ಸಂದೇಶಖಾಲಿ ಪ್ರಕರಣ: ಅಧಿಕಾರಿಗಳ ವಿರುದ್ಧ ಸಂಸತ್ ಸಮಿತಿ ತನಿಖೆಗೆ ಸುಪ್ರೀಂಕೋರ್ಟ್ ತಡೆ

|

Updated on: Feb 19, 2024 | 1:00 PM

Sandeshkhali case: ಸಂದೇಶಖಾಲಿ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಾಲಿಕಾ ಮತ್ತು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಬಿಜೆಪಿ ಸಂಸದ ಸುಕಾಂತ ಮಜುಂದಾರ್ ನೀಡಿದ ದೂರಿನ ಮೇರೆಗೆ ಸುಪ್ರೀಂ ಕೋರ್ಟ್ ಸೋಮವಾರ ಲೋಕಸಭೆಯ ಸಮಿತಿಯ ತನಿಖೆಗೆ ತಡೆ ನೀಡಿದೆ ನಾಲ್ಕು ವಾರಗಳಲ್ಲಿ ಲೋಕಸಭೆಯ ಸೆಕ್ರೇಟರಿಯೇಟ್‌ನಿಂದ ಪ್ರತಿಕ್ರಿಯೆ ಕೇಳಿರುವ ಸುಪ್ರೀಂಕೋರ್ಟ್, ನಂತರ ವಿಚಾರಣೆ ನಡೆಸಲಿದೆ.

ಸಂದೇಶಖಾಲಿ ಪ್ರಕರಣ: ಅಧಿಕಾರಿಗಳ ವಿರುದ್ಧ ಸಂಸತ್ ಸಮಿತಿ ತನಿಖೆಗೆ ಸುಪ್ರೀಂಕೋರ್ಟ್ ತಡೆ
ಸುಪ್ರೀಂಕೋರ್ಟ್
Follow us on

ದೆಹಲಿ ಫೆಬ್ರುವರಿ 19: ಹಿಂಸಾಚಾರ ಪೀಡಿತ ಸಂದೇಶ್‌ಖಾಲಿಗೆ (Sandeshkhali case) ಭೇಟಿ ನೀಡಿದಾಗ ಬಿಜೆಪಿ (BJP) ಸಂಸದ ಸುಕಾಂತ ಮಜುಂದಾರ್ (Sukanta Majumdar) ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂಬ ದೂರಿನ ಮೇರೆಗೆ ಬಂಗಾಳ ಸರ್ಕಾರದ ಉನ್ನತ ಅಧಿಕಾರಿಗಳ ವಿರುದ್ಧ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯ ತನಿಖೆಯನ್ನು ಸುಪ್ರೀಂಕೋರ್ಟ್ (Supreme Court) ಸೋಮವಾರ ತಡೆ ಹಿಡಿದಿದೆ. ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯು ಮಜುಂದಾರ್ ಅವರ ಹಕ್ಕು ಉಲ್ಲಂಘನೆಯ ದೂರಿನ ನಂತರ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಕರೆಸಿತ್ತು. ಮುಖ್ಯ ಕಾರ್ಯದರ್ಶಿ ಭಗವತಿ ಪ್ರಸಾದ್ ಗೋಪಾಲಿಕಾ, ಪೊಲೀಸ್ ಮಹಾನಿರ್ದೇಶಕ ರಾಜೀವ್ ಕುಮಾರ್, ಉತ್ತರ 24 ಪರಗಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಶರದ್ ಕುಮಾರ್ ದ್ವಿವೇದಿ, ಬಸಿರ್‌ಹತ್ ಎಸ್‌ಪಿ ಹೊಸೈನ್ ಮೆಹದಿ ರೆಹಮಾನ್ ಮತ್ತು ಹೆಚ್ಚುವರಿ ಎಸ್‌ಪಿ ಪಾರ್ಥ ಘೋಷ್ ಅವರಿಗೆ ಇಂದು(ಸೋಮವಾರ) ಬೆಳಗ್ಗೆ 10:30 ಕ್ಕೆ ಸಮಿತಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.

