AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಮಾಹಿತಿ ಪ್ರಕಟಿಸದ 8 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದ ಸುಪ್ರೀಂಕೋರ್ಟ್​

ಅಪರಾಧ ಮಾಹಿತಿ ಪ್ರಕಟಿಸದ 8 ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್​ ದಂಡ ವಿಧಿಸಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಎನ್​ಸಿಪಿ ಸಹ ಸೇರಿದೆ.

ಬಿಹಾರ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಮಾಹಿತಿ ಪ್ರಕಟಿಸದ 8 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದ ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್
TV9 Web
| Edited By: |

Updated on:Aug 10, 2021 | 6:32 PM

Share

ದೆಹಲಿ: ಬಿಹಾರ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯ ವೇಳೆ ಫೆಬ್ರುವರಿ 2020ರ ತೀರ್ಪಿನಂತೆ ಅಪರಾಧ ಮಾಹಿತಿ ಪ್ರಕಟಿಸದ 8 ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್​ ದಂಡ ವಿಧಿಸಿದೆ. ಸಿಪಿಐ (ಎಂ), ಕಾಂಗ್ರೆಸ್, ಬಿಜೆಪಿ, ಎನ್​ಸಿಪಿ, ಜನತಾ ದಳ, ಆರ್​ಜೆಡಿ, ಸಿಪಿಐ ಮತ್ತು ಲೋಕ್​ ಜನಶಕ್ತಿ ಪಕ್ಷಗಳಿಗೆ ತಲಾ ₹ 5 ಲಕ್ಷ ದಂಡ ವಿಧಿಸಲಾಗಿದೆ. ಜನವರಿ 2020ರಲ್ಲಿ ನೀಡಿದ್ದ ಮಾರ್ಗದರ್ಶಿ ಸೂತ್ರದ ಷರತ್ತುಗಳನ್ನು ಸಿಪಿಐ (ಎಂ) ಮತ್ತು ಎನ್​ಸಿಪಿ ಸಲ್ಪವೂ ಈಡೇರಿಸಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಕಳೆದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್​ ನೀಡಿದ್ದ ನಿರ್ದೇಶನಗಳ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳೂ ಚುನಾವಣಾ ಆಯೋಗ ಕೊಡುವ ಅರ್ಜಿಯನ್ನು ಭರ್ತಿ ಮಾಡಬೇಕು. ತಮ್ಮ ವಿರುದ್ಧ ಬಾಕಿಯಿರುವ ಅಪರಾಧ ಪ್ರಕರಣಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಬೇಕು. ಯಾವುದೇ ನಿರ್ದಿಷ್ಟ ಪಕ್ಷದಿಂದ ಅಭ್ಯರ್ಥಿಯು ಚುನಾವಣೆಗೆ ನಿಲ್ಲುತ್ತಿದ್ದರೆ ಆತ ಅಥವಾ ಆಕೆಯು ತನ್ನ ವಿರುದ್ಧ ಬಾಕಿಯಿರುವ ಎಲ್ಲ ಅಪರಾಧ ಪ್ರಕರಣಗಳ ಮಾಹಿತಿಯನ್ನು ಆ ರಾಜಕೀಯ ಪಕ್ಷಕ್ಕೆ ನೀಡಬೇಕು. ಅಭ್ಯರ್ಥಿಗಳು ನೀಡಿದ ಅಪರಾಧ ಮಾಹಿತಿಯನ್ನು ರಾಜಕೀಯ ಪಕ್ಷಗಳು ತಮ್ಮ ಜಾಲತಾಣಗಳಲ್ಲಿ ಪ್ರಕಟಿಸಬೇಕಿತ್ತು.

ಹೆಚ್ಚು ಜನರಲ್ಲಿ ತಲುಪುವ ದಿನಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಪರಾಧ ಮಾಹಿತಿಯನ್ನು ಪ್ರಕಟಿಸಬೇಕು. ನಾಮಪತ್ರ ಸಲ್ಲಿಕೆಯ ನಂತರ ಕನಿಷ್ಠ ಮೂರು ಬಾರಿ ಇಂಥ ಪ್ರಕಟಣೆಗಳು ಪ್ರಸಾರವಾಗಬೇಕು ಎಂದು ಕೋರ್ಟ್ ಸೂಚಿಸಿತ್ತು.

