Mission 2024: ಇಂದು ಬಿಜೆಪಿ ಮಹತ್ವದ ಸಭೆ; 144 ಲೋಕಸಭಾ ಕ್ಷೇತ್ರಗಳ ಪ್ರವಾಸ ವಿವರ ನೀಡಲಿರುವ ಪ್ರಮುಖ ಕೇಂದ್ರ ಸಚಿವರು
ಸಂಘಟನೆ ದೃಷ್ಟಿಯಿಂದ ಪಕ್ಷದ ಬಲ ಕಡಿಮೆ ಇರುವ 144 ಲೋಕಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ.
ದೆಹಲಿ: 2024ರ ಲೋಕಸಭಾ ಚುನಾವಣೆಗೆ (Loksabha Eletion 2024) ಸಿದ್ಧತೆಯ ಹಿನ್ನೆಲೆಯಲ್ಲಿ ಬಿಜೆಪಿ (BJP) ಇಂದು ಸಂಜೆ 4.30ಕ್ಕೆ ಮಹತ್ವದ ಸಭೆ ಕರೆದಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಯಲಿದೆ. ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿರುವ ಸಭೆಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಮತ್ತು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santosh) ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಬಿಜೆಪಿಯು ಪ್ರದೇಶವಾರು ಕ್ಲಸ್ಟರ್ಗಳನ್ನು ರಚಿಸಿದ್ದು, ಉಸ್ತುವಾರಿ ಸಚಿವರನ್ನು ನೇಮಿಸಿದೆ.
ಸಂಘಟನೆ ದೃಷ್ಟಿಯಿಂದ ಪಕ್ಷದ ಬಲ ಕಡಿಮೆ ಇರುವ 144 ಲೋಕಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರಗಳನ್ನು ಹಲವು ಕ್ಲಸ್ಟರ್ಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಕ್ಲಸ್ಟರ್ಗೆ ಒಬ್ಬೊಬ್ಬ ಸಚಿವರನ್ನು ನಿಯೋಜಿಸಲಾಗಿದೆ. ಸಚಿವರಾದ ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಪೀಯೂಷ್ ಗೋಯೆಲ್, ಭೂಪೇಂದ್ರ ಯಾದವ್, ಅನುರಾಗ್ ಠಾಕೂರ್, ನರೇಂದ್ರ ತೋಮರ್, ಸಂಜೀವ್ ಬಲ್ಯಾನ್ ಮತ್ತು ಮಹೇಂದ್ರ ಪಾಂಡೆ ಸೇರಿದಂತೆ ಹಲವು ಪ್ರಮುಖ ಸಚಿವರಿಗೆ ಸಂಘಟನೆಯ ಜವಾಬ್ದಾರಿ ವಹಿಸಲಾಗಿದೆ.
ಮಂಗಳವಾರದ ಸಭೆಯಲ್ಲಿಯೇ ಸಚಿವರು ತಮ್ಮ ವರದಿಗಳನ್ನು ನರೇಂದ್ರ ಮೋದಿ ಅವರಿಗೆ ನೀಡಲಿದ್ದಾರೆ. ಈ ಕ್ಷೇತ್ರಗಳ ಸದ್ಯದ ಸ್ಥಿತಿಗತಿ ಮತ್ತು ಇಲ್ಲಿ ಪಕ್ಷವನ್ನು ಸದೃಢಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ವಿವರಿಸಲಿದ್ದಾರೆ. ಈ ಕ್ಷೇತ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಲು ಆಗಸ್ಟ್ 31ರವರೆಗೆ ಸಮಯ ನೀಡಲಾಗಿತ್ತು.
2019ರಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಬಿಜೆಪಿಯು ಸೋಲು ಅನುಭವಿಸಿದ್ದ 144 ಲೋಕಸಭಾ ಕ್ಷೇತ್ರಗಳನ್ನು ಗುರುತಿಸಿ, ಸಂಘಟನೆಗಾಗಿ ಗಮನ ಹರಿಸಲು ಕಳೆದ ಮೇ 25ರಂದು ನಡೆದಿದ್ದ ಸಭೆಯಲ್ಲಿ ಬಿಜೆಪಿಯ ನಾಯಕರು ನಿರ್ಧರಿಸಿದ್ದರು. ಈ ಕ್ಷೇತ್ರಗಳಲ್ಲಿ ಕನಿಷ್ಠ 48 ಗಂಟೆ ಉಳಿದುಕೊಂಡು ವರದಿಗಳನ್ನು ಸಿದ್ಧಪಡಿಸಬೇಕು ಎಂದು ಕೇಂದ್ರ ಸಚಿವರಿಗೆ ಸೂಚಿಸಲಾಗಿತ್ತು. ಈ ಸೂಚನೆಯಂತೆ ಎಲ್ಲ ಸಚಿವರೂ ತಮಗೆ ನಿಗದಿಪಡಿಸಿದ್ದ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ವರದಿಗಳನ್ನು ಸಿದ್ಧಪಡಿಸಿದ್ದಾರೆ.
ಈ ವರದಿಗಳನ್ನು ಪರಿಶೀಲಿಸಿದ ನಂತರ ಬಿಜೆಪಿ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾ ಮತ್ತು ಬಿ.ಎಲ್.ಸಂತೋಷ್ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.