Job Reservation: ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಮೀಸಲಾತಿ; ಕರ್ನಾಟಕ ಸರ್ಕಾರದಿಂದ ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಕೆ

ಆಕ್ಷೇಪಣೆ ಪರಿಗಣಿಸಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಹೈಕೋರ್ಟ್​ಗೆ ತಿಳಿಸಿದ್ದಾರೆ. ಈ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 20ಕ್ಕೆ ನಿಗದಿಪಡಿಸಿ ಮುಂದೂಡಿದೆ. 

Job Reservation: ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಮೀಸಲಾತಿ; ಕರ್ನಾಟಕ ಸರ್ಕಾರದಿಂದ ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಕೆ
ಕರ್ನಾಟಕ ಹೈಕೋರ್ಟ್​
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 18, 2021 | 8:36 PM

ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಶೇಕಡಾ 1ರಷ್ಟು ಮೀಸಲಾತಿ ಒದಗಿಸುವಂತೆ ಕರಡು ಅಧಿಸೂಚನೆ ಹೊರಡಿಸಿ ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈ ಮುನ್ನ ಸಂಗಮ ಸ್ವಯಂಸೇವಾ ಸಂಸ್ಥೆ ಮಂಗಳಮುಖಿಯರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಈ ಸಂಬಂಧ ಕರ್ನಾಟಕ ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಪರಿಗಣಿಸಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಹೈಕೋರ್ಟ್​ಗೆ ತಿಳಿಸಿದ್ದಾರೆ. ಈ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 20ಕ್ಕೆ ನಿಗದಿಪಡಿಸಿ ಮುಂದೂಡಿದೆ.

ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡಿನಲ್ಲಿ ಪೂಜೆ: ವಿಜಯೇಂದ್ರ ನಡೆಯ ಬಗ್ಗೆ ಹೈಕೋರ್ಟ್​ ಸಿಟ್ಟು ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಿಎಂ ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ನಂಜನಗೂಡಿನಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಸಾರ್ವಜನಿಕರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಇಲ್ಲವೆಂದ ಮೇಲೆ ಇತರರಿಗೂ ಇರಬಾರದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ.

ವಿಜಯೇಂದ್ರ ಉದ್ದೇಶಪೂರ್ವಕವಾಗಿ ದೇವಾಲಯದ ಒಳಗೆ ಭೇಟಿ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿದ್ದಾರೆ. ಬಿ.ವೈ.ವಿಜಯೇಂದ್ರ ಕೇವಲ ಐದರಿಂದ ಹತ್ತು ನಿಮಿಷವಷ್ಟೇ ಇದ್ದಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್​​ಗೆ ಎಜಿ ಪ್ರಭುಲಿಂಗ್ ನಾವದಗಿ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ನಿಷೇಧವಿದ್ದರೂ ಜನರು ದೇವಾಲಯಕ್ಕೆ ಹೋಗಬಹುದೇ? ಹಾಗಿದ್ದರೆ ಜನಸಾಮಾನ್ಯರಿಗೂ ಆ ಅವಕಾಶ ನೀಡಬೇಕು. ನಿಯಮ ಉಲ್ಲಂಘಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅರ್ಚಕರಷ್ಟೇ ಹೊಣೆಯೇ, ಹೋದವರದ್ದಲ್ಲವೇ? ಎಂದು ಸಿಜೆ. ಎ.ಎಸ್.ಒಕಾ ನೇತೃತ್ವದ ಪೀಠ ಸರ್ಕಾರವನ್ನು ಪ್ರಶ್ನಿಸಿತು. ರಾಜಕಾರಣಿಗಳಿಗೆ ಇತರರಗಿಂತ ಹೆಚ್ಚು ಹೊಣೆಗಾರಿಕೆಯಿರುತ್ತದೆ. ಬಿ.ವೈ. ವಿಜಯೇಂದ್ರರಿಂದಲೂ ಕೋರ್ಟ್ ವಿವರಣೆ ಪಡೆಯಬಹುದು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅಡ್ವೊಕೇಟ್ ಜನರಲ್ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಪ್ರತಿಕ್ರಿಯಿಸಿದ ಕೋರ್ಟ್, ಈ ಪ್ರಕರಣ ಸಂಬಂಧಪಟ್ಟ ಎಲ್ಲರ ಕಣ್ತೆರೆಸಬೇಕು. ಅಧಿಕಾರಿಗಳು, ರಾಜಕಾರಣಿಗಳಿಗೆ ಅರಿವಾಗಬೇಕು ಎಂದು ನಿರ್ದೇಶನ ನೀಡಿತು.

ಕೊರೊನಾ ಹಾಗೂ ಲಾಕ್​ಡೌನ್ ನಡುವೆಯೂ ನಂಜನಗೂಡು ದೇಗುಲದಲ್ಲಿ ಬಿ.ವೈ. ವಿಜಯೇಂದ್ರ ಪೂಜೆ ಮಾಡಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ಈ ಮುನ್ನ ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್​ ಘಟಕ ಈ ಬಗ್ಗೆ ದೂರು ನೀಡಿದೆ. ವಿಜಯೇಂದ್ರ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ದೂರಿನಲ್ಲಿ ತಿಳಿಸಲಾಗಿತ್ತು.

ಬಿಜೆಪಿ ಸಮಾವೇಶಕ್ಕೂ ಹೈಕೋರ್ಟ್ ಗರಂ ಮಾರ್ಗಸೂಚಿ ಉಲ್ಲಂಘಿಸಿ ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ನ ಸಿಜೆ ಎ.ಎಸ್.ಒಕಾ ನೇತೃತ್ವದ ಪೀಠ, ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮಾರ್ಗಸೂಚಿ ಉಲ್ಲಂಘಿಸಿ ಬೆಳಗಾವಿಯಲ್ಲಿ ಬಿಜೆಪಿ ಸಮಾವೇಶ ನಡೆಸಿದ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ನೀಡಿದ ಪ್ರಮಾಣಪತ್ರದ ಕುರಿತು ಸಹ ಹೈಕೋರ್ಟ್ ಗರಂ ಆಯಿತು. ಕೇವಲ 6 ಜನರಿಂದ ಮಾರ್ಗಸೂಚಿ ಉಲ್ಲಂಘನೆಯಾಗಿದೆಯೇ? ಎಂದು ಪ್ರಶ್ನಿಸಿದ ಕೋರ್ಟ್, ಪೊಲೀಸ್ ಆಯುಕ್ತರ ವರದಿ ಹಾಸ್ಯಾಸ್ಪದವಾಗಿದೆ ಎಂದು ಪ್ರತಿಕ್ರಿಯಿಸಿತು.

ಇದೇ ವೇಳೆ ಈ ಘಟನೆಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲರ ಸ್ಪಷ್ಟಪಡಿಸಲು ಯತ್ನಿಸಿದರೂ, ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿತು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ತನ್ನನ್ನೂ ವಾದಿಯಾಗಿಸಲು ಯುವತಿಯಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

Coronavirus 3rd Wave: ಭಾರತದಲ್ಲಿ ಅಕ್ಟೋಬರ್​ಗೆ ಕೊವಿಡ್ 3ನೇ ಅಲೆ: ವೈದ್ಯಕೀಯ ಕ್ಷೇತ್ರದ ತಜ್ಞರ ವಿಶ್ಲೇಷಣೆ

(Reservation for transgender in govt jobs Karnataka govt Submit Certificate to High Court)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada