ಮುಂಬೈ: ಕ್ರೂಸ್ ಶಿಪ್ ಡ್ರಗ್ಸ್ ಪಾರ್ಟಿಯಲ್ಲಿ (Mumbai Cruise Ship Case) ಸಿಲುಕಿದ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಬಂಧನದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (ಎನ್‌ಸಿಬಿ) ಮುಂಬೈ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ (Sameer Wankhede) ಅವರು ತಮ್ಮ ಅವಧಿಯ ವಿಸ್ತರಣೆಯನ್ನು ಕೋರುವುದಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 2020ರಿಂದ ಎನ್ಸಿಬಿಯಲ್ಲಿ (NCB) ನಿಯೋಜನೆಯಲ್ಲಿದ್ದ ವಾಂಖೆಡೆಯವರ ಅವಧಿ 2021ರ ರಂದು ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ. ತಮ್ಮ ಅವಧಿಯಲ್ಲಿ ವಾಂಖೆಡೆ ಮಹತ್ವದ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರು. ನಟಿ ರಿಯಾ ಚಕ್ರವರ್ತಿಯಿಂದ (Riya Chakravarthy) ಆರಂಭಿಸಿ ಬಾಲಿವುಡ್ನ ಹಲವಾರು ಪ್ರಮುಖ ವ್ಯಕ್ತಿಗಳನ್ನು ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿಸಿ ಅಥವಾ ವಿಚಾರಣೆ ನಡೆಸಿ ಮಾದಕ ವಸ್ತು ಜಾಲವನ್ನು ಮಟ್ಟಹಾಕಲು ವಾಂಖೆಡೆ ಕ್ರಮ ಕೈಗೊಂಡಿದ್ದರು.
ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ (Nawab Malik) ಅವರು ಎನ್‌ಸಿಬಿ ಕಾರ್ಯನಿರ್ವಹಣೆಯಲ್ಲಿನ ಹಲವಾರು ಅಕ್ರಮಗಳ ಕುರಿತು ಆರೋಪಿಸಿದ್ದರು. ಇದಲ್ಲದೇ ಸಮೀರ್ ವಾಂಖೆಡೆ ವಿರುದ್ಧ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಸುಲಿಗೆ ಆರೋಪವನ್ನು ಮಲಿಕ್ ಹೊರಿಸಿದ್ದರು. ಈ ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ಸಮೀರ್ ವಾಂಖೆಡೆ ಕುಟುಂಬವನ್ನೂ ಎಳೆದುತರಲಾಗಿತ್ತು.
ಇದರೊಂದಿಗೆ ನವಾಬ್ ಮಲಿಕ್ ಕೌಟುಂಬಿಕ ಜೀವನ, ಧಾರ್ಮಿಕ ವಿಚಾರ ಮೊದಲಾದವುಗಳನ್ನು ಉಲ್ಲೇಖಿಸಿ ನವಾಬ್ ಮಲಿಕ್ ತೀವ್ರ ಟೀಕೆ ಮಾಡಿದ್ದರು. ಅಂತಿಮವಾಗಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಸದ್ಯ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಎಲ್ಲಾ ಆರೋಪಗಳ ನಂತರ ಸಮೀರ್ ವಾಂಖೆಡೆ ಪ್ರಾರಂಭಿಸಿದ್ದ ಆರ್ಯನ್ ಖಾನ್ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳನ್ನು ಎನ್ಸಿಬಿಯಿಂದ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ.
2020ರ ಆಗಸ್ಟ್ನಿಂದ ಡಿಸೆಂಬರ್ವರೆಗೆ ವಾಂಖೆಡೆ 96 ಆರೋಪಿಗಳನ್ನು ಬಂಧಿಸಿದ್ದು, 28 ಪ್ರಕರಣಗಳನ್ನು ದಾಖಲಿಸಿದ್ದಾರೆ. 2021 ರಲ್ಲಿ, ವಾಂಖೆಡೆ 234 ಆರೋಪಿಗಳನ್ನು ಬಂಧಿಸಿದ್ದು, 117 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸುಮಾರು ₹ 1,000 ಕೋಟಿ ಮೌಲ್ಯದ 1,791 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ₹ 11 ಕೋಟಿಗೂ ಹೆಚ್ಚಿನ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
2008-ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿರುವ ಸಮೀರ್ ವಾಂಖೆಡೆ, ಎನ್‌ಸಿಬಿ ಪೋಸ್ಟಿಂಗ್ಗೂ ಮೊದಲು ‘ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಕೂಡ ಸಮೀರ್ ವಾಂಖೆಡೆ ತಮ್ಮ ಕಾರ್ಯವೈಖರಿಯಿಂದ ಗುರುತಿಸಲ್ಪಟ್ಟಿದ್ದರು. 2011 ರಲ್ಲಿ, ವಾಂಖೆಡೆ ಕಸ್ಟಮ್ಸ್‌ನಲ್ಲಿದ್ದಾಗ, ಶಾರುಖ್ ಖಾನ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದು ಹೆಚ್ಚುವರಿ ಲಗೇಜ್ ಕೊಂಡೊಯ್ದಿದ್ದಕ್ಕಾಗಿ ₹ 1.5 ಲಕ್ಷ ದಂಡ ವಿಧಿಸಿದ್ದರು.
ಇದನ್ನೂ ಓದಿ:
Spam Calls: ಶಾಕಿಂಗ್: ಭಾರತದಲ್ಲಿ ಈ ವರ್ಷ ಒಂದೇ ನಂಬರ್ನಿಂದ ಬರೋಬ್ಬರಿ 202 ಮಿಲಿಯನ್ ಸ್ಪ್ಯಾಮ್ ಕಾಲ್