ಸಿದ್ದರಾಮಯ್ಯ ಜೆಡಿಎಸ್​ನಲ್ಲಿದ್ದಾಗಲೂ ಕುಮಾರಸ್ವಾಮಿ ವಿಷ ಕಾರುತ್ತಿದ್ದರು: ಜಮೀರ್ ಅಹ್ಮದ್

ಸಿದ್ದರಾಮಯ್ಯ ಯಾರನ್ನೂ ರಾಜಕೀಯವಾಗಿ ಮುಗಿಸಲ್ಲ. ಆದರೆ ಕುಮಾರಸ್ವಾಮಿ ಹಾಗಲ್ಲ ಎಂದು ಜಮೀರ್ ವಿಶ್ಲೇಷಿಸಿದರು

ಸಿದ್ದರಾಮಯ್ಯ ಜೆಡಿಎಸ್​ನಲ್ಲಿದ್ದಾಗಲೂ ಕುಮಾರಸ್ವಾಮಿ ವಿಷ ಕಾರುತ್ತಿದ್ದರು: ಜಮೀರ್ ಅಹ್ಮದ್
ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್

ಬೆಂಗಳೂರು: ಸಿದ್ದರಾಮಯ್ಯ ಜಾತ್ಯತೀತ ಜನತಾದಳದಲ್ಲಿ ಇದ್ದಾಗಲೂ ಅವರ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಿಷ ಕಾರುತ್ತಿದ್ದರು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಸೋಮವಾರ ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಯಾರನ್ನೂ ರಾಜಕೀಯವಾಗಿ ಮುಗಿಸಲ್ಲ. ಆದರೆ ಕುಮಾರಸ್ವಾಮಿ ಹಾಗಲ್ಲ ಎಂದು ಜಮೀರ್ ವಿಶ್ಲೇಷಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಹಜ್ ಖಾತೆ ಸಿಕ್ಕಿತ್ತು. ನಾನು ಕಾಂಗ್ರೆಸ್‌ಗೆ ಬಂದ ತಕ್ಷಣ ಆಹಾರ ಖಾತೆ ಕೊಟ್ಟರು ಎಂದು ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಂಡರು. ಜಾಫರ್ ಷರೀಫ್ ಮೊಮ್ಮಗನನ್ನು ರಾಜಕೀಯವಾಗಿ ಮುಗಿಸಿದ್ದೇ ಕುಮಾರಸ್ವಾಮಿ ಎಂದ ಅವರು, ಭೈರತಿ ಸುರೇಶ್‌ಗೆ ಮತ ಹಾಕಿಸಲು ಎಷ್ಟಕ್ಕೆ ಡೀಲ್ ಮಾಡಿದ್ರಿ ಎಂದು ನೇರವಾಗಿ ಪ್ರಶ್ನಿಸಿದರು.

ತನ್ನ ಸ್ವಂತ ಅಣ್ಣ ರೇವಣ್ಣ ಅವರನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ. ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಕೊಡಲಿಲ್ಲ. ಬಿಎಸ್‌ವೈಗೆ ಅಧಿಕಾರ ಬಿಟ್ಟುಕೊಟ್ರೆ ರೇವಣ್ಣ ಡಿಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಬಿಜೆಪಿಗೆ ಕುಮಾರಸ್ವಾಮಿ ಅಧಿಕಾರ ಬಿಟ್ಟು ಕೊಡಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿಜವಾದ ಜಾತ್ಯತೀತ ನಾಯಕ. ಅವರ ಎತ್ತರದಲ್ಲಿ ಎಚ್​ಡಿಕೆ ಒಂದು ಪರ್ಸೆಂಟ್ ಸಹ ಇಲ್ಲ ಎಂದು ವ್ಯಂಗ್ಯವಾಡಿದರು.

