ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್ 19 (Covid 19) ನಿಯಂತ್ರಣ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇನ್ನು ಮುಂದೆ ಇಲ್ಲಿನ ರೆಸ್ಟೋರೆಂಟ್ ಮತ್ತು ಹೋಟೆಲ್ಗಳು ಮಧ್ಯರಾತ್ರಿ 12ಗಂಟೆಯವರೆಗೂ ತೆರೆದಿರಲಿವೆ. ಹಾಗೇ, ಅಂಗಡಿ-ಮುಗ್ಗಟ್ಟುಗಳನ್ನು ರಾತ್ರಿ 11ಗಂಟೆಯವರೆಗೆ ತೆರೆದಿಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ರೆಸ್ಟೋರೆಂಟ್, ಹೋಟೆಲ್, ಅಂಗಡಿಗಳನ್ನಲ್ಲೆ ರಾತ್ರಿ 10ಕ್ಕೆ ಬಂದ್ ಮಾಡಬೇಕಿತ್ತು.
ಮಹಾರಾಷ್ಟ್ರ ರಾಜ್ಯ ಸರ್ಕಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮುಂಬರುವ ಹಬ್ಬದ ಸೀಸನ್ ದೃಷ್ಟಿಯಿಂದ ಅಂಗಡಿ, ರೆಸ್ಟೋರೆಂಟ್, ಹೋಟೆಲ್ಗಳ ಸಮಯ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಹಬ್ಬಗಳ ಹಿನ್ನೆಲೆಯಲ್ಲಿ ಖರೀದಿಗಾಗಿ ಬರುವ ಜನರ ಸಂಖ್ಯೆ ಹೆಚ್ಚಿರುತ್ತದೆ. ರಾತ್ರಿ 10ಗಂಟೆಗೆ ಎಲ್ಲವೂ ಬಂದ್ ಆಗುತ್ತದೆ ಎಂಬ ಕಾರಣಕ್ಕೆ ಒಂದೇ ಬಾರಿಗೆ ಹೆಚ್ಚೆಚ್ಚು ಜನರು ಬರುತ್ತಾರೆ. ಹೀಗಾದರೆ ಜನಸಂದಣಿ ಅಧಿಕಗೊಳ್ಳುತ್ತದೆ. ಇದನ್ನು ತಪ್ಪಿಸಲು ಎಲ್ಲ ರೀತಿಯ ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್ಗಳ ಸಮಯವನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ.
ಈಗ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರ ಸಹಿ ಇದೆ. ಹಾಗೇ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳಬೇಕು ಎಂದೂ ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ ಕೊವಿಡ್ 19 ಸೋಂಕಿನ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಮುಂಬೈನಲ್ಲಿ ಭಾನುವಾರ ಕೊರೊನಾದಿಂದ ಒಬ್ಬರೂ ಮೃತಪಟ್ಟಿದ್ದು ವರದಿಯಾಗಿಲ್ಲ. 2020ರ ಮಾರ್ಚ್ 26ರಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಕೊರೊನಾದಿಂದ ಯಾರೂ ಮೃತಪಟ್ಟಿದ್ದು ವರದಿಯಾಗಿಲ್ಲ. ಹಾಗೇ, ಅಕ್ಟೋಬರ್ 22ರಿಂದ ರಾಜ್ಯದ ಅಮ್ಯೂಸ್ಮೆಂಟ್ ಪಾರ್ಕ್ಗಳು ಕಾರ್ಯನಿರ್ವಹಿಸಬಹುದು ಎಂದು ಸೋಮವಾರವಷ್ಟೇ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಹಾಗೇ, ಅಕ್ಟೋಬರ್ 22ರಿಂದ ಸಿನಿಮಾ ಹಾಲ್ಗಳು, ರಂಗಭೂಮಿ ವೇದಿಕೆಗಳನ್ನೂ ತೆರೆಯಬಹುದು, ಆದರೆ ಶೇ.50ರಷ್ಟು ಪ್ರೇಕ್ಷಕರ ಸಾಮರ್ಥ್ಯದಲ್ಲಿ ಪ್ರದರ್ಶನಗಳು ನಡೆಯಬೇಕು ಎಂದು ಕೂಡ ಸರ್ಕಾರ ಆದೇಶ ಹೊರಡಿಸಿದೆ.
Restaurants & eateries can now remain open till 12 midnight, while shops and establishments can stay open till 11 pm with immediate effect. pic.twitter.com/HqPXctl620
— CMO Maharashtra (@CMOMaharashtra) October 19, 2021
ಇದನ್ನೂ ಓದಿ: ಬಹುತೇಕ ಉಪಚುನಾವಣೆಗಳಲ್ಲಿ ನಾವು ಸೋತಿದ್ದೇವೆ, ಕಷ್ಟದಲ್ಲಿದ್ದೇವೆ: ಎಚ್ಡಿ ಕುಮಾರಸ್ವಾಮಿ