Creamy Layer in OBC: ಒಬಿಸಿ ವರ್ಗದಲ್ಲಿ ಕೆನೆಪದರ ಗುರುತಿಸುವ ಮಾನದಂಡ ಯಾವುದು? ಈಗೇಕೆ ಇದು ದೇಶದಲ್ಲಿ ದೊಡ್ಡ ಪ್ರಶ್ನೆಯಾಗಿದೆ?

ಇತರ ಹಿಂದುಳಿದ ವರ್ಗಗಳ ಮೀಸಲಾತಿ ನಿಯಮಗಳಲ್ಲಿ ಕೆನೆಪದರವನ್ನು ಹೇಗೆ ವಿವರಿಸಲಾಗಿದೆ ಮತ್ತು ಪರಿಷ್ಕಾರ ಪ್ರಯತ್ನ ಸ್ಥಗಿತಗೊಂಡಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

Creamy Layer in OBC: ಒಬಿಸಿ ವರ್ಗದಲ್ಲಿ ಕೆನೆಪದರ ಗುರುತಿಸುವ ಮಾನದಂಡ ಯಾವುದು? ಈಗೇಕೆ ಇದು ದೇಶದಲ್ಲಿ ದೊಡ್ಡ ಪ್ರಶ್ನೆಯಾಗಿದೆ?
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 01, 2021 | 8:11 PM

ಇತರ ಹಿಂದುಳಿದ ಜಾತಿಗಳಲ್ಲಿ (Other Backward Classes – OBC) ಕೆನೆಪದರದ ವ್ಯಾಖ್ಯಾನವನ್ನು ಪರಿಷ್ಕರಿಸುವ ಪ್ರಸ್ತಾವವೊಂದು ಹಲವು ವರ್ಷಗಳಿಂದ ಬಾಕಿಯಿದೆ. ಈ ಬಾರಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೆಲ ಸಂಸದರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಬಿಜೆಪಿ ಸಂಸದರಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಗಾಗುತ್ತಿರುವ, ದೇಶದ ಕೋಟ್ಯಂತರ ಉದ್ಯೋಗಾಕಾಂಕ್ಷಿಗಳ ಮೇಲೆ ಪ್ರಭಾವ ಬೀರುವ ವಿಷಯವಿದು. ಕೆನೆಪದರವನ್ನು ಹೇಗೆ ವಿವರಿಸಲಾಗಿದೆ ಮತ್ತು ಪರಿಷ್ಕಾರ ಪ್ರಯತ್ನ ಸ್ಥಗಿತಗೊಂಡಿದ್ದು ಏಕೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.

ಕೆನೆಪದರ ಎಂದರೇನು? ಇತರ ಹಿಂದುಳಿದ ಜಾತಿಗಳಿಗೆ ಮೀಸಲಾತಿಯಲ್ಲಿ ಮಿತಿಗಳನ್ನು ನಿಗದಿಪಡಿಸುವ ಉದ್ದೇಶದಿಂದ ಕೆನೆಪದರದ ಮಾನದಂಡಗಳನ್ನು ರೂಪಿಸಲಾಯಿತು. ಸರ್ಕಾರದ ಉದ್ಯೋಗ ಮತ್ತು ಉನ್ನತ ಶಿಕ್ಷಣಸಂಸ್ಥೆಗಳ ಪ್ರವೇಶಕ್ಕೆ ಶೇ 27ರಷ್ಟು ಮೀಸಲಾತಿ ಒಬಿಸಿ ಜಾತಿಗಳಿಗೆ ಸಿಗುತ್ತದೆ. ಆದರೆ ಇದೇ ಜಾತಿಯಲ್ಲಿ ಕೆನೆಪದರದ ವ್ಯಾಪ್ತಿಗೆ ಬರುವವರು ಈ ಮೀಸಲಾತಿ ಕೋಟಾ ಬಳಸಿಕೊಳ್ಳಲು ಅವಕಾಶವಿಲ್ಲ.