ಸಮನ್ಸ್ ಪ್ರಶ್ನಿಸಿ ಅಧಿಕಾರಿಗಳು ತುರ್ತು ವಿಚಾರಣೆಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ವಾದವನ್ನು ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸಂಸದೀಯ ಸಮಿತಿಯ ತನಿಖೆಗೆ ತಡೆ ನೀಡಿ ಲೋಕಸಭಾ ಸೆಕ್ರಟರಿಯೇಟ್​​ಗೆ ನೋಟಿಸ್ ಜಾರಿ ಮಾಡಿದರು. ನಾಲ್ಕು ವಾರಗಳಲ್ಲಿ ಲೋಕಸಭೆಯ ಸೆಕ್ರೇಟರಿಯೇಟ್‌ನಿಂದ ಪ್ರತಿಕ್ರಿಯೆ ಕೇಳಿರುವ ಸುಪ್ರೀಂಕೋರ್ಟ್, ನಂತರ ವಿಚಾರಣೆ ನಡೆಸಲಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ, ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ಸಂದೇಶಖಾಲಿ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಸಿಜೆಐಗೆ ತಿಳಿಸಿದರು. ಇದರ ಹೊರತಾಗಿಯೂ ಮಜುಂದಾರ್ ಹಾಗೂ ಬಿಜೆಪಿ ಬೆಂಬಲಿಗರು ಆ ಪ್ರದೇಶದಲ್ಲಿ ಜಮಾಯಿಸಿದರು. ಬಿಜೆಪಿ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊಗಳನ್ನು ಉಲ್ಲೇಖಿಸಿ ಅವರು ಮಜುಂದಾರ್ ಆರೋಪಿಸಿರುವ ಪೊಲೀಸ್ ದೌರ್ಜನ್ಯದ ಹೇಳಿಕೆಗಳನ್ನು ನಿರಾಕರಿಸಿದರು.

ಸಂಸದೀಯ ಸವಲತ್ತುಗಳು ರಾಜಕೀಯ ಚಟುವಟಿಕೆಗಳಿಗೆ ಒಳಪಡುವುದಿಲ್ಲ ಎಂದು ವಾದಿಸಿದ ಅಧಿಕಾರಿಗಳ ವಕೀಲರು, ಘಟನಾ ಸ್ಥಳದಲ್ಲಿ ಇರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ನೋಟಿಸ್ ನೀಡುವ ಮೂಲಕ ಲೋಕಸಭೆ ಸೆಕ್ರಟರಿಯೇಟ್ ತನ್ನ ಅಧಿಕಾರ ವ್ಯಾಪ್ತಿ ಮೀರಿದೆ ಎಂದು ಆರೋಪಿಸಿದರು.

ಸದನಕ್ಕೆ ಹಾಜರಾಗುವಾಗ ಸಂಸತ್ತಿನ ಸದಸ್ಯರಾಗಿ ಕರ್ತವ್ಯ ನಿರ್ವಹಿಸುವಾಗ ಅಡ್ಡಿಯಾದಾಗ ಮಾತ್ರ ಸದಸ್ಯರಿಗೆ ಹಕ್ಕು ಲಭ್ಯವಿರುತ್ತವೆ, ಎಂದು ಸಿಬಲ್ ವಾದಿಸಿದರು. ಇದು ರಾಜಕೀಯ ಚಟುವಟಿಕೆಗೆ ಲಭ್ಯವಿಲ್ಲ. ನೀವು ಅಲ್ಲಿಗೆ ಹೋಗಿ (ಸಂದೇಶಖಾಲಿ), 144 ಆದೇಶವನ್ನು ಉಲ್ಲಂಘಿಸಿ ಮತ್ತು ನಂತರ ನೀವು ಹಕ್ಕು ಉಲ್ಲಂಘನೆ ಎಂದು ದೂರುತ್ತೀರಿ ಎಂದಿದ್ದಾರೆ ಸಿಬಲ್.

ಇದನ್ನೂ ಓದಿ: Sukanta Majumdar ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಕ್ತಿ ಪರಿಚಯ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಾಯಕರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದೇಶ್‌ಖಾಲಿ ಪ್ರವೇಶಿಸುವುದನ್ನು ತಡೆದ ಪಕ್ಷದ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರಿಂದ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಗಾಯಗೊಂಡಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಪೊಲೀಸರೊಂದಿಗೆ ವಾಗ್ವಾದದ ಸಂದರ್ಭದಲ್ಲಿ, ಲೋಕಸಭಾ ಸಂಸದರಾದ ಮಜುಂದಾರ್ ಅವರು ಸಮತೋಲನ ಕಳೆದುಕೊಂಡು ಅವರು ನಿಂತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದು ಗಾಯಗೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Mon, 19 February 24