ದೆಹಲಿ: ಮೀಸಲಾತಿಯು ನಮ್ಮ ದೇಶದ ಐತಿಹಾಸಿಕ ಅಗತ್ಯ ಎಂದು ಹಲವು ಸಲ ಹೇಳಿದ್ದೇವೆ. ನಿರ್ದಿಷ್ಟ ಸಮುದಾಯವೊಂದು ಅಸಮಾನತೆ ಅನುಭವಿಸುತ್ತಿದ್ದರೆ ಅಂಥ ಸಮುದಾಯಗಳಿಗೆ ಮೀಸಲಾತಿ ಅಗತ್ಯವಾಗಿರುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಆರ್ಎಸ್ಎಸ್ನಲ್ಲಿ 2ನೇ ಸ್ಥಾನದಲ್ಲಿರುವ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ದೇಶದ ಹಿತ ಮತ್ತು ಅಭ್ಯುದಯಕ್ಕೆ ದಲಿತ ಸಮುದಾಯದ ಕೊಡುಗೆಯನ್ನು ಸ್ಮರಿಸದಿದ್ದರೆ ದೇಶದ ಇತಿಹಾಸವು ಅಪೂರ್ಣವಾಗುತ್ತದೆ. ದಲಿತರ ಕೊಡುಗೆಯನ್ನು ಪ್ರಸ್ತಾಪಿಸದಿದ್ದರೆ ದೇಶದ ರಾಜಕೀಯ, ಸಾಮಾಜಿಕ, ಆಧ್ಯಾತ್ಮ ಇತಿಹಾಸ ಅಪೂರ್ಣ, ಅಪ್ರಾಮಾಣಿಕ, ಅಸತ್ಯ ಆಗಲಿದೆ ಎಂದು ಅಭಿಪ್ರಾಯಪಟ್ಟರು. ವೈಯಕ್ತಿಕವಾಗಿ ನಾನು ಮೀಸಲಾತಿಯನ್ನು ಬೆಂಬಲಿಸುತ್ತೇನೆ. ನಮ್ಮ ಸಂಘಟನೆಯು ಮೀಸಲಾತಿಯನ್ನು ಬಲವಾಗಿ ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ಇತರ ಹಿಂದುಳಿದ ವರ್ಗಗಳ ಪಟ್ಟಿ (ಒಬಿಸಿ) ರೂಪಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಲು ಮುಂದಾಗಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತಿರದವರಾದ ದತ್ತಾತ್ರೇಯ ಹೊಸಬಾಳೆ ಅವರು ಮೀಸಲಾತಿ ಕುರಿತು ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
ಶಿವಮೊಗ್ಗ ಮೂಲದ ದತ್ತಾತ್ರೇಯ ಹೊಸಬಾಳೆ
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಸಬಾಳೆ ಊರಿನವರಾದ ಇವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೊಸಬಾಳೆ, ಇಂದಿರಾಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಜೈಲಿಗೆ ಹೋದರು. ಎಲ್.ಎಸ್. ಶೇಷಗಿರಿ ರಾವ್, ಪಿ. ಲಂಕೇಶ್ ಮತ್ತು ಕೀ.ರಂ. ನಾಗರಾಜ್ ಅವರಂಥವರಿಂದ ಕಲಿತ ಹೊಸಬಾಳೆ, ಇಂದಿಗೂ ಸಾಹಿತ್ಯ, ಮುಖ್ಯವಾಗಿ ಭಾರತೀಯ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯವನ್ನು ಓದುವ ಲವಲವಿಕೆ ತೋರಿಸುತ್ತಾರೆ.
1972 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದ ಹೊಸಬಾಳೆ 30 ವರ್ಷ ಆರ್ಎಸ್ಎಸ್ ಮತ್ತು ಎಬಿವಿಪಿಯಲ್ಲಿ ಸೇವೆ ಸಲ್ಲಿಸಿದ ನಂತರ 2002 ರಲ್ಲಿ ವಾಪಸ್ ಆರ್ಎಸ್ಎಸ್ ಸೇವೆಗೆ ಹಿಂತಿರುಗಿದರು. 1974 ರಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ ಓದುತ್ತಿದ್ದ ಅವರು ವಿದ್ಯಾಭ್ಯಾಸವನ್ನು ನಿಲ್ಲಿಸಿ ಜಯಪ್ರಕಾಶ್ ನಾರಾಯಣ್ ಅವರು ಪ್ರಾರಂಭಿಸಿದ ನವನಿರ್ಮಾಣ್ ಆಂದೋಲನಕ್ಕೆ ಸೇರಿ ತುರ್ತು ಪರಿಸ್ಥಿತಿ ವಿರುದ್ಧ ಜೈಲಿಗೆ ಹೋದರು. 1977 ರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಮೇಲೆ ಅವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಸ್ನಾತಕೋತ್ತರ ಪದವಿ ಗಳಿಸಿದರು.
ಸರಕಾರ್ಯವಾಹ ಆಗಿ ನಿಯುಕ್ತಿಗೊಳ್ಳುವ ಮುನ್ನ ಲಖ್ನೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಸಬಾಳೆ ಉತ್ತರ ಪ್ರದೇಶ ಮತ್ತು ಉತ್ತರ ಭಾರತದ ಸಾಮಾಜಿಕ ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಬಹಳ ಹತ್ತಿರ ಆಗಿದ್ದರು. ಅದೇ ಕಾರಣಕ್ಕೆ ಅವರನ್ನು ಸ್ವಲ್ಪ ಕಾಲ ರಾಜಕೀಯದಿಂದ ದೂರ ಇಡಲು ಉತ್ತರ ಪ್ರದೇಶಕ್ಕೆ ಕಳಿಸಲಾಗಿತ್ತು ಎಂದು ಕೆಲವು ಆರ್ಎಸ್ಎಸ್ ನಾಯಕರು ಹೇಳುತ್ತಾರೆ. ಯಾರೂ ಹೇಳದ ಆದರೆ ದೆಹಲಿ ಮಾಧ್ಯಮಗಳು ಊಹೆ ಮಾಡುತ್ತಿದ್ದ ಒಂದಂಶ ಏನೆಂದರೆ, ಪ್ರಧಾನಿ ಮೋದಿ ಅವರಿಗೆ ಹತ್ತಿರವಾಗಿದ್ದರು ಎಂಬ ಕಾರಣಕ್ಕಾಗಿಯೇ ಹೊಸಬಾಳೆ ಅವರಿಗೆ ಹೊಸ ಜವಾಬ್ದಾರಿ ಕೊಡುವುದನ್ನು ಎರಡು ಬಾರಿ ತಡೆಯಲಾಯ್ತು ಎಂಬುದು.
(Reservation is a historical needs says RSS General Secretary Dattatreya Hosabale)
Published On - 8:35 pm, Tue, 10 August 21