ಜೆಡಿಎಸ್​ನಲ್ಲಿದ್ದಾಗ ನಾನೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಆದರೆ ಸಿದ್ದರಾಮಯ್ಯ ನನ್ನನ್ನು ಮುಗಿಸಬೇಕು ಅಂದುಕೊಂಡಿದ್ರೆ ಆಹಾರ ಖಾತೆ ಕೊಡಿಸುತ್ತಿರಲಿಲ್ಲ. ನನಗೆ ಸಮ್ಮಿಶ್ರ ಸರ್ಕಾರದಲ್ಲಿ ಇವರು ಹಜ್ ಖಾತೆ ಕೊಟ್ಟಿದ್ರು. ಕುಮಾರಸ್ವಾಮಿ ನನ್ನ ಯೋಗ್ಯತೆಯನ್ನು ಅಳೆದಿದ್ದ ರೀತಿ ಹಾಗಿತ್ತು. ನಾನು ಕಾಂಗ್ರೆಸ್ ಬಂದ ತಕ್ಷಣ ನನಗೆ ಅಹಾರ ಖಾತೆ ಕೊಟ್ಟರು. ಜಾಫರ್ ಷರೀಫ್ ಮೊಮ್ಮಗನಿಗೆ ಅನ್ಯಾಯ ಆಗುತ್ತೆ ಅನ್ನಿಸಿದಾಗ ಮುಸ್ಲಿಮರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದೆ. ದೇವೇಗೌಡರ ಬಳಿಯೂ ಕೇಳಿಕೊಂಡೆ ಎಂದು ವಿವರಿಸಿದರು.

ಜೆಡಿಎಸ್​ ಕರ್ನಾಟಕದ ಪಕ್ಷ ತಾನೆ, ಇವರು ಹೈಕಮಾಂಡ್​ ಅನುಮತಿ ಕೇಳಲು ದೆಹಲಿಗೆ ಹೋಗಬೇಕಿಲ್ಲ. ನೀವು ಪದ್ಮನಾಭನಗರದಲ್ಲಿಯೇ ಏನು ಬೇಕಾದರೂ ಅನೌನ್ಸ್ ಮಾಡಬಹುದು. ಮಾಡಿಬಿಡಿ ಎಂದು ಜೆಡಿಎಸ್ ನಾಯಕರಿಗೆ ಜಮೀರ್ ಅಹಮದ್ ಖಾನ್ ಸವಾಲು ಹಾಕಿದರು. ರಾಮನಗರ ಕ್ಷೇತ್ರವನ್ನು ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯವಾದರೂ ಏನಿತ್ತು? ಬೈ ಎಲೆಕ್ಷನ್​ನಲ್ಲಾದ್ರೂ ಹೀಗಂತ ಹೇಳಬೇಕಿತ್ತು. ಅನಿತಾಕ್ಕನಿಗೆ ಕೊಡದೇ ಮುಸ್ಲಿಂ ಅಭ್ಯರ್ಥಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಮುಸ್ಲಿಂ ಕಾಳಜಿ ತೋರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸಿದ್ದರಾಮಯ್ಯ ಮುಸ್ಲಿಂ ನಾಯಕರನ್ನು ಮುಗಿಸುತ್ತಾ ಬಂದಿದ್ದಾರೆ; ನಾಳೆ ಶಾಸಕ ಜಮೀರ್ ಅಹ್ಮದ್​​ರನ್ನೂ ಮುಗಿಸ್ತಾರೆ: ಟಿ.ಎ. ಶರವಣ
ಇದನ್ನೂ ಓದಿ: ಲಾಭ ಇಲ್ಲದೇ ಹೆಚ್​ಡಿ ಕುಮಾರಸ್ವಾಮಿ ಯಾವುದೇ ಕೆಲಸ ಮಾಡಲ್ಲ: ಹೆಚ್​ಡಿಕೆ ವಿರುದ್ಧ ಜಮೀರ್ ಅಹ್ಮದ್ ವಾಗ್ದಾಳಿ

Click on your DTH Provider to Add TV9 Kannada