ಚೆನ್ನೈ: ಉಕ್ರೇನ್ (Ukraine) ಮೇಲೆ ರಷ್ಯಾ ಯುದ್ಧ ಸಾರಿದೆ. ಇದರಿಂದಾಗಿ ಅನೇಕ ಭಾರತೀಯರೂ ಕೂಡ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದಾಗಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ತಮಿಳುನಾಡಿನ ಸುಮಾರು 5,000 ವಿದ್ಯಾರ್ಥಿಗಳ ವಾಪಸಾತಿ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (Tamil Nadu CM MK Stalin) ಘೋಷಿಸಿದ್ದಾರೆ. ತಮಿಳುನಾಡಿನ ಸುಮಾರು 5,000 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ 916 ವಿದ್ಯಾರ್ಥಿಗಳು ಇಂದು ಬೆಳಗ್ಗೆಯ ವೇಳೆಗೆ ತಮಿಳುನಾಡು ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮಿಳುನಾಡಿನ ವಿದ್ಯಾರ್ಥಿಗಳ ಸಹಾಯಕ್ಕಾಗಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಈ ಕುರಿತು ಘೋಷಿಸಲಾಗಿದೆ. ಗುರುವಾರ ಸಂಜೆ ಸಿಎಂ ಸ್ಟಾಲಿನ್ ಉಕ್ರೇನ್‌ನಿಂದ ತಮಿಳುನಾಡಿನ ವಿದ್ಯಾರ್ಥಿಗಳನ್ನು ತುರ್ತಾಗಿ ಸ್ವದೇಶಕ್ಕೆ ಕರೆತರಲು ಸಹಾಯವನ್ನು ಕೋರಿದ್ದರು. ಉಕ್ರೇನ್‌ನಲ್ಲಿ ಸಿಕ್ಕಿಬಿದ್ದವರ ಕುಟುಂಬದ ಸದಸ್ಯರು ಮತ್ತು ಪೋಷಕರಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಕರೆಗಳು ಬರುತ್ತಿದೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರ ತಮಿಳುನಾಡಿನ ವಿದ್ಯಾರ್ಥಿಗಳ ಕುಟುಂಬಗಳು ಮತ್ತು ತಮಿಳುನಾಡಿನ ಆಯಾ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ಸರ್ಕಾರವು 24 ಗಂಟೆಗಳ ಸಹಾಯ ಕೇಂದ್ರವನ್ನು ತೆರೆದಿದೆ. ಅದಕ್ಕಾಗಿ ತಮಿಳುನಾಡು ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ರಷ್ಯಾ ಗುರುವಾರ ಸಂಜೆ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಕ್ರೇನ್‌ನ ಹಲವು ನಗರಗಳಲ್ಲಿ ಸ್ಫೋಟದ ಸದ್ದು ಪ್ರತಿಧ್ವನಿಸಿದೆ. ರಷ್ಯಾದ ಸೇನೆಯು ಇದುವರೆಗೂ ಉಕ್ರೇನ್‌ನ 137 ಜನರನ್ನು ಹತ್ಯೆ ಮಾಡಿದೆ. ಆದರೆ, ನೂರಾರು ಜನರು ಗಾಯಗೊಂಡಿದ್ದಾರೆ. ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಶುಕ್ರವಾರ ಬೆಳಗ್ಗೆಯಿಂದ ಕೀವ್‌ನಲ್ಲಿ 6 ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟಗಳನ್ನು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ನಡೆಸಲಾಗಿದೆ.
ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆ ಖಡಕ್ ತಿರುಗೇಟು ನೀಡುತ್ತಿರುವ ಉಕ್ರೇನ್ ಸೈನಿಕರು 800 ರಷ್ಯನ್ ಸೈನಿಕರನ್ನು ಹೊಡೆದುರುಳಿಸಿದ್ದಾರೆ. ಉಕ್ರೇನ್ ಭದ್ರತಾ ಪಡೆಗಳು ಮೊದಲ ದಿನವೇ 800 ರಷ್ಯನ್ ಸೈನಿಕರನ್ನು ಹೊಡೆದುರುಳಿಸಿದ್ದು ಮಾತ್ರವಲ್ಲದೆ ರಷ್ಯಾ ಸೇನೆಗೆ ಸೇರಿದ 7 ಯುದ್ಧ ವಿಮಾನಗಳು, 6 ಸೇನಾ ಕಾಪ್ಟರ್ ಗಳು, 30 ಯುದ್ಧ ಟ್ಯಾಂಕರ್ ಗಳನ್ನು ಧ್ವಂಸ ಮಾಡಲಾಗಿದೆ. ಹಾಗೇ, ರಷ್ಯಾ ಸೇನೆಗೆ ಸೇರಿದ್ದ 130 ಮೊಬೈಲ್ ಮಿಸೈಲ್ ಲಾಂಚರ್ ಗಳನ್ನು ಉಕ್ರೇನ್ ಸೇನೆ ನಾಶ ಮಾಡಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ಮಕ್ಕಳು ಬಂಕರ್ ನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