ಕೆಂಪುಕೋಟೆ ಗಲಭೆ ಪ್ರಕರಣ; ಇನ್ನೋರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2021 | 9:49 PM

Republic Day Violence: ಫೆಬ್ರವರಿ 20ರಂದು ಗಣರಾಜ್ಯೋತ್ಸವದಂದು ಕೆಂಪುಕೋಟೆಯ ಆವರಣದಲ್ಲಿ ಗಲಭೆಗೆ ಕಾರಣವಾದ 20 ಜನರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದ ದೆಹಲಿ ಪೊಲೀಸರು, ಅವರ ಬಂಧನಕ್ಕಾಗಿ ವಿಶೇಷ ಬಲೆ ಹೆಣೆದಿದ್ದರು. 

ಕೆಂಪುಕೋಟೆ ಗಲಭೆ ಪ್ರಕರಣ; ಇನ್ನೋರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ಅನ್ಯಧ್ವಜ ಹಾರಾಡಿಸಿದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದಾರೆ.
Follow us on

ದೆಹಲಿ: ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ಅನ್ಯಧ್ವಜ ಹಾರಿಸಿದ ಆರೋಪ ಮತ್ತು ಗಲಭೆ ಪ್ರಕರಣದಡಿ (Republic Day Violence 2021) ಜಸ್ಪ್ರೀತ್ ಸಿಂಗ್ ಎಂಬಾತನನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದ್ದಾರೆ. ಕೆಂಪುಕೋಟೆಯ ಗುಂಬಜ್ ಮೇಲೆ ಏರಿದ್ದ ಆರೋಪ ಹೊತ್ತಿರುವ ಜಸ್​ಪ್ರೀತ್ ಸಿಂಗ್ ಸ್ವರೂಪ್ ನಗರದ ನಿವಾಸಿಯಾಗಿದ್ದು ಸನ್ನಿ ಎಂಬ ಹೆಸರಲ್ಲೂ ಕರೆಯಲ್ಪಡುತ್ತಿದ್ದ ಎಂದು ತಿಳಿದುಬಂದಿದೆ.

ಫೆಬ್ರವರಿ 20ರಂದು ಗಣರಾಜ್ಯೋತ್ಸವದಂದು ಕೆಂಪುಕೋಟೆಯ ಆವರಣದಲ್ಲಿ ಗಲಭೆಗೆ ಕಾರಣವಾದ 20 ಜನರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದ ದೆಹಲಿ ಪೊಲೀಸರು, ಅವರ ಬಂಧನಕ್ಕಾಗಿ ವಿಶೇಷ ಬಲೆ ಹೆಣೆದಿದ್ದರು.

ಈ ಮೊದಲು ಮನೀಂದರ್ ಸಿಂಗ್ ಬಂಧನ
ಗಣರಾಜ್ಯೋತ್ಸವದಂದು ಕೆಂಪುಕೋಟೆ ಬಳಿ ನಡೆದ ಗಲಭೆ ಪ್ರಕರಣದಲ್ಲಿ ಮೋಸ್ಟ್ ವಾಟೆಂಡ್ ವ್ಯಕ್ತಿ ಮನಿಂದರ್ ಸಿಂಗ್ ಅವರನ್ನು ಕೆಲ ದಿನಗಳ ಹಿಂದೆ ದೆಹಲಿ ಪೊಲೀಸ್ ವಿಶೇಷ ತಂಡ ಬಂಧಿಸಿತ್ತು. ಕಾರುಗಳ ಎಸಿ ಮೆಕ್ಯಾನಿಕ್ ಆಗಿರುವ 30ರ ಹರೆಯದ ಮನಿಂದರ್ ಸಿಂಗ್ ಅವರನ್ನು ಸಿಆರ್​ಪಿಸಿ 41.1 ಸೆಕ್ಷನ್ ಅಡಿಯಲ್ಲಿ ಮಂಗಳವಾರ ಸಂಜೆ 7.45ಕ್ಕೆ ಸಿಡಿ ಬ್ಲಾಕ್ ಪಿತಾಂಪುರದ ಬಸ್ ಸ್ಟಾಪ್ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು. ಮನೀಂದರ್ ಸಿಂಗ್,​ ಮೋನಿ ಎಂಬ ನಾಮಧೇಯದಲ್ಲೂ ಕರೆಯಲ್ಪಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು.

