ಗಣರಾಜ್ಯೋತ್ಸವದಂದು ಕೆಂಪುಕೋಟೆ ದಾಳಿ ಪ್ರಕರಣ: ಖಡ್ಗ ಝಳಪಿಸಿ ಕುಣಿದ ಪ್ರತಿಭಟನಾಕಾರನ ಬಂಧನ

|

Updated on: Feb 17, 2021 | 12:45 PM

Republic Day Violence: ಕೆಂಪುಕೋಟೆಯಲ್ಲಿ ಎರಡು ಖಡ್ಗಗಳನ್ನು ಝಳಪಿಸಿದ ವ್ಯಕ್ತಿ ಮನಿಂದರ್ ಸಿಂಗ್ ಅವರನ್ನು ಸಿಆರ್​ಪಿಸಿ 41.1 ಸೆಕ್ಷನ್ ಅಡಿಯಲ್ಲಿ ಮಂಗಳವಾರ ಸಂಜೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಗಣರಾಜ್ಯೋತ್ಸವದಂದು ಕೆಂಪುಕೋಟೆ ದಾಳಿ ಪ್ರಕರಣ: ಖಡ್ಗ ಝಳಪಿಸಿ ಕುಣಿದ ಪ್ರತಿಭಟನಾಕಾರನ ಬಂಧನ
ಮನಿಂದರ್ ಸಿಂಗ್
Follow us on

ನವದೆಹಲಿ: ಗಣರಾಜ್ಯೋತ್ಸವದಂದು ಕೆಂಪುಕೋಟೆ ಬಳಿ ನಡೆದ ಗಲಭೆ ಪ್ರಕರಣದಲ್ಲಿ ಮೋಸ್ಟ್ ವಾಟೆಂಡ್ ವ್ಯಕ್ತಿ ಮನಿಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸ್ ವಿಶೇಷ ತಂಡ ಬಂಧಿಸಿದೆ. ಕಾರುಗಳ ಎಸಿ ಮೆಕ್ಯಾನಿಕ್ ಆಗಿರುವ 30ರ ಹರೆಯದ ಮನಿಂದರ್ ಸಿಂಗ್ ಅವರನ್ನು ಸಿಆರ್​ಪಿಸಿ 41.1 ಸೆಕ್ಷನ್ ಅಡಿಯಲ್ಲಿ ಮಂಗಳವಾರ ಸಂಜೆ 7.45ಕ್ಕೆ ಸಿಡಿ ಬ್ಲಾಕ್ ಪಿತಾಂಪುರದ ಬಸ್ ಸ್ಟಾಪ್ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ವರೂಪ್ ನಗರದಲ್ಲಿರುವ ಈತನ ಮನೆಯಿಂದ 4.3 ಅಡಿ ಉದ್ದದ ಎರಡು ಖಡ್ಗವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನವರಿ 26ರಂದು ಕೆಂಪುಕೋಟೆಯಲ್ಲಿ ಖಡ್ಗ ಝಳಪಿಸುತ್ತಿರುವ ವಿಡಿಯೊ, ಸಿಂಗು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಫೋಟೊಗಳು ಈತನ ಫೋನ್​ನಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.

‘ಕೆಂಪುಕೋಟೆಯಲ್ಲಿ ಎರಡು ಖಡ್ಗಗಳನ್ನು ಝಳಪಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವರು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ದಾಳಿ ನಡೆಸಿ 2021ರ ಗಣರಾಜ್ಯೋತ್ಸವದಂದು ಐತಿಹಾಸಿಕ ಸ್ಮಾರಕವಾದ ಕೆಂಪುಕೋಟೆಗೆ ಹಾನಿಯುಂಟುಮಾಡಿದ್ದಾರೆ’ ಎಂದು ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಫೇಸ್​ಬುಕ್​ನಲ್ಲಿ ವಿವಿಧ ಗುಂಪುಗಳ ಪ್ರಚೋದನಾಕಾರಿ ಪೋಸ್ಟ್ ನೋಡಿ ನಾನು ಕೆರಳಿದ್ದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಸಿಂಗು ಗಡಿಭಾಗಕ್ಕೆ ಆಗಾಗ ತೆರಳುತ್ತಿದ್ದ ಮನಿಂದರ್ ಅಲ್ಲಿನ ನಾಯಕರ ಭಾಷಣದಿಂದ ಪ್ರೇರಣೆ ಪಡೆದಿದ್ದರು.

 ಇದನ್ನೂ ಓದಿ:  ಕೆಂಪುಕೋಟೆ ದಾಳಿ: ಕೆಲವು ದಿನಗಳ ಕಾಲ ಪ್ರವೇಶಕ್ಕೆ ನಿರ್ಬಂಧ, 500ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ಅಮಾನತು

ಮನಿಂದರ್, ಸ್ವರೂಪ್ ನಗರ ಪ್ರದೇಶದಲ್ಲಿರುವ ನೆರೆಹೊರೆಯ 6 ವ್ಯಕ್ತಿಗಳಿಗೂ ಪ್ರಚೋದನೆ ನೀಡಿದ್ದರು. ಈ ಆರು ಮಂದಿ ಟ್ರಾಕ್ಟರ್ ಮೆರವಣಿಗೆ ನಡೆಯುತ್ತಿದ್ದಾಗ ಬೈಕ್​ನಲ್ಲಿ ಸಿಂಗು ಗಡಿಯಿಂದ ಮುಕರ್ಬಾ ಚೌಕ್ ಗೆ ಸಂಚರಿಸಿದ್ದರು. ಟ್ರ್ಯಾಕ್ಟರ್ ಮೆರವಣಿಗೆಗೆ ಮುನ್ನ ಮನಿಂದರ್ ಸಿಂಗ್ ತಮ್ಮ ಬಳಿ ಎರಡು ಖಡ್ಗಗಳನ್ನಿರಿಸಿಕೊಂಡಿದ್ದರು. ಅವರ ಯೋಜನೆ ಪ್ರಕಾರ ಆರೋಪಿ, ಆತನ ಐವರು ಸಹಚರರು ಮತ್ತು ಆಯುಧದಾರಿಗಳಾದ ದುಷ್ಕರ್ಮಿಗಳು ಕೆಂಪುಕೋಟೆಗೆ ನುಗ್ಗಿದ್ದರು. ಅಲ್ಲಿ ಮನಿಂದರ್ ಖಡ್ಗ ಹಿಡಿದು ಕುಣಿದಿದ್ದರು. ಅವರ ಈ ಕುಣಿತ ಕೆಂಪುಕೋಟೆ ಗಲಭೆಗೆ ಪ್ರಚೋದನೆ ನೀಡಿತು. ಮನಿಂದರ್ ಅವರು ಸ್ವರೂಪ್ ನಗರದಲ್ಲಿರುವ ಮನೆ ಸಮೀಪದ ಖಾಲಿ ಜಾಗದಲ್ಲಿ ಕತ್ತಿವರಸೆ ತರಬೇತಿ ಶಾಲೆಯನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Published On - 12:44 pm, Wed, 17 February 21