Independence Day 2022: ಮಹಿಳೆಯರನ್ನು ಗೌರವಿಸಿ, ನಾರಿ ಶಕ್ತಿಯನ್ನು ಪ್ರೋತ್ಸಾಹಿಸಿ; ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ

| Updated By: ಸುಷ್ಮಾ ಚಕ್ರೆ

Updated on: Aug 15, 2022 | 9:41 AM

Narendra Modi Independence Day Speech: 'ನಾರಿ ಶಕ್ತಿ'ಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಗೌರವ ನೀಡುವುದು ಭಾರತದ ಬೆಳವಣಿಗೆಗೆ ಪ್ರಮುಖ ಆಧಾರಸ್ತಂಭವಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದ್ದಾರೆ.

Independence Day 2022: ಮಹಿಳೆಯರನ್ನು ಗೌರವಿಸಿ, ನಾರಿ ಶಕ್ತಿಯನ್ನು ಪ್ರೋತ್ಸಾಹಿಸಿ; ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ
ಕೆಂಪುಕೋಟೆಯಲ್ಲಿ ನರೇಂದ್ರ ಮೋದಿ ಸ್ವಾತಂತ್ರ್ತೋತ್ಸವದ ಭಾಷಣ
Follow us on

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ (Red Fort) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಮಹಿಳೆಯರಿಗೆ ಅಗೌರವ ತೋರುವುದನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಸ್ವೀಕರಿಸುವಂತೆ ಜನರಿಗೆ ಸಂದೇಶ ನೀಡಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡಿದ ಮಹಿಳೆಯರನ್ನು ಕೂಡ ಈ ವೇಳೆ ಮೋದಿ ನೆನಪಿಸಿಕೊಂಡಿದ್ದಾರೆ. ನಾರಿ ಶಕ್ತಿಯನ್ನು (Nari Shakti) ಗೌರವಿಸಲು ಜನರಿಗೆ ಮನವಿ ಮಾಡಿದ ಪ್ರಧಾನಿ ಮೋದಿ ಈ ವೇಳೆ ಭಾವುಕರಾಗಿದ್ದಾರೆ.

75ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾಷಣದ ಆರಂಭದಲ್ಲೇ ನಾರಿ ಶಕ್ತಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್ ಮುಂತಾದ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಭಾರತ ಹೆಮ್ಮೆಯಿಂದ ಬೀಗುತ್ತದೆ ಎಂದು ನರೇಂದ್ರ ಮೋದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಕೊಡುಗೆ, ಬಲಿದಾನವನ್ನು ನೆನಪಿಸಿಕೊಂಡಿದ್ದಾರೆ.

ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು ಎಂದು ಮೋದಿ ಒತ್ತಿ ಹೇಳಿದ್ದಾರೆ. ‘ನಾರಿ ಶಕ್ತಿ’ಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಹಿಳೆಯರಿಗೆ ಗೌರವ ನೀಡುವುದು ಭಾರತದ ಬೆಳವಣಿಗೆಗೆ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ‘ನಾರಿ ಶಕ್ತಿ’ಯನ್ನು ನಾವು ಬೆಂಬಲಿಸಬೇಕಾಗಿದೆ. ನಮ್ಮ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ನಾವು ಕೆಲವೊಮ್ಮೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಹಿಳೆಯರನ್ನು ಅವಮಾನಿಸುತ್ತೇವೆ. ಇನ್ನೆಂದೂ ಮಹಿಳೆಯರ ಜೊತೆ ತಪ್ಪಾಗಿ ವರ್ತಿಸದಂತೆ ನಾವು ಪ್ರತಿಜ್ಞೆ ತೆಗೆದುಕೊಳ್ಳಬಹುದಲ್ಲವೇ? ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: Independence Day Celebration 2022 Live: ಎಲ್ಲ ಭಾರತೀಯರೂ ಟೀಂ ಇಂಡಿಯಾ ಭಾವನೆಯೊಂದಿಗೆ ಮುನ್ನಡೆಯೋಣ; ನರೇಂದ್ರ ಮೋದಿ

ಭಾರತದಲ್ಲಿ ಏಕತೆಯನ್ನು ಸಾಧಿಸಲು ಲಿಂಗ ಸಮಾನತೆಯನ್ನು ಉತ್ತೇಜಿಸಬೇಕು. “ಭಾರತ ಮೊದಲು” ಎಂಬ ಘೋಷಣೆಯ ಮೂಲಕ ನಾವು ಒಗ್ಗಟ್ಟಾಗಿದ್ದೇವೆ. ಈ ಮೂಲಕ ಜಾತಿ, ಧರ್ಮ, ಲಿಂಗವನ್ನೆಲ್ಲ ಬದಿಗಿಟ್ಟು ಭಾರತೀಯರೆಂಬ ಒಗ್ಗಟ್ಟಿನಿಂದ ನಾವು ಮುನ್ನಡೆಯಬೇಕು ಎಂದು ಮೋದಿ ಹೇಳಿದ್ದಾರೆ.

ಮಾತು ಮತ್ತು ನಡತೆಯಲ್ಲಿ ಮಹಿಳೆಯರ ಘನತೆಗೆ ಕುಂದು ತರುವ ಯಾವುದನ್ನೂ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕೆಂದು ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಮಹಿಳೆಯರಿಗೆ ಅಗೌರವ ತೋರುವುದನ್ನು ನಿಲ್ಲಿಸುವ ಪ್ರತಿಜ್ಞೆ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಪ್ರಬಲ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: Independence Day 2022: ಭಾರತ ಪ್ರಜಾಪ್ರಭುತ್ವದ ತಾಯಿ, ವೈವಿಧ್ಯತೆಯೇ ಅದರ ಶಕ್ತಿ; ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ

ಶಿಕ್ಷಣವಿರಲಿ, ಕ್ರೀಡೆಯಿರಲಿ ಅಥವಾ ವಿಜ್ಞಾನವಿರಲಿ ಎಲ್ಲ ವಲಯದಲ್ಲೂ ಭಾರತದ ಮಹಿಳೆಯರು ಉನ್ನತ ಸ್ಥಾನದಲ್ಲಿದ್ದಾರೆ. ಯುದ್ಧಭೂಮಿಯಲ್ಲೂ ಭಾರತದ ಮಹಿಳೆಯರು ಸಾಮರ್ಥ್ಯ ಮತ್ತು ಹೊಸ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದಾರೆ. ಈ 75 ವರ್ಷಗಳಲ್ಲಿ ಮಹಿಳೆಯರು ಎಷ್ಟು ಸಾಧನೆ ಮಾಡಿದ್ದರೋ ಅದಕ್ಕಿಂತಲೂ ಹೆಚ್ಚು ಸಾಧನೆಯನ್ನು ಮುಂಬರುವ 25 ವರ್ಷಗಳಲ್ಲಿ ಮಾಡಲಿದ್ದಾರೆ. ಮುಂಬರುವ ದಿನಗಳಲ್ಲಿ ಮಹಿಳೆಯರ ಅಪಾರ ಕೊಡುಗೆಯನ್ನು ನಾನು ನೋಡುತ್ತೇನೆ. ಅದಕ್ಕೆ ಮಹಿಳೆಯರಿಗೆ ನಿಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