ಹಲವು ವಿಶೇಷಗಳಿಂದ ಗಮನ ಸೆಳೆದ ಗಣರಾಜ್ಯೋತ್ಸವ! ಈ ಬಾರಿ ಏನೆಲ್ಲ ಇತ್ತು? ಇಲ್ಲಿದೆ ನೋಡಿ

Republic Day 2026: ನವದೆಹಲಿಯ ಕರ್ತವ್ಯಪಥದಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಈ ವರ್ಷ ವಂದೇ ಮಾತರಂನ 150ನೇ ವರ್ಷಾಚರಣೆ, ಆತ್ಮನಿರ್ಭರ ಭಾರತ ಥೀಮ್, ಆಪರೇಷನ್ ಸಿಂದೂರ್ ಪ್ರದರ್ಶನ ಮತ್ತು ಸೇನೆಯ ಆಧುನಿಕ ಶಕ್ತಿ ಪ್ರಮುಖ ಆಕರ್ಷಣೆಯಾಗಿತ್ತು. ಇನ್ನೂ ಏನೇನು ವಿಶೇಷಗಳಿದ್ದವು ಎಂಬ ಮಾಹಿತಿ ಇಲ್ಲಿದೆ.

ಹಲವು ವಿಶೇಷಗಳಿಂದ ಗಮನ ಸೆಳೆದ ಗಣರಾಜ್ಯೋತ್ಸವ! ಈ ಬಾರಿ ಏನೆಲ್ಲ ಇತ್ತು? ಇಲ್ಲಿದೆ ನೋಡಿ
ಗಣರಾಜ್ಯೋತ್ಸವ

Updated on: Jan 26, 2026 | 11:53 AM

ನವದೆಹಲಿ, ಜನವರಿ 26: ದೇಶದಾದ್ಯಂತ ಇಂದು 77ನೇ ಗಣರಾಜ್ಯೋತ್ಸವವನ್ನು (Republic Day 2026) ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯ ಕರ್ತವ್ಯಪಥ, ಬೆಂಗಳೂರಿನ ಮಾಣೆಕ್ ಶಾ ಮೈದಾನ ಸೇರಿದಂತೆ ನಾಡಿನಾದ್ಯಂತ ಗಣರಾಜ್ಯೋತ್ಸವ ದಿನನ ಆಚರಿಸಲಾಗಿದ್ದು, ಸಂಭ್ರಮ ಮುಗಿಲುಮುಟ್ಟಿದೆ. ಹಲವು ಕಾರಣಗಳಿಂದ ಈ ವರ್ಷದ ಗಣರಾಜ್ಯೋತ್ಸವ ವಿಶೇಷ ಮಹತ್ವವನ್ನೂ ಪಡೆದಿದೆ. ಹಾಗಾದರೆ, ಈ ಬಾರಿಯ ಗಣತಂತ್ರ ದಿವಸನದ ವಿಶೇಷಗಳೇನು? ಇಲ್ಲಿದೆ ಮಾಹಿತಿ.

  1. ಈ ವರ್ಷದ ಪ್ರಮುಖ ಆಕರ್ಷಣೆ ಎಂದರೆ ಬಂಕಿಮಚಂದ್ರ ಚಟರ್ಜಿ (ಬಂಕಿಮಚಂದ್ರ ಚಟ್ಟೋಪಾಧ್ಯಾಯ) ರಚಿಸಿದ ‘ವಂದೇ ಮಾತರಂ’ನ 150ನೇ ವರ್ಷಾಚರಣೆ. ಈ ಸಂಭ್ರಮವನ್ನು ವರ್ಷಪೂರ್ತಿ ಆಚರಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2025 ರ ನವೆಂಬರ್ 7 ರಂದು ಕರೆ ನೀಡಿದ್ದರು.
  2. ಸಮೃದ್ಧಿ ಕಾ ಮಂತ್ರ್- ಆತ್ಮನಿರ್ಭರ ಭಾರತ: ರಾಷ್ಟ್ರದ ಸ್ವಾವಲಂಬನೆ ಮತ್ತು ಕಳೆದ ವರ್ಷದ ಸಾಧನೆಗಳನ್ನು ಈ ಥೀಮ್ ಪ್ರತಿಬಿಂಬಿಸುತ್ತದೆ.
  3. ಆಪರೇಷನ್ ಸಿಂದೂರ್ ಮತ್ತು ಮಿಷನ್ ಸುದರ್ಶನ ಚಕ್ರ: ಭಯೋತ್ಪಾದನೆಯ ವಿರುದ್ಧ ಭಾರತದ ದಿಟ್ಟ ಪ್ರತಿಕ್ರಿಯೆಯನ್ನು ಪರೇಡ್​​ನ ಈ ಥೀಮ್ ಮೂಲಕ ಎತ್ತಿ ತೋರಿಸಲಾಯಿತು. ವಿಶೇಷವಾಗಿ 2025ರ ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ ‘ಆಪರೇಷನ್ ಸಿಂದೂರ್’ ಥೀಮ್ ಪ್ರದರ್ಶಿಸುತ್ತಿರುವುದು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ವಿಶೇಷ.
  4. ಭಾರತೀಯ ಸೇನೆಯು ಆಧುನಿಕ ಯುದ್ಧ ಸನ್ನದ್ಧ ಮತ್ತು ರಕ್ಷಣಾ ಸಾಮರ್ಥ್ಯವನ್ನು ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾಯಿತು.
  5. ಪ್ಯಾರಾಶೂಟ್ ರೆಜಿಮೆಂಟ್, ಬ್ರಿಗೇಡ್ ಆಫ್ ದಿ ಗಾರ್ಡ್ಸ್ ಮತ್ತು ರಜಪೂತಾನ ರೈಫಲ್ಸ್‌ನ 75 ಸಂಗೀತಗಾರರ ತಂಡವು ಲತಾ ಮಂಗೇಶ್ಕರ್ ಅವರು ಹಾಡಿರುವ ‘ವಂದೇ ಮಾತರಂ’ ಆವೃತ್ತಿಯನ್ನು ನುಡಿಸಿತು.
  6. ‘ಆಯುಷ್ ಕಾ ತಂತ್ರ, ಸ್ವಾಸ್ಥ್ಯ ಕಾ ಮಂತ್ರ’ ಎಂಬ ವಿಷಯದ ಅಡಿಯಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿ ಪ್ರದರ್ಶನ.
  7. ಎಐ, ನವೀಕರಿಸಬಹುದಾದ ಇಂಧನ ಮತ್ತು ಸೆಮಿಕಂಡಕ್ಟರ್‌ಗಳಂತಹ ಭವಿಷ್ಯದ ಕ್ಷೇತ್ರಗಳ ಮೇಲೆ ಗಮನ ಹರಿಸಿದ ಟ್ಯಾಬ್ಲೋಗಳು.
  8. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಭಾರತದ ಮೊದಲ ಡಿಜಿಟಲ್ ವಸ್ತುಸಂಗ್ರಹಾಲಯವನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ.
  9. ಬಿಎಸ್​​ಎಫ್​​ನ ವಿಶ್ವದ ಏಕೈಕ ಒಂಟೆ ಸವಾರರ ಬ್ಯಾಂಡ್ ತಂಡವು ಈ ಮೆರವಣಿಗೆಯಲ್ಲಿ ಭಾಗವಹಿಸಿದೆ.
  10. ಭಾರತ್ ಪರ್ವ ಕಾರ್ಯಕ್ರಮ: ವಿವಿಧ ರಾಜ್ಯಗಳ ಆಹಾರ, ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ.
  11. ವೀರ್ ಗಾಥಾ 5.0: ದೇಶಾದ್ಯಂತ 1.92 ಕೋಟಿ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ 100 ವಿಜೇತ ವಿದ್ಯಾರ್ಥಿಗಳನ್ನು ಕರ್ತವ್ಯ ಪಥದಲ್ಲಿ ಗೌರವಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