ಮಸೀದಿಗಳ ಧ್ವನಿ ವರ್ಧಕ ಮೊದಲು ತೆಗೆಸಿ ಎಂದು ಆಗ್ರಹಿಸಿದ ರಾಜ್​ ಠಾಕ್ರೆ; ಹನುಮಾನ್ ಚಾಲೀಸಾ ಹಾಕುವ ಎಚ್ಚರಿಕೆ

ಮಸೀದಿಗಳ ಧ್ವನಿ ವರ್ಧಕ ಮೊದಲು ತೆಗೆಸಿ ಎಂದು ಆಗ್ರಹಿಸಿದ ರಾಜ್​ ಠಾಕ್ರೆ; ಹನುಮಾನ್ ಚಾಲೀಸಾ ಹಾಕುವ ಎಚ್ಚರಿಕೆ
ರಾಜ್​ ಠಾಕ್ರೆ

ಎನ್​ಸಿಪಿ ನಾಯಕ ಶರದ್​ ಪವಾರ್​ ಅವರನ್ನೂ ರಾಜ್​ ಠಾಕ್ರೆ ಟೀಕಿಸಿದ್ದಾರೆ.  ಶರದ್ ಪವಾರ್ ಜಾತೀಯತೆಯನ್ನು ಹೆಚ್ಚಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಜಾತಿ ಆಧಾರದಲ್ಲಿ ಜನರನ್ನು ವಿಭಜಿಸಿದ್ದೇ ಎನ್​ಸಿಪಿ ಎಂದು ಆರೋಪಿಸಿದ್ದಾರೆ.

TV9kannada Web Team

| Edited By: Lakshmi Hegde

Apr 03, 2022 | 9:44 AM

ಮಸೀದಿಗಳಲ್ಲಿ ಹಾಕುವ ಧ್ವನಿ ವರ್ಧಕಗಳನ್ನು (LoudSpeaker) ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್​ ಠಾಕ್ರೆಯವರು, ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ. ಶಿವಾಜಿ ಪಾರ್ಕ್​​ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾನು ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ ಅಥವಾ ಯಾವುದೇ ಧರ್ಮದ ವಿರೋಧಿಯೂ ಅಲ್ಲ. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಅಷ್ಟೆಲ್ಲ ದೊಡ್ಡದಾಗಿ ಯಾಕೆ ಇರಬೇಕು? ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ತೆಗೆಯದೆ ಇದ್ದರೆ, ನಾವು ಮಸೀದಿಯ ಹೊರಗೆ ಧ್ವನಿ ವರ್ಧಕ ಹಾಕಿ ಹನುಮಾನ್ ಚಾಲೀಸ್​ ಶ್ಲೋಕ ಹಾಕಬೇಕಾಗುತ್ತದೆ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಕೆಲವು ಮದರಾಸಗಳಲ್ಲಿ ಪಾಕಿಸ್ತಾನ ಮೂಲದವರಿದ್ದಾರೆ. ಅವರನ್ನೆಲ್ಲ ಒಂದಷ್ಟು ಜನ ಶಾಸಕರು ತಮ್ಮ ಮತ ಬ್ಯಾಂಕ್​​ಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಅಂಥ ಧಾರ್ಮಿಕ ಸೆಮಿನರಿಗಳ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸಬೇಕು  ಎಂದು ಪ್ರಧಾನಿ ಮೋದಿ ಬಳಿ ನಾನು ಮನವಿ ಮಾಡುತ್ತೇನೆ. ಯಾಕೆಂದರೆ ಮುಂಬೈ ಪೊಲೀಸರಿಗೆ ಅಲ್ಲೇನಾಗುತ್ತಿದೆ ಎಂಬುದು ಗೊತ್ತಿದ್ದೂ ಸುಮ್ಮನಿದ್ದಾರೆ. ಮುಸ್ಲಿಂ ಸೆಮಿನರಿಗಳಲ್ಲಿ ಇರುವ ಅದೆಷ್ಟೋ ಜನರಿಗೆ ಆಧಾರ್​ ಕಾರ್ಡ್​ಗಳೂ ಇಲ್ಲ. ಹಾಗಿದ್ದಾಗ್ಯೂ ಎಲ್ಲ ರೀತಿ ಸೌಕರ್ಯ ಪಡೆಯುತ್ತಿದ್ದಾರೆ. ಅವರಿಗೆಲ್ಲ ಒಂದಷ್ಟು ಶಾಸಕರು ಎಲ್ಲವನ್ನೂ ಕೊಡುತ್ತಿದ್ದಾರೆ ಎಂದೂ ಠಾಕ್ರೆ ಹೇಳಿದ್ದಾರೆ.

