ದೆಹಲಿ: ಮತಾಂತರ ಮತ್ತು ಬಾಂಗ್ಲಾದೇಶೀಯರ ಅಕ್ರಮ ವಲಸೆಯಿಂದ ಜನಸಂಖ್ಯೆಯಲ್ಲಿ ಏರುಪೇರಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh – RSS) ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದರು. ಮತಾಂತರ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು. ಪ್ರಯಾಗ್ರಾಜ್ನಲ್ಲಿ ನಡೆದ ನಾಲ್ಕು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ (Akhil Bharatiya Karyakari Mandal) ಸಮಾರೋಪದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ವಿವಿಧೆಡೆ ಮತಾಂತರದ ಸಂಚು ನಡೆಯುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಸಂಘ ಪರಿವಾರವು ಸತತ ಪ್ರಯತ್ನ ಮಾಡುತ್ತಿದೆ ಎಂದರು.
ಸಂಘ ಪರಿವಾರದ ಪರಿಶ್ರಮದಿಂದ ಮರಳಿ ಮಾತೃಧರ್ಮಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಘರ್ ವಾಪಸಿ ಅಭಿಯಾನವೂ ವೇಗ ಪಡೆದುಕೊಂಡಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಂಡವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಅಭಿಯಾನವು ವೇಗ ಪಡೆದುಕೊಂಡಿದೆ ಎಂದು ತಿಳಿಸಿದರು. ಮತಾಂತರಗಳನ್ನು ತಡೆಯಲೆಂದು ಜಾರಿಗೊಳಿಸಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಒತ್ತಾಯ, ಮದುವೆ ಮತ್ತು ಇತರ ಪ್ರಲೋಭನೆಗಳ ಮೂಲಕ ಮತಾಂತರ ಮಾಡುವುದನ್ನು ನಿರ್ಬಂಧಿಸುವ ಕಾನೂನುಗಳನ್ನು ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಜಾರಿಗೆ ತಂದಿವೆ ಎಂದು ಅವರು ನೆನಪಿಸಿಕೊಂಡರು.
ಮತಾಂತರದಿಂದಾಗಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಕ್ರಮ ಒಳನುಸುಳುವಿಕೆಯು ಜನಸಂಖ್ಯೆಯ ಏರುಪೇರಾಗಲು ಇರುವ ಮತ್ತೊಂದು ಮುಖ್ಯ ಕಾರಣವಾಗಿವೆ. ಭಾರತವು 1947ರಲ್ಲಿ ತುಂಡಾಗಲು ಇದು ಮುಖ್ಯ ಕಾರಣವಾಗಿತ್ತು ಎಂದು ಹೊಸಬಾಳೆ ನೆನಪಿಸಿಕೊಂಡರು. ಉತ್ತರ ಬಿಹಾರದ ಪುರ್ನಿಯಾ ಮತ್ತು ಕಾತಿಹಾರ್ ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಂದಾಗಿ ಜನಸಂಖ್ಯೆಯಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ವಲಸೆ ಮತ್ತು ಮತಾಂತರ ವಿಚಾರವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವನ್ನು ನಾನು ಒತ್ತಿ ಹೇಳುತ್ತಿದ್ದೇನೆ. ಇಡೀ ದೇಶಕ್ಕೆ ಅನ್ವಯಿಸುವಂತೆ ಏಕರೂಪದ ಜನಸಂಖ್ಯಾ ನೀತಿಯನ್ನು ಜಾರಿಗಳಿಸಬೇಕು ಎಂದು ಆಗ್ರಹಿಸಿದರು.
ಮತಾಂತರಗೊಂಡವರಿಗೆ ಮೀಸಲಾತಿಯ ಯಾವುದೇ ಸವಲತ್ತು ಸಿಗಬಾರದು ಎಂದು ಒತ್ತಿ ಹೇಳಿದ ಅವರು, ಈ ಕುರಿತು ಪರಿಶೀಲಿಸಲು ರಚಿಸಿದ್ದ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆಯೂ ಸಭೆಯು ಸುದೀರ್ಘ ಚರ್ಚೆ ನಡೆಸಿತು. ಮಹಿಳೆಯರು ಎಲ್ಲಾ ಕ್ಷೇತ್ರಗಳಿಗೂ ಪ್ರವೇಶಿಸುತ್ತಿದ್ದಾರೆ. ಪ್ರಮುಖ ಹುದ್ದೆಗಳಿಗೆ ಮಹಿಳೆಯರು ಬರುವಂತಾಗಲು ಪೂರಕ ವಾತಾವರಣ ನಿರ್ಮಿಸಬೇಕಿದೆ ಎಂದು ಅವರು ಹೇಳಿದರು.
ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯಗಳಲ್ಲಿ ‘ನಾನೂ ಒಬ್ಬ ಹಿಂದೂ’ ಎನ್ನುವ ಮನೋಭಾವ ಸಾಕಷ್ಟು ಜನರಲ್ಲಿ ಬೆಳೆದಿದೆ. ಇದಕ್ಕೆ ಆರ್ಎಸ್ಎಸ್ ನಡೆಸಿದ ಜಾಗೃತಿ ಮೂಡಿಸುವ ಚಟುವಟಿಕೆಗಳು ಮುಖ್ಯ ಕಾರಣ. ಈಗ ಅವರೂ ಸಂಘ ಪರಿವಾರದ ಭಾಗವಾಗಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು. ಕಳೆದ 40-50 ವರ್ಷಗಳಿಂದ ಜನಸಂಖ್ಯೆ ನಿಯಂತ್ರಣ ಕ್ರಮಗಳಿಗೆ ಉತ್ತೇಜನ ನೀಡಿದ್ದರಿಂದ ಪ್ರತಿ ಕುಟುಂಬದ ಸರಾಸರಿ ಸಂಖ್ಯೆಯ ಪ್ರಮಾಣ ಶೇ 3.4ರಿಂದ ಶೇ 1.9ಕ್ಕೆ ಇಳಿದಿದೆ. ಮುಂದೊಂದು ದಿನ ದೇಶದ ಯುವಕರ ಸಂಖ್ಯೆ ಕಡಿಮೆಯಾಗಲಿದೆ. ಇದು ಆತಂಕಕಾರಿ ವಿದ್ಯಮಾನ ಎಂದು ವಿಶ್ಲೇಷಿಸಿದರು.
ಆರ್ಎಸ್ಎಸ್ನ ಶತಮಾನೋತ್ಸವ (2025) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಘ ಪರಿವಾರವು ತನ್ನ ಕೆಲಸಗಳಿಗೆ ಹೊಸ ವೇಗ ನೀಡಿಲಿದೆ. 2024ರ ಅಂತ್ಯದ ಹೊತ್ತಿಗೆ ದೇಶದ ಎಲ್ಲ ವಿಭಾಗಗಳಲ್ಲಿ ಕನಿಷ್ಠ ಒಂದಾದರೂ ಶಾಖೆ ಇರಬೇಕು ಎನ್ನುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ದೇಶದಲ್ಲಿ ಈವರೆಗೆ 54,382 ಶಾಖೆಗಳಿದ್ದವು. ಕಳೆದ ಒಂದು ವರ್ಷದ ಅವಧಿಯಲ್ಲಿ ಶಾಖೆಗಳ ಸಂಖ್ಯೆಯು 61,045ಕ್ಕೆ ಏರಿಕೆಯಾಗಿದೆ. ಆರ್ಎಸ್ಎಸ್ ಪ್ಲಾಟ್ಫಾರ್ಮ್ ಮೂಲಕ ಸಂಘಪರಿವಾರಕ್ಕೆ 1,30,000 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಪ್ರಯಾಗ್ರಾಜ್ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಸರಸಂಘಚಾಲಕ ಮೋಹನ್ ಭಾಗವತ್ ವಹಿಸಿದ್ದರು. ಮಹಾರಾಷ್ಟ್ರದ ನಾಗಪುರದಲ್ಲಿ ಇತ್ತೀಚೆಗೆ ನಡೆದಿದ್ದ ವಿಜಯದಶಮಿ ಸಮಾರಂಭದಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಜನಸಂಖ್ಯೆಯ ಅಸಮತೋಲನದ ಬಗ್ಗೆ ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಅಖಂಡ ಭಾರತ ನಿರ್ಮಾಣ, ಹಿಂದೂರಾಷ್ಟ್ರದ ನಿಲುವು, ನೂತನ ಜನಸಂಖ್ಯಾ ನೀತಿಯ ಬಗ್ಗೆ ಮೋಹನ್ ಭಾಗವತ್ ಪ್ರಸ್ತಾಪ
ಇದನ್ನೂ ಓದಿ: ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ: ಮೋಹನ್ ಭಾಗವತ್‍ಗೆ ಓವೈಸಿ ತಿರುಗೇಟು
Published On - 9:33 am, Thu, 20 October 22