ಹಿಂದುಳಿದ ವರ್ಗಗಳ 2ನೇ ಆಯೋಗದ (ಮಂಡಲ್ ಆಯೋಗ) ಶಿಫಾರಸುಗಳ ಅನ್ವಯ ಸರ್ಕಾರವು 13ನೇ ಆಗಸ್ಟ್ 1990ರಂದು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ (Socially and Educationally Backward Classes – SEBCs) ಸರ್ಕಾರಿ ಹುದ್ದೆಗಳಲ್ಲಿ ಶೇ 27ರಷ್ಟು ಮೀಸಲಾತಿಗೆ ಅಧಿಸೂಚನೆ ಹೊರಡಿಸಿತು. ಈ ಹುದ್ದೆಗಳನ್ನು ನೇರ ನೇಮಕಾತಿ ವಿಧಾನದಲ್ಲಿ ಭರ್ತಿ ಮಾಡಿಕೊಳ್ಳಲು ಸರ್ಕಾರ ಉದ್ದೇಶಿಸಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಯಿತು. ಶೇ 27ರಷ್ಟು ಮೀಸಲಾತಿ ನೀಡಬೇಕೆನ್ನುವ ಸರ್ಕಾರದ ಆದೇಶವನ್ನು ನವೆಂಬರ್ 16, 1992ರಂದು (ಇಂದ್ರಾ ಸಾಹ್ನೆ ಪ್ರಕರಣ) ಸುಪ್ರೀಂಕೋರ್ಟ್​ ಎತ್ತಿಹಿಡಿಯಿತು. ಕೆನೆಪದರಕ್ಕೆ ಸೇರಿದವರಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು.

ಕೆನೆಪದರಕ್ಕೆ ಸೇರಿದವರನ್ನು ಗುರುತಿಸುವುದು ಹೇಗೆ? ಇಂದ್ರಾ ಸಾಹ್ನೆ ಪ್ರಕರಣದ ತೀರ್ಪು ಹೊರಬಿದ್ದ ನಂತರ ಕೆನೆಪದರ ಗುರುತಿಸಲು ನ್ಯಾಯಮೂರ್ತಿ (ನಿವೃತ್ತ) ಆರ್.ಎನ್.ಪ್ರಸಾದ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಯಿತು. ಯಾವ ಹುದ್ದೆ, ದರ್ಜೆ ಮತ್ತು ಆದಾಯ ಪಡೆಯುವ ಜನರಿಗೆ ಒಬಿಸಿ ಮೀಸಲಾತಿ ಲಭ್ಯವಾಗುವುದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (Department of Personnel and Training – DoPT) ಒಂದು ಪಟ್ಟಿಯನ್ನು ಸೆಪ್ಟೆಂಬರ್ 8, 1993ರಂದು ಪ್ರಕಟಿಸಿತು.

ಸರ್ಕಾರಿ ನೌಕರಿಯಲ್ಲಿ ಇಲ್ಲದವರಿಗೆ ವಾರ್ಷಿಕ ಆದಾಯದ ಮಿತಿ ₹ 8 ಲಕ್ಷ. ಸರ್ಕಾರಿ ನೌಕರರ ಮಕ್ಕಳಿಗೆ ಅವರ ಪೋಷಕರ ಸ್ಥಾನಮಾನಗಳನ್ನು ಆಧರಿಸಿ ನಿರ್ಬಂಧಿಸಲಾಗುತ್ತದೆ. ಆತ ಅಥವಾ ಆಕೆಯ ಪೋಷಕರು ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿದ್ದರೆ, ಗ್ರೂಪ್​ ಎ ವಿಭಾಗದಲ್ಲಿ ಯಾರಾದರೂ ಒಬ್ಬರು ಇದ್ದರೆ, ಇಬ್ಬರೂ ಗ್ರೂಪ್​ ಬಿ ವಿಭಾಗದ ನೌಕರಿಯಲ್ಲಿದ್ದರೆ, ಪೋಷಕರು ತಮ್ಮ 40ನೇ ವಯಸ್ಸಿಗಿಂತಲೂ ಮೊದಲು ಗ್ರೂಪ್​ ಎ ವಿಭಾಗಕ್ಕೆ ಹೋದರೆ- ಅಂಥವರ ಮಕ್ಕಳು ಕೆನೆಪದರದ ವ್ಯಾಪ್ತಿಗೆ ಬರುತ್ತಾರೆ. ಸೇನೆಯಲ್ಲಿ ಕರ್ನಲ್, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಅದಕ್ಕೆ ಸಮನಾದ ಹುದ್ದೆಯಲ್ಲಿರುವ ಸಿಬ್ಬಂದಿಯ ಮಕ್ಕಳು ಕೆನೆಪದರದ ವ್ಯಾಪ್ತಿಗೆ ಬರುತ್ತಾರೆ. ಇದರ ಜೊತೆಗೆ ಇತರ ಹಲವು ಮಾನದಂಡಗಳೂ ಇವೆ.

ಸಂಬಳದಿಂದ ಸಿಗುವ ಸಂಬಳ ಅಥವಾ ಕೃತಿ ಭೂಮಿಯಿಂದ ಸಿಗುವ ಆದಾಯವನ್ನು ಕೆನೆಪದರ ವ್ಯಾಪ್ತಿಗೆ ಸೇರಿಸಲು ಪರಿಗಣಿಸುವುದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಕ್ಟೋಬರ್ 14, 2004ರಂದು ನೀಡಿರುವ ಸ್ಪಷ್ಟನೆಯಲ್ಲಿ ತಿಳಿಸಿದೆ.

ಈಗ ಏನಾಗುತ್ತಿದೆ? ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಎಂಟು ಸಂಸದರು (ಬಿಜೆಪಿಯ ಏಳು ಮಂದಿ ಮತ್ತು ಕಾಂಗ್ರೆಸ್​ನ ಒಬ್ಬರು) ಕೆನೆಪದರದ ಪರಿಷ್ಕರಣೆ ಮಾನದಂಡಗಳ ಪ್ರಸ್ತಾವ ಬಾಕಿಯಿರುವ ಕುರಿತು ಎರಡು ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಜೂನ್ 20ರಂದು ಪ್ರತಿಕ್ರಿಯಿಸಿದ್ದ ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆ ಇಲಾಖೆ ಸಚಿವೆ ಪ್ರತಿಮಾ ಭೌಮಿಕ್, ‘ಒಬಿಸಿ ವರ್ಗದ ಕೆನೆಪದರ ನಿಷ್ಕರ್ಷೆಗಾಗಿ ಆದಾಯ ಮಾನದಂಡಗಳನ್ನು ರೂಪಿಸುವ ವಿಚಾರ ಸರ್ಕಾರದ ಪರಿಗಣನೆಯಲ್ಲಿದೆ’ ಎಂದು ಹೇಳಿದ್ದರು.

ಸರ್ಕಾರಿ ನೌಕರರ ನೇಮಕಾತಿ ವೇಳೆ ಕೆನೆಪದರದ ನಿಯಮಗಳನ್ನು ಕೇವಲ ಒಬಿಸಿ ವರ್ಗಕ್ಕೆ ಮಾತ್ರ ಅನ್ವಯಿಸುವುದು ಸರಿಯೇ ಎಂದು ರಾಜ್ಯಸಭೆಯಲ್ಲಿ ಮೂವರು ಸಂಸದರು (ಸಮಾಜವಾದಿ ಪಕ್ಷದ ಇಬ್ಬರು ಮತ್ತು ಕಾಂಗ್ರೆಸ್​ನ ಒಬ್ಬರು) ಪ್ರಶ್ನಿಸಿದ್ದರು. ಜುಲೈ 22ರಂದು ಈ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ಜಿತೇಂದ್ರ ಸಿಂಗ್, ಇಂದಿರಾ ಸ್ವಾಹ್ನೆ ಪ್ರಕರಣವನ್ನು ಉಲ್ಲೇಖಿಸಿದ್ದರು. 2015ರಿಂದ 2019ರ ಅವಧಿಯಲ್ಲಿ ಐಎಎಸ್​ಗೆ ಆಯ್ಕೆಯಾಗಿದ್ದ 63 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಸಿಗಲಿಲ್ಲ. ಕೆನೆಪದರದ ವ್ಯಾಪ್ತಿಯೊಳಗೆ ಅವರು ಬರುತ್ತಿದ್ದರು ಎಂಬ ಕಾರಣಕ್ಕೆ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿತ್ತು.

ಕೆನೆಪದರದ ನಿಯಮಾವಳಿಗಳು ಎಂದಾದರೂ ಪರಿಷ್ಕಾರವಾಗಿದೆಯೇ? ಆದಾಯ ಮಿತಿ ಹೊರತುಪಡಿಸಿದರೆ ಕೆನೆಪದರದ ವಿವರಣೆಯು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸೆಪ್ಟೆಂಬರ್ 8, 1993ರಂದು ಘೋಷಿಸಿದ್ದ ಹಾಗೂ ಅಕ್ಟೋಬರ್ 14, 2004ರಂದು ವಿವರಿಸಿದ್ದ ಮಾದರಿಯಲ್ಲಿಯೇ ಇದೆ. ಕೆನೆಪದರಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಆದೇಶವನ್ನು ಸರ್ಕಾರ ಹೊರಡಿಸಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ಕೃಷ್ಣಪಾಲ್ ಗುರ್ಜರ್ ಕಳೆದ ಮಾರ್ಚ್​ ತಿಂಗಳಲ್ಲಿ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದ್ದರು.

ಕಳೆದ ಕೆಲ ವರ್ಷಗಳಿಂದೀಚೆಗೆ ಆದಾಯ ಮಿತಿಯನ್ನು ಪರಿಷ್ಕರಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಆದಾಯ ಮಿತಿ ಪರಿಷ್ಕರಿಸಲಾಗುವುದು ಎಂದು ಸಿಬ್ಬಂದಿ ಇಲಾಖೆ ಮಾಹಿತಿ ನೀಡಿದೆ. 8ನೇ ಸೆಪ್ಟೆಂಬರ್ 1993 (₹ 1 ಲಕ್ಷ), ಮಾರ್ಚ್ 9, 2004 (₹ 2.50 ಲಕ್ಷ), ಅಕ್ಟೋಬರ್ 2008 (₹ 4.50 ಲಕ್ಷ), ಮೇ 2013 ( ₹ 6 ಲಕ್ಷ) ಮತ್ತು ಸೆಪ್ಟೆಂಬರ್ 13, 2017ರಂದು (₹ 8 ಲಕ್ಷ) ಆದಾಯಮಿತಿಯನ್ನು ಪರಿಷ್ಕರಿಸಲಾಗಿತ್ತು. ಇದೀಗ ಮತ್ತೊಮ್ಮೆ ಆದಾಯ ಮಿತಿಯನ್ನು ಪರಿಷ್ಕರಿಸಬೇಕಾದ ಸಮಯ ಬಂದಿದೆ. ಇದಕ್ಕೆ ಪೂರಕ ಪ್ರಕ್ರಿಯೆಗಳೂ ಆರಂಭವಾಗಿವೆ.

ಒಬಿಸಿ ವರ್ಗದ ಕ್ಷೇಮಾಭಿವೃದ್ಧಿಗಾಗಿ ರಚಿಸಿದ್ದ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದ ಬಿಜೆಪಿ ಸಂಸದ ಗಣೇಶ್ ಸಿಂಗ್ ಜುಲೈ 2020ರಲ್ಲಿ ಸಂಸತ್ತಿನಲ್ಲಿ ವರದಿಯೊಂದನ್ನು ಮಂಡಿಸಿದ್ದರು. ಪ್ರತಿ ಮೂರು ವರ್ಷಗಳಿಗೊಮ್ಮೆ ಆದಾಯ ಮಿತಿ ಪರಿಷ್ಕರಿಸುವ ಅಂಶವನ್ನು ಈಗಿನ ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ್ದರು. ನಿಯಮಿತ ಅಂತರದಲ್ಲಿ ಪರಿಷ್ಕರಣೆಗಳನ್ನು ಮಾಡದಿದ್ದರೆ ಅದು ಸರ್ಕಾರವೇ ರೂಪಿಸಿರುವ ಆಶಯಗಳ ಉಲ್ಲಂಘನೆಯಾಗಲಿದೆ ಎಂದು ಹೇಳಿದ್ದರು.

ಪರಿಷ್ಕರಣೆ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು? ಕಳೆದ ಮಾರ್ಚ್ 12ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿಂದುಳಿತ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (National Commission for Backward Classes – NCBC) ಸಚಿವ ಸಂಪುಟ ನಿರ್ಣಯದ ಕರಡು ಪ್ರತಿಯನ್ನು ಕಳುಹಿಸಿಕೊಟ್ಟಿತ್ತು. ಕೆನೆಪದರವನ್ನು ನಿರ್ಣಯಿಸುವಾಗ (ಕೃಷಿ ಹೊರತುಪಡಿಸಿ) ಇತರ ಎಲ್ಲ ಮೂಲಗಳಿಂದ ಗಳಿಸುವ ಆದಾಯವನ್ನು ಲೆಕ್ಕ ಹಾಕಬೇಕು ಎಂಬ ಸೂಚನೆ ಅದರಲ್ಲಿತ್ತು. ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಕಾರ್ಯದರ್ಶಿ ಬಿ.ಪಿ.ಶರ್ಮಾ ಅವರ ಶಿಫಾರಸಿನ ಮೇಲೆ ಕೇಂದ್ರ ಸಚಿವ ಸಂಪುಟ ಈ ನಿಲುವು ತಳೆದಿತ್ತು. ಇಲ್ಲಿ ಬಿ.ಪಿ.ಶರ್ಮಾ ಸಮಿತಿಯ ಬಗ್ಗೆ ಮತ್ತೊಂದು ವಿಷಯ ಹೇಳಬೇಕಿದೆ. ಈ ಸಮಿತಿಯನ್ನು ಕೇಂದ್ರ ಸರ್ಕಾರವು ಸಿಬ್ಬಂದಿ ಇಲಾಖೆಯ ಸೆಪ್ಟೆಂಬರ್ 8, 1993ರ ಆದೇಶವನ್ನು ಜಾರಿ ಮಾಡಲು ಪೂರಕ ಕ್ರಮಗಳನ್ನು ರೂಪಿಸಿಕೊಡಲೆಂದು ಕೇಂದ್ರ ಸರ್ಕಾರ ರೂಪಿಸಿತ್ತು.

ಆದರೆ ಸಂಸತ್ ಸದಸ್ಯರ ಪ್ರತಿಭಟನೆಗಳ ಕಾರಣದಿಂದ ಈ ಶಿಫಾರಸು ಜಾರಿಗೆ ಬರಲಿಲ್ಲ. ಪರಿಷ್ಕರಣೆಯ ವಿಚಾರವನ್ನು ಸರ್ಕಾರ ಪರಿಗಣಿಸುತ್ತಿದೆ ಎಂಬುದಷ್ಟೇ ಸರ್ಕಾರದ ಈಗಿನ ನಿಲುವಾಗಿದೆ. ಆಡಳಿತ ಪಕ್ಷದ ಸಂಸದರೇ ಆಗಿರುವ, ಸಂಸದೀಯ ಸಮಿತಿ ಮುಖ್ಯಸ್ಥರೂ ಆಗಿದ್ದ ಗಣೇಶ್​ ಸಿಂಗ್ ಜುಲೈ 5ರಂದು​ ಒಬಿಸಿ ವರ್ಗಕ್ಕೆ ಸೇರಿದ ಬಿಜೆಪಿಯ ಇತರ ಸಂಸದರಿಗೆ ಪತ್ರ ಬರೆದು, ಕೆನೆಪದರ ಮಿತಿ ಪರಿಷ್ಕರಣೆಯ ವೇಳೆ ಸಂಬಳ ಮತ್ತು ಕೃಷಿ ಆದಾಯವನ್ನು ಪರಿಗಣಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮೆಸೇಜ್ ಮತ್ತು ಟ್ವೀಟ್​ಗಳ ಮೂಲಕ ವಿನಂತಿಸುವಂತೆ ಕೋರಿದ್ದರು.