ಎನ್​ಸಿಪಿ ನಾಯಕ ಶರದ್​ ಪವಾರ್​ ಅವರನ್ನೂ ರಾಜ್​ ಠಾಕ್ರೆ ಟೀಕಿಸಿದ್ದಾರೆ.  ಶರದ್ ಪವಾರ್ ಜಾತೀಯತೆಯನ್ನು ಹೆಚ್ಚಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಜಾತಿ ಆಧಾರದಲ್ಲಿ ಜನರನ್ನು ವಿಭಜಿಸಿದ್ದೇ ಎನ್​ಸಿಪಿ. ಜಾತೀಯತೆ ರಾಜಕಾರಣವನ್ನು ನಾವು ಬಿಡದೆ ಇದ್ದರೆ ಹಿಂದು ಎನ್ನಿಸಿಕೊಳ್ಳಲು ಸಾಧ್ಯವೇ ಇಲ್ಲ  ಎಂದು ಹೇಳಿದ್ದಾರೆ. ಹಾಗೇ, ತಮ್ಮ ದೂರದ ಸೋದರಸಂಬಂಧಿಯೂ ಆಗಿರುವ ಮಹಾ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶಿವಸೇನೆ ಯಾರನ್ನೆಲ್ಲ ಮೊದಲು ವಿರೋಧಿಸಿತ್ತೋ, ಚುನಾವಣೆ ಸಂದರ್ಭದಲ್ಲಿ ಅವರೊಂದಿಗೇ ಮೈತ್ರಿ ಮಾಡಿಕೊಂಡು ಆಡಳಿತ ಹಿಡಿಯಿತು. ಈ ಮೂಲಕ ಮತದಾರರ ನಂಬಿಕೆಗೆ ಉದ್ಧವ್​ ಠಾಕ್ರೆ ದ್ರೋಹ ಎಸಗಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಶಾಸಕರಿಗೆ ಮುಂಬೈನಲ್ಲಿ ಮನೆ ಕೊಡುವುದಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದನ್ನು ವ್ಯಂಗ್ಯ ಮಾಡಿದ ರಾಜ್​ ಠಾಕ್ರೆ, ಮೊದಲು ಶಾಸಕರಿಗೆ ನೀಡಲಾಗುವ ಪಿಂಚಣಿಯನ್ನು ನಿಲ್ಲಿಸಬೇಕು. ಶಾಸಕರು ಎಷ್ಟು ಮಂದಿ ನಿಜಕ್ಕೂ ಜನರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ? ಹಾಗೂ ಒಮ್ಮೆ ಅವರಿಗೆ ಮನೆ ಕೊಡುತ್ತೀರಿ ಎಂದಾದರೆ, ಅವರಿಗೆ ಈಗಾಗಲೇ ನೀಡಿರುವ ಬಂಗಲೆಗಳನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಎಷ್ಟೊಂದು ಭಯಾನಕ ಅಧೀರನ ಲುಕ್; ಇಲ್ಲಿವೆ​‘ಕೆಜಿಎಫ್​ 2’ ನಟ ಸಂಜಯ್ ದತ್​ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada