ಬಹುತೇಕ ಉಪಚುನಾವಣೆಗಳಲ್ಲಿ ನಾವು ಸೋತಿದ್ದೇವೆ, ಕಷ್ಟದಲ್ಲಿದ್ದೇವೆ: ಎಚ್​ಡಿ ಕುಮಾರಸ್ವಾಮಿ

ಬಹುತೇಕ ಉಪಚುನಾವಣೆಗಳಲ್ಲಿ ನಾವು ಸೋತಿದ್ದೇವೆ, ಕಷ್ಟದಲ್ಲಿದ್ದೇವೆ: ಎಚ್​ಡಿ ಕುಮಾರಸ್ವಾಮಿ
ಹೆಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ಸರ್ಕಾರವು ತೆರಿಗೆ ಹಣದಲ್ಲಿಯೂ ಲೂಟಿ ಹೊಡೆಯುತ್ತಿದೆ. ಸಮ್ಮಿಶ್ರ ಸರ್ಕಾರ ನಡೆಸುವಾಗ ಪಟ್ಟ ಯಾತನೆ ನನಗೊಬ್ಬನಿಗೆ ಗೊತ್ತು ಎಂದು ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 19, 2021 | 4:30 PM

ವಿಜಯಪುರ: ಉಪಚುನಾವಣೆಯಲ್ಲಿ ಯಾವ ಪಕ್ಷ ಗೆದ್ದರೂ-ಸೋತರೂ ಸರ್ಕಾರ ಬದಲಾಗುವುದಿಲ್ಲ. ನಾವು ಕಷ್ಟದಲ್ಲಿದ್ದೇವೆ, ಹೀಗಾಗಿಯೇ ನಿಮ್ಮ ಬಳಿ ಬಂದಿದ್ದೇನೆ. ಬಹುತೇಕ ಉಪ ಚುನಾವಣೆಗಳಲ್ಲಿ ನಾವು ಸೋತಿದ್ದೇವೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಹೇಳಿದರು. ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಪ್ರಚಾರ ನಡೆಸಿದರು.

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೆ, ಆದರೆ ಪ್ರಚಾರ ಸಿಗಲಿಲ್ಲ. ಬಿಜೆಪಿ ಸರ್ಕಾರವು ತೆರಿಗೆ ಹಣದಲ್ಲಿಯೂ ಲೂಟಿ ಹೊಡೆಯುತ್ತಿದೆ. ಸಮ್ಮಿಶ್ರ ಸರ್ಕಾರ ನಡೆಸುವಾಗ ಪಟ್ಟ ಯಾತನೆ ನನಗೊಬ್ಬನಿಗೆ ಗೊತ್ತು. ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿದ್ರೆ ನಮ್ಮ ಬಲ ಹೆಚ್ಚಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ನವರು ನರೇಂದ್ರ ಮೋದಿ ಅವರನ್ನು ಹೆಬ್ಬೆಟ್ ಪ್ರಧಾನಿ ಎನ್ನುತ್ತಾರೆ. ಬಿಜೆಪಿಯವರು ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆಯುತ್ತಾರೆ. ಆದರೆ ನಾನು ಅಭಿವೃದ್ಧಿ ಪರವಾದ ರಾಜಕೀಯ ಮಾಡುತ್ತಿದ್ದೇನೆ. ಇಂಥ ಹೇಳಿಕೆಗಳನ್ನು ಕೊಡುವುದಿಲ್ಲ ಎಂದು ತಮ್ಮ ಕಾರ್ಯತಂತ್ರವನ್ನು ವಿವರಿಸಿದರು.

ಸಿಂದಗಿಯ ನಮ್ಮ ಶಾಸಕ ಮನಗೂಳಿ ಮತ್ತು ದೇವೇಗೌಡರಿಗೆ ಅವಿನಾಭಾವ ಸಂಬಂಧವಿತ್ತು. ಮನಗೂಳಿ ಇದ್ದಾಗಲು ಅವರಿಬ್ಬರ ಪುತ್ರರು ಜಗಳ ಮಾಡಿದ್ದರು. ಈಗಿನ ಕಾಂಗ್ರೆಸ್ ಅಭ್ಯರ್ಥಿ ಮನಗೂಳಿ ಅವರ ಲೆಟರ್ ಹೆಡ್ ಮಾರಾಟ ಮಾಡಿಕೊಂಡಿದ್ದ. ನನಗೆ ಸಿದ್ದರಾಮಯ್ಯ ಅವರ ಭಯವಿಲ್ಲ, ಆದರೆ ಅವರಿಗೆ ನನ್ನ ಭಯವಿದೆ. ಅವರೇ ಪದೇಪದೆ ನಮ್ಮ ಹೆಸರು ಪ್ರಸ್ತಾಪಿಸುತ್ತಾರೆ. ಅವರು ಸುಮ್ಮನಾದರೆ ನಾನೂ ಸುಮ್ಮನಾಗುವೆ ಎಂದು ಹೇಳಿದರು.

ನನಗೆ ಆರ್‌ಎಸ್‌ಎಸ್ ಸಹವಾಸ ಬೇಡ. ಅಲ್ಲಿಗೆ ಹೋಗಿ ಬಂದವರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಆರ್​ಎಸ್​ಎಸ್​ ಶಾಖೆಯಿಂದ ಬಂದವರು ವಿಧಾನಸಭೆಯಲ್ಲಿ ಏನು ಮಾಡಿದ್ದಾರೆ ಎಂದು ಗೊತ್ತಿದೆ. ಇದನ್ನೇ ತಾನೆ ಅವರು ಆರ್​ಎಸ್​ಎಸ್​ ಶಾಖೆಯಲ್ಲಿ ಕಲಿಸಿದ್ದು. ಅದನ್ನು ಕಲಿಯುವ ಅವಶ್ಯಕತೆ ನನಗಿಲ್ಲ. ಬಡವರ ಶಾಖೆಯಲ್ಲಿ ಕಲಿತದ್ದೇ ನನಗೆ ಸಾಕು ಎಂದು ನುಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಡ್ರಗ್ ಪೆಡ್ಲರ್ ಎಂದು ದೂರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ನಿಟ್ಟಿನಲ್ಲಿ ಆರೋಪ ಮಾಡುವುದು ಸರಿಯಲ್ಲ. ನಾನು ಎಂದಿಗೂ ಅಂಥ ಕೀಳು ರಾಜಕೀಯಕ್ಕೆ ಹೋಗುವುದಿಲ್ಲ ಎಂದರು.

ಇದನ್ನೂ ಓದಿ: ನನ್ನ ತೋಟದ ಮನೆಯಲ್ಲಿ ವೃದ್ಧಾಶ್ರಮ ಅಥವಾ ಅನಾಥಾಶ್ರಮ ನಿರ್ಮಿಸುವೆ: ಎಚ್​ಡಿಕೆ ಇದನ್ನೂ ಓದಿ: ಸಿದ್ದರಾಮಯ್ಯ ಜೆಡಿಎಸ್​ನಲ್ಲಿದ್ದಾಗಲೂ ಕುಮಾರಸ್ವಾಮಿ ವಿಷ ಕಾರುತ್ತಿದ್ದರು: ಜಮೀರ್ ಅಹ್ಮದ್

Follow us on

Related Stories

Most Read Stories

Click on your DTH Provider to Add TV9 Kannada