ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಸಾಕಷ್ಟು ಪ್ರಬಲವಾದ ಸಾಕ್ಷಿಗಳಿವೆ ಎಂದು ದೆಹಲಿ ನ್ಯಾಯಾಲಯ ಹೇಳಿದೆ. ದೆಹಲಿ ಸುತ್ತಮುತ್ತ ಕೃಷಿ ಭೂಮಿಯನ್ನು ಖರೀದಿಸಲು ಸತ್ಯೇಂದ್ರ ಜೈನ್ ಮತ್ತು ಅವರ ಸಹಚರರು ಹವಾಲಾ ಹಣವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಜುಲೈ 27ರಂದು ದೆಹಲಿಯ ವಿಶೇಷ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಚಾರ್ಜ್ ಶೀಟ್ ಅಥವಾ ಪ್ರಾಸಿಕ್ಯೂಷನ್ ದೂರನ್ನು ಸಲ್ಲಿಸಲಾಯಿತು. ಜಾರಿ ನಿರ್ದೇಶನಾಲಯವು ಸತ್ಯೇಂದ್ರ ಜೈನ್, ಅವರ ಪತ್ನಿ ಪೂನಂ ಜೈನ್ ಮತ್ತು ಸಹಚರರಾದ ಅಜಿತ್ ಪ್ರಸಾದ್ ಜೈನ್, ಸುನಿಲ್ ಕುಮಾರ್ ಜೈನ್, ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಮುಂತಾದವರನ್ನು ಆರೋಪಪಟ್ಟಿಯಲ್ಲಿ ಹೆಸರಿಸಿತ್ತು.
ಇದನ್ನೂ ಓದಿ: Satyendra Jain Case: ಸಚಿವ ಸತ್ಯೇಂದ್ರ ಜೈನ್ ಅವರಿಗೆ ಹವಾಲಾ ಮೂಲಕ ಹಣ ಹೋಗಿದೆ : ಸಚಿವೆ ಸ್ಮೃತಿ ಇರಾನಿ ಆರೋಪ
ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಸಚಿವರಾಗಿದ್ದ 57 ವರ್ಷದ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ.
ಕೊಲ್ಕತ್ತಾ ಮೂಲದ ಕಂಪನಿಯೊಂದಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಈ ವರ್ಷ ಮೇ ತಿಂಗಳಲ್ಲಿ 4.81 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಂಡ ನಂತರ ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು. ತನಿಖಾ ಸಂಸ್ಥೆಯು ಎಎಪಿ ನಾಯಕನ ವಿರುದ್ಧ ಸಿಬಿಐ ದಾಖಲಿಸಿದ ಎಫ್ಐಆರ್ ಆಧರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಸತ್ಯೇಂದ್ರ ಜೈನ್ ಅವರು ಷೇರುದಾರರಾಗಿದ್ದ 4 ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಿಲ್ಲ ಎಂದು ಇಡಿ ಆರೋಪಿಸಿತ್ತು.