Sanitiser: ಕೊರೊನಾ ಆತಂಕ ನಿವಾರಣೆಗೂ ಮೊದಲೇ ಪಾತಾಳಕ್ಕಿಳಿದ ಸ್ಯಾನಿಟೈಸರ್​​ ವ್ಯಾಪಾರ, ಮಾಸ್ಕ್​ ಮಾರಾಟವೂ ಕುಸಿತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2021 | 8:05 PM

Coronavirus: ಕಳೆದ ವರ್ಷ ಮಾರುಕಟ್ಟೆಗೆ ಬರುವುದರೊಳಗೆ ಮಾರಾಟವಾಗುತ್ತಿದ್ದ ಸ್ಯಾನಿಟೈಸರ್​ ಉತ್ಪನ್ನಗಳನ್ನು ತಯಾರಿಸಿದ ಕಂಪೆನಿಗಳಂತೂ ಉತ್ತಮ ಲಾಭ ಪಡೆದಿದ್ದವು. ಆದರೆ ಕಳೆದ ಆರು ತಿಂಗಳಲ್ಲಿ ಸ್ಯಾನಿಟೈಸರ್ ಮಾರಾಟ ಶೇ.80ರಷ್ಟು ಕುಸಿತ ಕಂಡಿದೆ.

Sanitiser: ಕೊರೊನಾ ಆತಂಕ ನಿವಾರಣೆಗೂ ಮೊದಲೇ ಪಾತಾಳಕ್ಕಿಳಿದ ಸ್ಯಾನಿಟೈಸರ್​​ ವ್ಯಾಪಾರ, ಮಾಸ್ಕ್​ ಮಾರಾಟವೂ ಕುಸಿತ
ಸ್ಯಾನಿಟೈಸರ್​ ಮತ್ತು ಮಾಸ್ಕ್​
Follow us on

ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು (Coronavirus) ತಕ್ಕಮಟ್ಟಿಗೆ ನಿಯಂತ್ರಣವಾಗಿದೆ. ಕೊರೊನಾ ಲಸಿಕೆ ಬಂದ ಕಾರಣ ಜನ ಮತ್ತಷ್ಟು ನಿರಾಳರಾಗಿದ್ದಾರೆ. ಇಷ್ಟಾದರೂ ಸಂಪೂರ್ಣ ಅಪಾಯದಿಂದ ದೇಶ ಪಾರಾಗಿದೆ ಎಂದು ಹೇಳುವಂತಿಲ್ಲ. ಏಕೆಂದರೆ ಈಗಾಗಲೇ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ರೂಪಾಂತರಿ ಕೊರೊನಾ ಜೋರಾಗುವ ಲಕ್ಷಣಗಳು ಕಾಣುತ್ತಿವೆ. ಬ್ರಿಟನ್​, ಬ್ರೆಜಿಲ್, ದಕ್ಷಿಣ ಆಫ್ರಿಕಾ ದೇಶಗಳ ರೂಪಾಂತರಿ ಕೊರೊನಾದಿಂದ ಪಾರಾಗಲು ಎಲ್ಲಾ ರಾಜ್ಯಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿವೆ. ಏತನ್ಮಧ್ಯೆ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ದೇಶದಲ್ಲಿ ಸ್ಯಾನಿಟೈಸರ್ (Sanitiser)​ ಮಾರಾಟ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಕೊರೊನಾ ಶುರುವಾದ ನಂತರ ಸ್ಯಾನಿಟೈಸರ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿತ್ತು. ಮಾರುಕಟ್ಟೆಗೆ ಬರುವುದರೊಳಗೆ ಮಾರಾಟವಾಗುತ್ತಿದ್ದ ಸ್ಯಾನಿಟೈಸರ್​ ಉತ್ಪನ್ನಗಳನ್ನು ತಯಾರಿಸಿದ ಕಂಪೆನಿಗಳಂತೂ ಉತ್ತಮ ಲಾಭ ಪಡೆದಿದ್ದವು. ಆದರೆ ಈಗ AIOCD-AWACS ಸಿದ್ಧಪಡಿಸಿದ ವರದಿಯಲ್ಲಿರುವ ದತ್ತಾಂಶದ ಪ್ರಕಾರ ಕಳೆದ ಆರು ತಿಂಗಳಲ್ಲಿ ಸ್ಯಾನಿಟೈಸರ್ ಮಾರಾಟ ಶೇ 80ರಷ್ಟು ಕುಸಿತ ಕಂಡಿದೆ.

