ಅದನ್ನು ಯಾಕೆ ಕಡಿತಗೊಳಿಸಿದಿರಿ? ಏರ್ ಇಂಡಿಯಾ ಪೈಲಟ್ಗಳ ಕೊನೆಯ ಸಂಭಾಷಣೆಯಲ್ಲಿತ್ತು ಪತನದ ರಹಸ್ಯ
‘ನೀವು ಯಾಕೆ ಕಡಿತಗೊಳಿಸಿದ್ದೀರಿ’, ಇದು ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೂ ಮುನ್ನ ಕೊನೆಯದಾಗಿ ಪೈಲಟ್ ಸುಮಿತ್ ಸಭರ್ವಾಲ್ ಅವರು ಸಹ-ಪೈಲಟ್ ಕ್ಲೈವ್ ಕುಂದರ್ ಬಳಿ ಕೇಳಿದ ಮಾತು. ‘ನಾನೇನೂ ಮಾಡಿಲ್ಲ’, ಇದು ಕ್ಲೈವ್ ಕುಂದರ್ ಉತ್ತರ. ಇದಾಗಿ ಕ್ಷಣಮಾತ್ರದಲ್ಲಿ ವಿಮಾನ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ. ಹಾಗಾದರೆ, ಪೈಲಟ್ಗಳ ಈ ಕೊನೆಯ ಸಂಭಾಷಣೆ ಬಿಚ್ಚಿಟ್ಟ ರಹಸ್ಯ ಏನು? ವಿವರಗಳಿಗೆ ಮುಂದೆ ಓದಿ.

ನವದೆಹಲಿ, ಜುಲೈ 12: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ (Air India Plane Crash) ಸಂಬಂಧ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ನಡೆಸಿ 15 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ. ತನಿಖಾ ವರದಿಯ ಪ್ರಕಾರ, ಲಂಡನ್ಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡಿದ್ದೇ ಪತನಕ್ಕೆ ಕಾರಣ. ಇಂಧನ ಪೂರೈಕೆ ಸ್ಥಗಿತವಾದ ಕಾರಣ ಎಂಜಿನ್‌ಗಳು ಸ್ಥಗಿತವಾಗಿದ್ದವು ಎನ್ನಲಾಗಿದ್ದು, ಈ ಕುರಿತು ಪೈಟಲ್ಗಳು ನಡೆಸಿದ್ದ ಕೊನೇ ಕ್ಷಣದ ಸಂಭಾಷಣೆ ಕೂಡ ಲಭ್ಯವಾಗಿದೆ.
ಹೀಗಿತ್ತು ಪೈಟಲ್ಗಳ ಕೊನೆಯ ಸಂಭಾಷಣೆ
ಎಂಜಿನ್ ಸ್ಥಗಿತಗೊಂಡ ಬಗ್ಗೆ ಪೈಲಟ್ ಮತ್ತು ಸಹ-ಪೈಲಟ್ ನಡುವಿನ ಸಂಭಾಷಣೆ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ನಲ್ಲಿ ದಾಖಲಾಗಿದೆ. ಅದರ ಪ್ರಕಾರ, ಪೈಲಟ್ ಸುಮಿತ್ ಸಭರ್ವಾಲ್ ಸಹ-ಪೈಲಟ್ ಕ್ಲೈವ್ ಕುಂದರ್ ಅವರ ಬಳಿ, ‘‘ Why did you cut off?, ಅಂದರೆ ನೀವು ಯಾಕೆ ಕಡಿತಗೊಳಿಸಿದ್ದೀರಿ’’ ಎಂದು ಕೇಳಿದ್ದಾರೆ. ಎಂಜಿನ್ಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದನ್ನು ಉದ್ದೇಶಿಸಿ ಸುಮಿತ್ ಸಭರ್ವಾಲ್ ಹೀಗೆ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕ್ಲೈವ್ ಕುಂದರ್, ‘‘ನಾನೇನೂ ಮಾಡಿಲ್ಲ’’ ಎಂದಿದ್ದಾರೆ. ಹೀಗಾಗಿ, ತಾಂತ್ರಿಕ ದೋಷದಿಂದ ವಿಮಾನ ಅಪಘಾತ ಸಂಭವಿಸಿರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಇದ್ದಕ್ಕಿದ್ದಂತೆ ಆಫ್ ಆಗಿವೆ. ಇದರಿಂದಾಗಿ ವಿಮಾನ ಅಪಘಾತಕ್ಕೀಡಾಗಿದೆ.
ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೊರಟು ಟೇಕಾಫ್ ಆದ ಬೆನ್ನಲ್ಲೇ ಎಂಜಿನ್‌ಗಳ ಇಂಧನ ಸ್ವಿಚ್‌ಗಳು ಇದ್ದಕ್ಕಿದ್ದಂತೆ RUN ನಿಂದ CUTOFF ಗೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿತ್ತು. ಇದರಿಂದಾಗಿ ಎಂಜಿನ್ಗೆ ಇಂಧನ ಬರುವುದು ನಿಂತುಹೋಗಿ ಎಂಜಿನ್ ಆಫ್ ಆಗಿದೆ ಎಂದು ಪ್ರಾಥಮಿಕ ತನಿಖಾ ವರದಿಯ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೆ ಕೊನೆಗೂ ಕಾರಣ ಪತ್ತೆ: ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ
ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆದಿರಬಹುದಾದ ಸಾಧ್ಯತೆಯನ್ನು ವರದಿ ತಳ್ಳಿಹಾಕಿದೆ. ಇಂಧನದಲ್ಲಿ ಕೂಡ ಯಾವುದೇ ರೀತಿಯ ಸಮಸ್ಯೆ ಇರುವುದಕ್ಕೆ ಸಾಕ್ಷ್ಯಗಳು ದೊರೆತಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.








