Big News: ಧರ್ಮಶಾಲಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶತ್ರು ರಾಷ್ಟ್ರಗಳಾದ ರಷ್ಯಾ- ಉಕ್ರೇನ್ ವಧು-ವರರು
ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಪ್ರೀತಿಯಿಂದ ಈ ದೇಶಗಳ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಒಟ್ಟಿಗೇ ಬದುಕಲು ನಿರ್ಧರಿಸಿದ್ದಾರೆ.
ಹಿಮಾಚಲ ಪ್ರದೇಶ: ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ, ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು ಎಂಬುದು ಅಕ್ಷರಶಃ ಸತ್ಯ. ರಷ್ಯಾ (Russia) ಮೂಲದ ವರ ಮತ್ತು ಉಕ್ರೇನಿಯನ್ (Ukranian) ಮೂಲದ ವಧು ಸೋಮವಾರ ಧರ್ಮಶಾಲಾದಲ್ಲಿ (Dharmashala) ವಿವಾಹವಾಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಪ್ರೀತಿಯಿಂದ ಈ ದೇಶಗಳ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಒಟ್ಟಿಗೇ ಬದುಕಲು ನಿರ್ಧರಿಸಿದ್ದಾರೆ. ಅಲ್ಲದೆ, “ಪ್ರೀತಿ ಮಾಡಬೇಕೇ ಹೊರತು ಯುದ್ಧವನ್ನಲ್ಲ” ಎಂದು ಅವರಿಬ್ಬರೂ ಸಂದೇಶ ರವಾನಿಸಿದ್ದಾರೆ.
ತಮ್ಮ ಮದುವೆಯ ಬಗ್ಗೆ ಮಾತನಾಡಿರುವ ವರ ಸೆರ್ಗೆ ನೊವಿಕೋವ್, ನಾವು ಇಸ್ರೇಲ್ ಮತ್ತು ಉಕ್ರೇನ್‌ನಿಂದ ಇಲ್ಲಿಗೆ ಬಂದಿದ್ದೇವೆ. ನಾವು ಕಳೆದ ವರ್ಷ ಭಾರತಕ್ಕೆ ಬಂದಿದ್ದೇವೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇದು ವಿಶೇಷ ಸ್ಥಳ ಎಂದು ನಿರ್ಧರಿಸಿದ ನಾವು ಧರ್ಮಶಾಲಾದಲ್ಲಿ ಮದುವೆಯಾಗಿದ್ದೇವೆ. ಹಿಂದೆ ರಷ್ಯಾ ಮತ್ತು ಉಕ್ರೇನ್ ಸಹೋದರರಂತೆ ಇದ್ದವು. ಈಗ ಬದ್ಧ ವೈರಿಗಳಾಗಿವೆ. ನಾವು ಪ್ರೀತಿ ಮಾಡಬೇಕೇ ಹೊರತು ಯುದ್ಧವನ್ನಲ್ಲ ಎಂದಿದ್ದಾರೆ.
ಇದನ್ನೂ ಓದಿ: Kerala: ಕೇರಳದ ಸಿಎಂ ಮುಂದೆ ಮದುವೆಯಾದ ದೇಶದ ಅತ್ಯಂತ ಕಿರಿಯ ಮೇಯರ್, ಕೇರಳದ ಅತ್ಯಂತ ಕಿರಿಯ ಶಾಸಕ
“ನಾನು ಇಸ್ರೇಲ್ನಲ್ಲಿ ಸೆರ್ಗೆಯನ್ನು ಭೇಟಿಯಾದೆ. ನಾವು ಸುಮಾರು 6 ವರ್ಷಗಳಿಂದ ಒಟ್ಟಿಗೆ ಇದ್ದೇವೆ. ನಾವು ಭಾರತಕ್ಕೆ ಬಂದಾಗ ಇಲ್ಲಿಯೇ ನಾವು ಮದುವೆಯಾಗಲು ನಿರ್ಧರಿಸಿದೆವು. ನಾವು ಭಾರತ ಮತ್ತು ಇಲ್ಲಿನ ಸಂಸ್ಕೃತಿಯನ್ನು ಇಷ್ಟಪಡುತ್ತೇವೆ. ಭಾರತದ ಸಂಸ್ಕೃತಿ ತುಂಬಾ ಸುಂದರವಾಗಿದೆ ಎಂದು ವಧು ಅಲೋನಾ ಬರ್ಮಾಕಾ ಹೇಳಿದ್ದಾರೆ. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಇವರಿಬ್ಬರ ವಿವಾಹವನ್ನು ನೋಂದಾಯಿಸಲಾಗಿದೆ. ವಧು ಉಕ್ರೇನಿಯನ್ ಪ್ರಜೆಯಾಗಿದ್ದು, ವರನು ರಷ್ಯಾ ಮೂಲದ ಇಸ್ರೇಲಿ ಪ್ರಜೆಯಾಗಿದ್ದಾರೆ.