ಒಂದಲ್ಲ.. ಎರಡಲ್ಲ.. ಬರೋಬ್ಬರಿ 4 ವರ್ಷ.. ದ್ರಾವಿಡ ನಾಡಿನ ಒಡನಾಟದಿಂದ ದೂರವೇ ಉಳಿದಿದ್ದ ಶಶಿಕಲಾ ನಟರಾಜನ್, ತಮಿಳುನಾಡಿಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸಾಗಿ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ರೆಸಾರ್ಟ್‌ನಲ್ಲೇ ರಣತಂತ್ರ ರೂಪಿಸಿ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಲು ಭರ್ಜರಿ ಪ್ಲ್ಯಾನ್ ಮಾಡಿರೋ ಶಶಿಕಲಾ ಸಿನಿಮಾ ಸ್ಟೈಲ್‌ನಲ್ಲೇ ಎಂಟ್ರಿ ಕೊಟ್ಟು ಎದುರಾಳಿಗಳಿಗೆ ಟಕ್ಕರ್ ಕೊಡೋ ಕೆಲ್ಸ ಮಾಡಿದ್ದಾರೆ. ಥೇಟ್ ದಿವಂಗತ ಜಯಲಲಿತಾರ ರೇಂಜ್‌ಗೆ ತಮಿಳುನಾಡಿನ ಮಣ್ಣಲ್ಲಿ ಕಾಲಿಟ್ಟು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಅಸಲಿಗೆ ಮುಂಬರೋ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಎಲೆಕ್ಷನ್ ನಡೆಯಲಿದೆ. ಇದೇ ಹೊತ್ತಲ್ಲೇ ಶಶಿಕಲಾ 4 ವರ್ಷದ ಬಳಿಕ ಚೆನ್ನೈಗೆ ಎಂಟ್ರಿ ಕೊಟ್ಟಿರೋದು, ಎದುರಾಳಿಗಳಲ್ಲಿ ಒಂದು ರೀತಿ ನಡುಕ ಹುಟ್ಟಿಸಿದೆ. ಯಾಕಂದ್ರೆ ತಮಿಳು ಸಿನಿಮಾ ರೇಂಜ್‌ಗೆ ಅಪಾರ ಬೆಂಬಲಿಗರು, ಅಭಿಮಾನಿಗಳ ಬಳಗದೊಂದಿಗೆ ಶಶಿಕಲಾ ಎಂಟ್ರಿ ಕೊಡೋ ಮೂಲಕ ತಮ್ಮ ಪವರ್ ಏನು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಶಶಿಕಲಾ ಎಂಟ್ರಿ ಪ್ಲ್ಯಾನ್!
ಶಶಿಕಲಾ ನಟರಾಜನ್ ರಾಜಕೀಯವಾಗಿ ಮುಂದೆ ಯಾವ ಹೆಜ್ಜೆ ಇಡ್ತಾರೆ ಅನ್ನೋ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಶಶಿಕಲಾರ ಮೊದಲ ಆದ್ಯತೆಯೇ ಎಐಎಡಿಎಂಕೆ ಪಕ್ಷವನ್ನ ಮತ್ತೆ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ಇದಕ್ಕಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರ ಬಂದ ಬಳಿಕ ಎಐಎಡಿಎಂಕೆ ಪಕ್ಷದ ಚುನಾವಣಾ ಬಾವುಟ ಇರೋ ಕಾರಿನಲ್ಲೇ ಸಂಚರಿಸಿದ್ರು. ಈ ಮೂಲಕ ತಾವಿನ್ನೂ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅನ್ನೋ ಸಂದೇಶ ರವಾನಿಸಲು ಯತ್ನಿಸಿದ್ರು. ಇದಕ್ಕೆ ಎಐಎಡಿಎಂಕೆ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಅಷ್ಟೇ ಅಲ್ಲ 2016ರಲ್ಲಿ ಪಳನಿಸ್ವಾಮಿಯನ್ನ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದ್ದೇ ಶಶಿಕಲಾ. ಜೊತೆಗೆ ಎಲ್ಲಾ ಸಚಿವರನ್ನ ಆಯ್ಕೆ ಮಾಡಿ ಸಚಿವ ಸ್ಥಾನ ಕರುಣಿಸಿದ್ದು ಇದೇ ಶಶಿಕಲಾ. ಹೀಗಾಗಿ ತನಗೆ ನಿಷ್ಠರಾಗಿರೋ ಎಐಎಡಿಎಕೆ ಪಕ್ಷದ ಶಾಸಕರು, ಸಚಿವರು ತಮ್ಮ ಜೊತೆಗೆ ಬರೋ ನಿರೀಕ್ಷೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಎಐಎಡಿಎಂಕೆ ಹಾಗೂ ಸರ್ಕಾರದಲ್ಲಿ ಭಾರಿ ನಡುಕ ಶುರುವಾಗಿದೆ. ಯಾಕಂದ್ರೆ ಪ್ರಮುಖ ಶಾಸಕರು, ಸಚಿವರು ಪಕ್ಷಕ್ಕೆ ಗುಡ್‌ಬೈ ಹೇಳಿ ಶಶಿಕಲಾ ಜೊತೆಗೆ ಹೋದ್ರೆ ಮುಂದೇನು ಅನ್ನೋ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ಶಶಿಕಲಾ ತಮಿಳುನಾಡಿನ ಪ್ರಬಲ ಜಾತಿಗಳಲ್ಲಿ ಒಂದಾದ ತೇವರ್ ಜಾತಿಗೆ ಸೇರಿದವ್ರು. ಯಾಕಂದ್ರೆ ಎಐಎಡಿಎಂಕೆ ಪಕ್ಷದ ಪ್ರಮುಖ ವೋಟ್ ಬ್ಯಾಂಕ್ ಇದೇ ತೇವರ್ ಜಾತಿ.
ಅಷ್ಟೇ ಅಲ್ಲ ತಮಗೆ ನಿಷ್ಠರಾಗಿರೋ ಶಾಸಕರು, ಸಚಿವರನ್ನ ಶಶಿಕಲಾ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಸುಮಾರು 50 ಮಂದಿ ಶಾಸಕರು ಶಶಿಕಲಾಗೆ ಬೆಂಬಲ ನೀಡೋ ಸಾಧ್ಯತೆ ಇದೆ. ಆದ್ರೆ ಯಾವುದೇ ಕಾರಣಕ್ಕೂ ಶಶಿಕಲಾ, ಟಿಟಿವಿ ದಿನಕರನ್‌ರನ್ನ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ ಅಂತ ಸಿಎಂ ಪಳನಿಸ್ವಾಮಿ ಹೇಳಿಕೆ ನೀಡಿದ್ದರು. ಈ ಮೂಲಕ ಜಯಲಲಿತಾ ಉತ್ತರಾಧಿಕಾರಿಯಾಗಲು ಶಶಿಕಲಾಗೆ ಅವಕಾಶ ಕೊಡಲ್ಲ ಅನ್ನೋ ಸಂದೇಶವನ್ನ ಪಳನಿಸ್ವಾಮಿ, ಡಿಸಿಎಂ ಪನ್ನೀರ್ ಸೆಲ್ವಂ ಹಿಡಿದಿದ್ದಾರೆ.
ಒಟ್ನಲ್ಲಿ ಶಶಿಕಲಾ ತಮಿಳುನಾಡು ಎಂಟ್ರಿಯಿಂದ ರಾಜಕೀಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇದು ಎಷ್ಟರ ಮಟ್ಟಿಗೆ ತಮಿಳುನಾಡು ರಾಜಕಾರಣದ ಮೇಲೆ ಪ್ರಭಾವ ಬೀರುತ್ತೆ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.
Published On - 7:00 am, Tue, 9 February 21