ಯೂನಿಫಾರಂ ಸಿವಿಲ್ ಕೋಡ್ (Uniform Civil Code) ಅಥವಾ ಏಕರೂಪ ನಾಗರಿಕ ಸಂಹಿತೆ ಎಂದರೆ ಸಾಕು, ನಮ್ಮಲ್ಲಿ ಭಿನ್ನಾಭಿಪ್ರಾಯ ಶುರು. ಕೆಲವೊಮ್ಮೆ ಜಗಳದಲ್ಲೂ ಕೊನೆಗೊಂಡಿದ್ದಿದೆ. ಇದನ್ನು ಜಾರಿಗೆ ತರುವುದರಿಂದ ನಮ್ಮ ಧರ್ಮ ನಿರಪೇಕ್ಷ ಸಂವಿಧಾನಕ್ಕೆ ಅಪಚಾರವಾಗುತ್ತದೆ ಎಂದು ಬಹಳ ಜನ ಹೇಳುತ್ತಾರೆ. ನಿಮಗೆ ಗೊತ್ತಾ? ಗೋವಾದಲ್ಲಿ ಈ ಯೂನಿಫಾರಂ ಸಿವಿಲ್ ಕೋಡ್ (Uniform Civil Code) ಬಹಳ ವರ್ಷಗಳಿಂದ ಜಾರಿಯಲ್ಲಿದೆ ಎಂಬುದು. ಅಲ್ಲಿ ಇದನ್ನು ಸಾಮಾನ್ಯ ಕುಟುಂಬ ಕಾಯ್ದೆ (Uniform Family Law) ಎಂದು ಕರೆಯುತ್ತಾರೆ. ಗೋವಾ ರಾಜ್ಯದಲ್ಲಿ ವಾಸಿಸುವ ಎಲ್ಲ ಧರ್ಮವನ್ನು ಅನುಸರಿಸುವ ಜನರು ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ.
ಈಗ ಈ ಸುದ್ದಿ ಏಕೆ?
ಇಂದು ಗೋವಾದಲ್ಲಿರುವ ಬಾಂಬೆ ಹೈ ಕೋರ್ಟ್ನ ಗೋವಾ ಪೀಠದ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಗೋವಾದಲ್ಲಿ ಬಹಳ ವರ್ಷದಿಂದ ಏಕರೂಪ ನಾಗರಿಕ ಸಂಹಿತೆ ಇದೆ ಎಂದು ಹೇಳಿದರು. ಮುಖ್ಯ ನ್ಯಾಯಮೂರ್ತಿ ಅಲ್ಲಿಗೇ ನಿಲ್ಲದೆ.. ದೇಶದ ಬುದ್ಧಿಜೀವಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡಬೇಕು. ಪ್ರತಿ ಬಾರಿ ಈ ವಿಚಾರ ಬಂದಾಗ ಬಿಸಿ ಬಿಸಿ ಚರ್ಚಿಸುವ ಈ ಬುದ್ಧಿಜೀವಿಗಳು ಇಲ್ಲಿಗೆ ಬಂದು ನೋಡಿದರೆ ಅವರಿಗೆ ಅರ್ಥವಾಗುತ್ತದೆ, ಈ ಕಾನೂನು ಇಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮದುವೆಯಿಂದ ಹಿಡಿದು ಆಸ್ತಿ ಹಂಚಿಕೆವರೆಗೆ ಎಲ್ಲ ವಿಚಾರದಲ್ಲಿಯೂ ಗೋವಾದ ಏಕರೂಪ ನಾಗರಿಕ ಸಂಹಿತೆ, ಇಲ್ಲಿ ವಾಸಿಸುವ ಎಲ್ಲ ಧರ್ಮದ ಜನರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಈ ಹಿಂದೆ ನಾನಿಲ್ಲಿ ಕೆಲಸ ಮಾಡಿದ್ದೇನೆ. ಅನೇಕ ಕೇಸುಗಳನ್ನು ಈ ಕಾನೂನಿನ ಅಡಿ ನಿರ್ಣಯಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇನ್ನೊಂದು ವಿಚಾರವನ್ನು ನಾನು ಹೇಳುತ್ತೇನೆ. ಬಾಂಬೆ ಹೈ ಕೋರ್ಟಿನ ಮುಖ್ಯ ಪೀಠ ಇರುವುದು ಮುಂಬೈಯಲ್ಲಿ. ಅಲ್ಲಿರುವ ಪ್ರಧಾನ ಉಚ್ಛ ನ್ಯಾಯಾಲಯಕ್ಕೆ ಹೊಸ ಕಟ್ಟಡ ಬೇಕು ಎಂದು, ಈ ಸಂದರ್ಭದಲ್ಲಿ ಇಲ್ಲಿ ಹಾಜರಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಹೇಳಲು ಇಚ್ಛಿಸುತ್ತೇನೆ ಎಂದರು. ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ನಿಯುಕ್ತಿಗೊಂಡಿರುವ ಎನ್.ವಿ. ರಮಣ ಅವರಿಗೆ ಈ ಕುರಿತು ಕಿವಿಮಾತು ಹೇಳಿದ ಬೋಬ್ಡೆ ಅವರು, ತಾವು ಈ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದರು.
ರವಿಶಂಕರ್ ಪ್ರಸಾದ್ ಮಾತನಾಡಿ ಗೋವಾ ರಾಜ್ಯವನ್ನು ಕದಂಬರು ಆಳಿದ್ದರು. ಹತ್ತರಿಂದ ಹದಿನಾಲ್ಕನೇ ಶತಮಾನದ ಮಧ್ಯೆ ಕದಂಬರು ಆಳುವಾಗ ನ್ಯಾಯ ಪದ್ಧತಿ ಹಿಂದೂ ನ್ಯಾಯಶಾಸ್ತ್ರದ ಆಧಾರದ ಮೇಲೆ ನಡೆಯುತ್ತಿತ್ತು ಮತ್ತು ಮುಖ್ಯ ನ್ಯಾಯಮೂರ್ತಿಯನ್ನು ಧರ್ಮ ಅಧ್ಯಕ್ಷ ಎಂದು ಕರೆಯುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ:
ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್ಸ್ಪೀಕರ್ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ
Published On - 7:01 pm, Sat, 27 March 21