ಕೊರೊನಾ ಶುರುವಾದ ನಂತರ 2020ರ ಜುಲೈ ತಿಂಗಳಲ್ಲಿ ಅತ್ಯಧಿಕ ಸ್ಯಾನಿಟೈಸರ್ ಮಾರಾಟವಾಗಿತ್ತು. ಮಾರ್ಚ್​ ವೇಳೆಗೆ 99,000 ಬಾಟಲ್​ಗಳಷ್ಟು ಮಾರಾಟ ಕಂಡಿದ್ದ ಸ್ಯಾನಿಟೈಸರ್ ಜುಲೈನಲ್ಲಿ 24 ಲಕ್ಷ ಬಾಟಲ್​ಗೂ ಹೆಚ್ಚು ಮಾರಾಟವಾಗುವ ಮೂಲಕ ಶೇ 2,300ರಷ್ಟು ಏರಿಕೆ ಕಂಡಿತ್ತು. ಅದಾದ ನಂತರ ಕ್ರಮೇಣ ಇಳಿಮುಖವಾಗುತ್ತಲೇ ಬಂದು ಈಗ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ.

ಇನ್ನೊಂದು ವರದಿಯ ಪ್ರಕಾರ ಏಪ್ರಿಲ್​-ಮೇ ತಿಂಗಳ ನಂತರ ಮಾಸ್ಕ್, ಸ್ಯಾನಿಟೈಸರ್​ ಎರಡರಲ್ಲೂ ಕುಸಿತ ಕಂಡಿದ್ದು, ಕಳೆದ ಮಾರ್ಚ್​ನಿಂದ ಏರುಗತಿಯಲ್ಲಿ ಮಾರಾಟ ಕಾಣಲು ಶುರುವಾದ ಇವೆರಡೂ ಉತ್ಪನ್ನಗಳು ಇದೀಗ ಪುನಃ ಇಳಿದಿರುವುದು ಉತ್ಪಾದಕರಲ್ಲಿ ಚಿಂತೆ ಶುರುಮಾಡಿದೆ.

ಕಟ್ಟೆಚ್ಚರದಲ್ಲಿ ಕರ್ನಾಟಕ
ಈ ನಡುವೆ ಕೊರೊನಾ ಎರಡನೇ ಅಲೆಯ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರ್ನಾಟಕದಲ್ಲಿ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಜನಸಾಮಾನ್ಯರು, ಗಣ್ಯರು ಯಾರೂ ಕೊರೊನಾ ನಿಯಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ರಾಜ್ಯದಲ್ಲಿ ಮದುವೆ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಯಾವುದನ್ನೂ ಪಾಲಿಸುತ್ತಿಲ್ಲ. ಮಾಸ್ಕ್ ಹಾಕಿಕೊಂಡು ನಾವೇನಾದರೂ ಹೋದರೆ ನಮಗೇ ಮಾಸ್ಕ್ ತೆಗೆಯಲು ಹೇಳುವ ಮಟ್ಟಿಗೆ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮದುವೆಗಳಿಗೂ ಮಾರ್ಷಲ್​ ನಿಯೋಜನೆ, ನಿಯಮ ಪಾಲಿಸಿಲ್ಲ ಅಂದ್ರೆ ಕಠಿಣ ಕ್ರಮ
ಮಹಾರಾಷ್ಟ್ರದಲ್ಲಿ ಮತ್ತೆ ಚುರುಕುಗೊಂಡ ಕೊರೊನಾ: ಲಾಕ್​ಡೌನ್​ ಸೂಚನೆ ನೀಡಿದ ಮುಂಬೈ ಮೇಯರ್​