ಕೊಲ್ಕತ್ತಾ ಫೆಬ್ರುವರಿ 20: ತೃಣಮೂಲ ಕಾಂಗ್ರೆಸ್ ಸ್ಥಳೀಯ ನಾಯಕ ಶೇಖ್ ಷಹಜಹಾನ್ನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರು ಹೇಳಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಮಂಗಳವಾರ ಹೇಳಿದ್ದಾರೆ. ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್ ಅವರನ್ನು ಭೇಟಿಯಾದ ನಂತರ ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದ ಶರ್ಮಾ, “ಡಿಜಿಪಿ ನನ್ನನ್ನು ಭೇಟಿಯಾಗಿದ್ದೇ ದೊಡ್ಡ ಸಂಗತಿ . ನಾನು 8-9 ನೇ ಬಾರಿಗೆ ಪಶ್ಚಿಮ ಬಂಗಾಳಕ್ಕೆ ಬಂದಿದ್ದರೂ ಡಿಜಿಪಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಪೊಲೀಸರಿಂದ ತಪ್ಪಾಗಿದೆ ಎಂದು ಡಿಜಿಪಿ ಒಪ್ಪಿದ್ದಾರೆ.ಅಲ್ಲಿರುವ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು (ಸಂದೇಶ್ಖಾಲಿಯಲ್ಲಿ) ಬದಲಾಯಿಸಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ. .
ಆದರೆ, 1-2 ಫೋನ್ ಕರೆಗಳ ನಂತರ ಕುಮಾರ್ ಅವರ ವರ್ತನೆ ಬದಲಾಯಿತು ಎಂದು ಮಹಿಳಾ ಸಮಿತಿಯ ಮುಖ್ಯಸ್ಥರು ಹೇಳಿದ್ದಾರೆ. “ಅವರು ಸಭೆಯನ್ನು ಅರ್ಧದಲ್ಲೇ ನಿಲ್ಲಿಸಿದರು. ನಾವು ಷಹಜಹಾನ್ ಹೆಸರನ್ನು ಉಲ್ಲೇಖಿಸಿದ್ದು ಅವರಿಗೆ ಇಷ್ಟವಾಗಲಿಲ್ಲ. ಷಹಜಹಾನ್ ವಿರುದ್ಧ ಏನೂ ಸಾಕ್ಷ್ಯ ಇಲ್ಲದಿರುವಾಗ ಅವರನ್ನು ಹೇಗೆ ಬಂಧಿಸುವುದು ಎಂದು ಅವರು (ಡಿಜಿಪಿ) ನಮ್ಮನ್ನು ಕೇಳಿದರು. ಷಹಜಹಾನ್ನ್ನು ಇಡಿ ಬಂಧಿಸಬೇಕು, ನಾನಲ್ಲ. ಅವನ ವಿರುದ್ಧ ಏನೂ ಇಲ್ಲದಿದ್ದರೆ, ಪೊಲೀಸರು ಏನು ತನಿಖೆ ಮಾಡುತ್ತಾರೆ ಎಂದು ಅವರು ನಮ್ಮಲ್ಲಿ ಕೇಳಿದರು ಎಂದಿದ್ದಾರೆ ಶರ್ಮಾ.
ನನ್ನ ಪ್ರಕಾರ ಡಿಜಿಪಿಯ ಕೈ ಕಟ್ಟಿಹಾಕಲಾಗಿದೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ. ಅವರು ಯಾವ ಒತ್ತಡದಲ್ಲಿದ್ದಾರೆ ಎಂಬುದನ್ನು ನಾವು ಊಹಿಸಬಹುದು.ಅವರು ಗಂಭೀರವಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಒತ್ತಡದಲ್ಲಿ ಹೇಗೆ ಕೆಲಸ ಮಾಡುತ್ತಾರೆ? ಎಂದು ಶರ್ಮಾ ಕೇಳಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಎಂಬ ಗ್ರಾಮವು ಲೋಕಸಭೆ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಶೇಖ್ ಷಹಜಹಾನ್ ಮತ್ತು ಅವರ ಬೆಂಬಲಿಗರು ತಮ್ಮ ಟಿಎಂಸಿ ಕಚೇರಿಯಲ್ಲಿ ಬಂದೂಕು ತೋರಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹಲವಾರು ಮಹಿಳೆಯರು ಆರೋಪಿಸಿದ್ದಾರೆ.
ಎನ್‌ಸಿಡಬ್ಲ್ಯೂ ಮುಖ್ಯಸ್ಥರು ಸೋಮವಾರ ಸಂದೇಶ್ಖಾಲಿಗೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಿದ್ದರು. ಭೇಟಿಯ ನಂತರ, ಶರ್ಮಾ ಅವರು ಮಮತಾ ಬ್ಯಾನರ್ಜಿ ರಾಜೀನಾಮೆ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕರೆ ನೀಡಿದರು.
ಪಡಿತರ ಹಗರಣದಲ್ಲಿ ತನ್ನ ನಿವೇಶನಗಳನ್ನು ಶೋಧಿಸಲು ಸಂದೇಶ್ಖಾಲಿಗೆ ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡದ ಮೇಲೆ ಆತನ ಬೆಂಬಲಿಗರು ದಾಳಿ ನಡೆಸಿದ ನಂತರ ‘ಭಾಯ್’ ಎಂದು ಕರೆಯಲ್ಪಡುವ ಷಹಜಹಾನ್ ಪರಾರಿಯಾಗಿದ್ದಾನೆ. ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಒಕ್ಕೂಟದ ನಾಯಕರಾಗಿ ಪ್ರಾರಂಭಿಸಿದ ಶೇಖ್ ಷಹಜಹಾನ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಯೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಬಂಗಾಳದಲ್ಲಿ ಟಿಎಂಸಿಗೆ ಅಧಿಕಾರಕ್ಕೆ ಬಂದಾಗ ಅವರು ಸಿಪಿಎಂನಿಂದ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