ಸ್ವರೂಪ್ ನಗರದಲ್ಲಿರುವ ಈತನ ಮನೆಯಿಂದ 4.3 ಅಡಿ ಉದ್ದದ ಎರಡು ಖಡ್ಗವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನವರಿ 26ರಂದು ಕೆಂಪುಕೋಟೆಯಲ್ಲಿ ಖಡ್ಗ ಝಳಪಿಸುತ್ತಿರುವ ವಿಡಿಯೊ, ಸಿಂಗು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಫೋಟೊಗಳು ಈತನ ಫೋನ್​ನಲ್ಲಿತ್ತು ಎಂದು ಪೊಲೀಸರು ಹೇಳಿದ್ದರು.

ಷರತ್ತು ಮೀರಿ ಮೆರವಣಿಗೆ ನಡೆಸಿದ್ದರು ಎಂದಿದ್ದ ದೆಹಲಿ ಪೊಲೀಸರು
ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಱಲಿ ನಡೆಸುವಾಗ ನಡೆದ ವ್ಯಾಪಕ ಹಿಂಸಾಚಾರ, ದೊಂಬಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ‌‌ ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಹೇಳಿಕೆಯೊಂದನ್ನು ನೀಡಿದ್ದರು.

‘ಟ್ರ್ಯಾಕ್ಟರ್ ಮೆರವಣಿಗೆ ನಡೆಸುವ ಬಗ್ಗೆ ರೈತರೊಂದಿಗೆ 5 ಸುತ್ತಿನ ಮಾತುಕತೆ ನಡೆಸಲಾಗಿತ್ತು ಮತ್ತು ಹಲವು ಷರತ್ತುಗಳೊಂದಿಗೆ ಅವರಿಗೆ ಅನುಮತಿ ನೀಡಲಾಗಿತ್ತು. ಮಾತುಕತೆ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆಗೆ ಶುರುಮಾಡಿ ಸಾಯಂಕಾಲ 5 ಗಂಟೆಯೊಳಗೆ ಱಲಿ ಮುಗಿಸುವುದಾಗಿ ರೈತ ಮುಖಂಡರು ಭರವಸೆ ನೀಡಿದ್ದರು. ಈ ಮೆರವಣಿಗೆಯು ರೈತ ಮುಖಂಡರ ನೇತೃತ್ವದಲ್ಲಿ ನಡೆಸಬೇಕಿತ್ತು, ಕೇವಲ 5,000 ಟ್ರ್ಯಾಕ್ಟರ್​ಗಳನ್ನು ತರಲು ಮಾತ್ರ ಅವಕಾಶ ನೀಡಲಾಗಿತ್ತು ಹಾಗೂ ಯಾವುದೇ ತೆರನಾದ ಅಸ್ತ್ರಗಳನ್ನು ಜೊತೆಯಲ್ಲಿ ತಾರದಂತೆ ಎಚ್ಚರಿಸಲಾಗಿತ್ತು,’ ಎಂದು ಶ್ರೀವಾಸ್ತವ ಹೇಳಿದ್ದರು.

‘ನಮ್ಮ ಎಲ್ಲಾ ಷರತ್ತುಗಳಿಗೆ ರೈತ ಮುಖಂಡರು ಸಮ್ಮತಿಸಿದ್ದರು. ಆದರೆ ಅವುಗಳನ್ನು ಉಲ್ಲಂಘಿಸಿ ಟ್ರ್ಯಾಕ್ಟರ್ ಱಲಿ ನಡೆಸುವಾಗ ಬ್ಯಾರಿಕೇಡ್​ ಧ್ವಂಸಗೊಳಿಸಿದದರು. ಹಾಗಯೇ ಭಾಷಣ ಮಾಡುವುದಿಲ್ಲ ಅಂತ ಮಾತು ಕೊಟ್ಟವರು ಮಾತಿಗೆ ತಪ್ಪಿದರು. ಹಲವಾರು ರೈತ ಮುಖಂಡರು ಭಾಷಣ ಮಾಡಿದರು. 12ಕ್ಕೆ ಆರಂಭವಾಗಿದ್ದ ಱಲಿ ಬೆಳಗ್ಗೆ 8.30 ಕ್ಕೆ ಶುರುವಾಯಿತು. ರೈತರು ನಡೆಸಿದ ಹಿಂಸಾಚಾರದಲ್ಲಿ ಒಟ್ಟು 394 ಪೊಲೀಸರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರಿಗೆ ತೀವ್ರ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ,’ ಎಂದು ಶ್ರೀವಾಸ್ತವ ಹೇಳಿದ್ದರು.

