘‘ಕಂಗನಾ ವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ, ನಾವೆಲ್ಲ ಆಕೆಯ ಹೋರಾಟದಲ್ಲಿ ಜೊತೆಗಿದ್ದೇವೆ,’‘ ಎಂದು ಸ್ವಾಮಿ ಹೇಳಿದ್ದಾರೆ

Click on your DTH Provider to Add TV9 Kannada