ಆದರೆ ಕಳೆದ ಅಕ್ಟೋಬರ್/ನವೆಂಬರ್ ತಿಂಗಳಲ್ಲಿ ನಡೆದಿದ್ದ ಬಿಹಾರ ಚುನಾವಣೆ ವೇಳೆ ಈ ನಿರ್ದೇಶನಗಳನ್ನು ರಾಜಕೀಯ ಪಕ್ಷಗಳು ಉಲ್ಲಂಘಿಸಿದ್ದವು. ಇದೇ ಕಾರಣಕ್ಕೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಾಗಿತ್ತು. ಸಿಪಿಐ (ಎಂ) ಮತ್ತು ಎನ್​ಸಿಪಿ ಪಕ್ಷಗಳ ಯಾವುದೇ ಅಭ್ಯರ್ಥಿಗಳು ನಮೂನೆ ಸಿ8 ಮತ್ತು ಸಿ8 ಸಲ್ಲಿಸಿಲ್ಲ. ಹೀಗಾಗಿ ಆ ಪಕ್ಷಗಳ ಯಾವುದೇ ಅಭ್ಯರ್ಥಿಗಳು ಅರ್ಹರಲ್ಲ ಎಂದು ದೂರಲಾಗಿತ್ತು.

ಸಿಪಿಐ (ಎಂ) ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪಿ.ವಿ.ಸುರೇಂದ್ರನಾಥ್ ಬಿಹಾರದ ಚುನಾವಣೆಯನ್ನು ಪಕ್ಷದ ರಾಜ್ಯ ಸಮಿತಿಯು ನಿರ್ವಹಿಸಿತ್ತು. ರಾಜ್ಯ ಸಮಿತಿಯು ಕಾರ್ಯದ ಒತ್ತಡದಿಂದಾಗಿ ನಮೂನೆ ಸಿ7 ಮತ್ತು ಸಿ8 ಸಲ್ಲಿಸಿಲ್ಲ. ಪಕ್ಷವು ದೇಶದ ಇತರೆಡೆ ನಡೆದ ಚುನಾವಣೆಗಳಲ್ಲಿ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲಿಸಿದೆ. ಹೀಗಾಗಿ ಬಿಹಾರದ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ಪಕ್ಷವು ಕೋರುತ್ತಿರುವ ಬೇಷರತ್ ಕ್ಷಮಾಪಣೆಯನ್ನು ಒಪ್ಪಿಕೊಳ್ಳಬೇಕು ಎಂದು ವಿನಂತಿಸಿದರು.

ಆದರೆ ನ್ಯಾಯಾಲಯವು ಈ ವಾದವನ್ನು ಒಪ್ಪಲಿಲ್ಲ. ಅದೇ ರೀತಿ ಎನ್​ಸಿಪಿ ಪರವಾಗಿ ವಕೀಲ ಕಪಿಲ್ ಸಿಬಲ್ ಮತ್ತು ರಿತಿನ್ ರೈ ಮಂಡಿಸಿದ ವಾದಗಳನ್ನೂ ನ್ಯಾಯಾಲಯ ತಿರಸ್ಕರಿಸಿತು. ಬಿಎಸ್​ಪಿ ಪಕ್ಷಕ್ಕೆ ಎಚ್ಚರಿಕೆ ಕೊಟ್ಟು, ಕ್ಷಮೆ ನೀಡಿತು. ಆದೇಶ ಉಲ್ಲಂಘಿಸಿರುವ ಉಳಿದೆಲ್ಲಾ ಪಕ್ಷಗಳು ಇನ್ನು 8 ವಾರಗಳ ಒಳಗೆ ತಲಾ ₹ 5 ಲಕ್ಷ ದಂಡ ಪಾವತಿಸಬೇಕೆಂದು ನ್ಯಾಯಮೂರ್ತಿ ಆರ್​.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು ಸೂಚಿಸಿತು.

(Supreme Court Imposes Fine On 8 Political Parties including bjp and congress For not Publishing Criminal Antecedents In Bihar Polls)

ಇದನ್ನೂ ಓದಿ: ಉಳಿತಾಯದ ಹಣವನ್ನೆಲ್ಲ ಪತಿಗಾಗಿ ಖಾಲಿ ಮಾಡಿ, ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮಹಿಳೆ; ಮನಕಲಕುವ ಮನವಿ ಇದು..

ಇದನ್ನೂ ಓದಿ: ಮಾಧ್ಯಮ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು

Published On - 6:31 pm, Tue, 10 August 21