ಅವರ ಹೇಳಿಕೆಗಳಲ್ಲಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದವು. ನಂತರದ ದಿನಗಳಲ್ಲಿ ನಟ,ಗಾಯಕ ದೀಪ್ ಸಿಧು ಸೇರಿದಂತೆ ಆರೋಪಿಗಳನ್ನು ತಮ್ಮ ಚಾಣಾಕ್ಷ ಜಾಲದ ಮೂಲಕ ದೆಹಲಿ ಪೊಲೀಸರು ಬಂಧಿಸಿದ್ದರು.

ಏನಿದು ಅನ್ಯಧ್ವಜ ಪ್ರಕರಣ?
ಕೆಂಪುಕೋಟೆ ಧ್ವಜಸ್ಥಂಬದ ಮೇಲೆ ಗಣರಾಜ್ಯೋತ್ಸವದಂದು ಮಧ್ಯಾಹ್ನ ಸಿಖ್​ ಹಾಗೂ ರೈತ ಧ್ವಜ ಹಾರಿಸಲಾಗಿತ್ತು. ಇದಾದ ಬೆನ್ನಲ್ಲೇ, ಗುಮ್ಮಟದ ಮೇಲೆ ರೈತರ ಧ್ವಜ ಹಾರಾಡಿತ್ತು. ನಂತರ ಮಾತನಾಡಿದ್ದ ರೈತ ನಾಯಕರು, ದೆಹಲಿ ಕೆಂಪುಕೋಟೆಯ ಮೇಲೆ ರೈತಧ್ವಜ ಹಾರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಂದೇಶವೊಂದನ್ನು ರವಾನಿಸುವ ತುಡಿತವಿತ್ತು. ಇದೀಗ ಅದು ಈಡೇರಿದೆ. ನಾವು ವಾಪಸ್​ ಮೊದಲಿದ್ದ ಸ್ಥಳಕ್ಕೆ ಹೋಗುತ್ತೇವೆ ಎಂದು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

ಹೇಳಿಕೆ ನೀಡಿದ ನಂತರ ಅಚ್ಚರಿ ಎಂಬಂತೆ ರೈತರು ಗುಮ್ಮಟದ ಕೆಳಭಾಗದಲ್ಲಿ ಮತ್ತೊಮ್ಮೆ ಬಾವುಟ ಹಾರಿಸಿದ್ದರು. ಪ್ರತಿಭಟನೆ ಕಾವು ತಣಿಯದ ಕಾರಣ, ಸನ್ನದ್ಧ ಸ್ಥಿತಿಯಲ್ಲಿರುವಂತೆ ಭದ್ರತಾ ಪಡೆಗಳಿಗೆ ಕೇಂದ್ರ ಗೃಹ ಇಲಾಖೆಯಿಂದ ಸೂಚನೆ ನೀಡಿತ್ತು. ಪರಿಸ್ಥಿತಿ ಕೈಮೀರಿದರೆ ಹೆಚ್ಚುವರಿ ಭದ್ರತೆ ಒದಗಿಸಲು ಸರ್ಕಾರ ಈ ಸಿದ್ಧತೆ ಮಾಡಿಕೊಂಡಿತ್ತು.

ಇನ್ನಷ್ಟು..

* ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ: ಮನ್ ಕೀ ಬಾತ್​ನಲ್ಲಿ ನರೇಂದ್ರ ಮೋದಿ ಬೇಸರ

* Deep Sidhu: ಬಂಧಿತ ದೀಪ್​ ಸಿಧು, ಇಕ್ಬಾಲ್​ ಸಿಂಗ್​​ರನ್ನು ಕೆಂಪುಕೋಟೆಗೆ ಕರೆದುಕೊಂಡು ಹೋದ ದೆಹಲಿ ಪೊಲೀಸರು