ಕೆನೆಪದರದ ಆದಾಯ ಮಿತಿಯನ್ನು ₹ 15 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಆದರೆ ಸರ್ಕಾರವು ಸಂಬಳ ಮತ್ತು ಕೃಷಿ ಆದಾಯವನ್ನೂ ಒಳಗೊಂಡಂತೆ ₹ 12 ಲಕ್ಷದ ಆದಾಯ ಮಿತಿಯನ್ನು ಒಪ್ಪಿಕೊಳ್ಳಲು ಇಚ್ಛಿಸಿದೆ. ಇದು ತಪ್ಪು ಎಂಬುದು ಅವರ ವಾದ. ಡಿಸೆಂಬರ್ 21, 2011ರಂದು ಸಂಸತ್ತಿನಲ್ಲಿ ಮಂಡಿಸಿದ್ದ ನಿಲುವಳಿಯ ನಂತರ ಜೂನ್ 2012ರಂದು ಸಮಿತಿಯನ್ನು ರಚಿಸಲಾಗಿತ್ತು. ಪ್ರಸ್ತುತ ಲೋಕಸಭೆಯ 18 ಸದಸ್ಯರು ಮತ್ತು ರಾಜ್ಯಸಭೆಯ 8 ಮಂದಿ ಈ ಸಮಿತಿಯಲ್ಲಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿರುವ ಲೋಕಸಭೆ ಸದಸ್ಯ ರಾಜೇಶ್​ ವರ್ಮಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

ಗಣೇಶ್​ ಸಿಂಗ್ ಪ್ರತಿಭಟನೆಯ ನಂತರ ಏನಾಯ್ತು? ಕಳೆದ ವರ್ಷ ಜುಲೈ 21ರಂದು ಅಮಿತ್ ಶಾ ಎನ್​ಸಿಬಿಸಿ ಪ್ರತಿನಿಧಿಗಳ ಸಭೆಯೊಂದನ್ನು ಆಯೋಜಿಸಿದ್ದರು. ಇದರಲ್ಲಿ ಈಗ ಕೇಂದ್ರ ಸಚಿವರಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸಹ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಒಬಿಸಿ ವರ್ಗಕ್ಕೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ. ಒಬಿಸಿಗೆ ಮೀಸಲಿದ್ದ ಕೆಲ ಹುದ್ದೆಗಳನ್ನು, ಅರ್ಹರು ಸಿಗಲಿಲ್ಲ ಎಂಬ ಕಾರಣದಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂಬ ಸಂಗತಿಯನ್ನು ಎನ್​ಸಿಬಿಸಿ ಗೃಹ ಸಚಿವರ ಗಮನಕ್ಕೆ ತಂದಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಅಮಿತ್ ಶಾ, ಈ ಕುರಿತು ವಿಸ್ತೃತ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದರು.

ಕಳೆದ ವಾರವಷ್ಟೇ ಈ ಕುರಿತು ಮಾಹಿತಿ ನೀಡಿದ್ದ ಎನ್​ಸಿಬಿಸಿ ಅಧ್ಯಕ್ಷ, ಪ್ರೊ.ಭಗವಾನ್ ಲಾಲ್ ಸಾಹ್ನಿ, ನಾವು ದತ್ತಾಂಶಗಳನ್ನು ಸಿದ್ಧಪಡಿಸಿದ್ದೇವೆ. ಕೇಂದ್ರ ಗೃಹ ಸಚಿವರ ಭೇಟಿಯನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು. ಒಬಿಸಿ ಕೆನೆಪದರ ಮಾನದಂಡಗಳ ಪರಿಷ್ಕರಣೆ ವಿಚಾರ ಸದ್ಯ ಕೇಂದ್ರ ಗೃಹ ಸಚಿವಾಲಯದ ಮುಂದಿನ ಸೂಚನೆಗಾಗಿ ಕಾಯುತ್ತಿದೆ. ಅಮಿತ್ ಶಾ ಶೀಘ್ರದಲ್ಲಿ ಸಭೆ ಕರೆದು, ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

(How creamy layer among OBCs is determined why revision efforts stuck)

ಇದನ್ನೂ ಓದಿ: OBC Reservation: ಒಬಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಶೇ. 27ರಷ್ಟು ಮೀಸಲಾತಿ; ಕೇಂದ್ರ ಸರ್ಕಾರ ಘೋಷಣೆ

ಇದನ್ನೂ ಓದಿ: Job Reservation: ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಮೀಸಲಾತಿ; ಕರ್ನಾಟಕ ಸರ್ಕಾರದಿಂದ ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಕೆ

Published On - 8:07 pm, Sun, 1 August 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