ಯಾರು ಡೀಲ್ ಮಾಡ್ತಿದ್ರು, ಯಾರು ಕಮಿಷನ್ ತಗೊಳ್ತಿದ್ರು ಎಲ್ಲ ಟೈಂ ಬಂದಾಗ ಹೇಳ್ತೀನಿ: ಜಮೀರ್ ವಿರುದ್ಧ ರೇವಣ್ಣ ಗರಂ
ಕುಮಾರಸ್ವಾಮಿಯಿಂದ ಅನುಕೂಲ ಪಡೆದವರು ಈಗ ಮಾತಾಡ್ತಿದ್ದಾರೆ ಎಂದು ಹಳೆಯ ವಿದ್ಯಮಾನಗಳನ್ನು ನೆನಪಿಸಿಕೊಂಡರು.
ಹಾಸನ: ಯಾರ್ಯಾರ ಬಳಿ ಯಾರು ಡೀಲ್ ಮಾಡುತ್ತಿದ್ದರು. ಯಾರ ಬಳಿ ಯಾರು ಕಮಿಷನ್ ತಗೊಳ್ತಿದ್ರು ಎಲ್ಲವೂ ನನಗೆ ಗೊತ್ತಿಲ್ಲ. ಸಮಯ ಬಂದಾಗ ಎಲ್ಲವನ್ನೂ ಹೇಳ್ತೀನಿ ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಶಾಸಕ ಜಮೀರ್ ಅಹಮದ್ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅವರ ವರ್ತನೆಯ ಬಗ್ಗೆ ಹರಿಹಾಯ್ದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭ ಬಸ್ ಓಡಿಸಿಕೊಂಡಿದ್ದವರು ಯಾರು ಎಂದು ಪ್ರಶ್ನಿಸಿದ ಅವರು, ನಾನು ಆಗಲೇ ಹೇಳಿದ್ದೆ, ಬೇಡ ಕಣಯ್ಯ ಆ ಬಸ್ ಹತ್ತಬೇಡ ಅಂತ. ರಾಜ್ಯದಲ್ಲಿ ಬಿಜೆಪಿ ಬರಬಾರದು ಎಂದಿದ್ದರೆ ಅವರೂ ಅಂದೇ ಕುಮಾರಸ್ವಾಮಿಗೆ ಹೇಳಬಹುದಿತ್ತಲ್ಲವಾ? ಯಾರಾದ್ರೂ ಹೊಗಳಿದರೆ ಕುಮಾರಸ್ವಾಮಿ ಕರಗಿಬಿಡ್ತಾರೆ. ಕುಮಾರಸ್ವಾಮಿಯಿಂದ ಅನುಕೂಲ ಪಡೆದವರು ಈಗ ಮಾತಾಡ್ತಿದ್ದಾರೆ ಎಂದು ಹಳೆಯ ವಿದ್ಯಮಾನಗಳನ್ನು ನೆನಪಿಸಿಕೊಂಡರು.
ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಎರಡೂ ರಾಜಕೀಯ ಪಕ್ಷಗಳು ಏನು ಮಾಡಿದವು ಎಂದು ಬಹಿರಂಗವಾಗಿ ಹೇಳಿಬಿಡಲಿ. ಏನೂ ಮಾಡಿರಲಿಲ್ಲ ಎಂದಾದರೆ ದೇವರ ಮುಂದೆ ಪ್ರಮಾಣ ಮಾಡಲಿ. ಯಾವಾಗ ಯಾರಿಂದ ಅನುಕೂಲ ಬೇಕೋ ತೆಗೆದುಕೊಳ್ಳುವ ಕಾಂಗ್ರೆಸ್ ಪಕ್ಷ ನಂತರ ಅವರನ್ನೇ ಒದ್ದು ಬಿಡುತ್ತದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಇಂಥ ಪರಿಸ್ಥಿತಿ ಬಂದಿದೆ. ನಾವೇನು ನಮ್ಮನೆ ಬಾಗಿಲಿಗೆ ಬನ್ನಿ ಅಂತ ಕಾಂಗ್ರೆಸ್ನ ಕರೆದಿದ್ವಾ? ಆಗ ಅವರೇ ಬಂದು ದೇವೇಗೌಡರ ಕಾಲು ಹಿಡಿದುಕೊಂಡ್ರು. ಆಮೇಲೆ ಅವರೇ ಸರ್ಕಾರವನ್ನೂ ತೆಗೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಲು ಹಳ್ಳಿಯ ರೈತನ ಮಗ ದೇವೇಗೌಡ ಬರಬೇಕಾಯ್ತು. ಇಬ್ರಾಹಿಂ ಅವರನ್ನು ಕಾಂಗ್ರೆಸ್ ದುಡಿಸಿಕೊಂಡು ಮೂಲೆಗುಂಪು ಮಾಡಿತ್ತು. ಆದರೆ ದೇವೇಗೌಡರು ಅವರನ್ನು ಕರೆತಂದು ಕೇಂದ್ರ ಮಂತ್ರಿ ಮಾಡಿದರು ಎಂದು ನೆನಪಿಸಿಕೊಂಡರು.
ನಾವು ಅಲ್ಪ ಸಂಖ್ಯಾತ ಅಭ್ಯರ್ಥಿ ಹಾಕಿದ್ಸಕ್ಕೆ ನಿಮಗ್ಯಾಕೆ ಭಯವಾಗಬೇಕು ಎಂದು ಪ್ರಶ್ನಿಸಿದ ರೇವಣ್ಣ, ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾಂಗ್ರೆಸ್ನ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಕಾರಣ. ಇವರು ಹೇಳುವ ಸುಳ್ಳು ಜಾಸ್ತಿ ದಿನ ನಡೆಯೋದಿಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ 40ರಷ್ಟಿದೆ. ಅಲ್ಲಿ ಅವರೇ ಕಾಂಗ್ರೆಸ್ ಬೇಡ ಅಂತ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಸಮ್ಮುಖದಲ್ಲೇ ‘ಮುಂದಿನ ಮುಖ್ಯಮಂತ್ರಿ’ ಎಂದು ಪುನರುಚ್ಚರಿಸಿದ ಶಾಸಕ ಜಮೀರ್ ಅಹಮದ್! ಇದನ್ನೂ ಓದಿ: ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗಲೂ ಕುಮಾರಸ್ವಾಮಿ ವಿಷ ಕಾರುತ್ತಿದ್ದರು: ಜಮೀರ್ ಅಹ್ಮದ್