ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್‌ಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್

Param Bir Singh "ನಾನು ದೇಶದಲ್ಲಿದ್ದೇನೆ. ಆದರೆ ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ತಲೆಮರೆಸಿಕೊಂಡಿದ್ದೇನೆ" ಎಂದು ಪರಮ್ ಬೀರ್ ಸಿಂಗ್ ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್‌ಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂಕೋರ್ಟ್
ಪರಮ್​ ಬೀರ್ ಸಿಂಗ್​

ದೆಹಲಿ: ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ (Param Bir Singh) ತಾನು ಭಾರತದಲ್ಲಿಯೇ ಇದ್ದೇನೆ, ತಲೆಮರೆಸಿಕೊಂಡಿಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್‌ಗೆ(Supreme Court) ತಿಳಿಸಿದರು. “ನಾನು ದೇಶದಲ್ಲಿದ್ದೇನೆ. ಆದರೆ ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ತಲೆಮರೆಸಿಕೊಂಡಿದ್ದೇನೆ” ಎಂದು ಪರಮ್ ಬೀರ್ ಸಿಂಗ್ ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.  “ನಾನು 48 ಗಂಟೆಗಳ ಒಳಗೆ ಸಿಬಿಐ (CBI) ಮುಂದೆ ಹಾಜರಾಗಲು ಸಿದ್ಧನಿದ್ದೇನೆ. ನಾನು ತಪ್ಪಿತಸ್ಥನಾಗಿದ್ದರೆ, ನನ್ನ ವಿರುದ್ಧ ವಿಚಾರಣೆ ನಡೆಸಿ ಎಂದು ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಸುಪ್ರೀಂಕೋರ್ಟ್ ಗೆ ತಿಳಿಸಿದರು. ನ್ಯಾಯಮೂರ್ತಿ ಎಸ್. ಕೆ. ಕೌಲ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯ ಪೀಠವು ಸಿಂಗ್ ಅವರ ಇರುವಿಕೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಅವರ ವಕೀಲರನ್ನು ಕೇಳಿದೆ. ಅದೇ ವೇಳೆ ಸುಪ್ರೀಂಕೋರ್ಟ್ ಪರಮ್ ಬೀರ್ ಸಿಂಗ್‌ಗೆ ಬಂಧನದಿಂದ ರಕ್ಷಣೆ ನೀಡಿದ್ದು ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿತು. ಸಿಂಗ್ ಅವರ ಮನವಿಯನ್ನು ಆಲಿಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದ್ದು, ಮಹಾರಾಷ್ಟ್ರ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ನಿಗದಿಪಡಿಸಲಾಗಿದೆ.

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಪರಮ್ ಬೀರ್ ಸಿಂಗ್ ನಡುವಿನ ಜಗಳದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು, ಇದು ತುಂಬಾ ಚಿಂತೆಗೀಡು ಮಾಡಿದೆ” ಎಂದು ಹೇಳಿದೆ. ಈ ವಿಷಯವು ಮತ್ತಷ್ಟು ಕುತೂಹಲ ಹುಟ್ಟಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಬುಧವಾರ ಬಾಂಬೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಿಂಗ್ ಮತ್ತು ನಗರದ ಇತರ ಕೆಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಸುಲಿಗೆ ಪ್ರಕರಣದಲ್ಲಿ ಸಿಂಗ್ ಅವರನ್ನು “ಘೋಷಿತ ಅಪರಾಧಿ” ಎಂದು ಘೋಷಿಸಿತ್ತು.

ಸಿಂಗ್ ಕೊನೆಯದಾಗಿ ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಕಚೇರಿಗೆ ಹಾಜರಾಗಿದ್ದರು, ನಂತರ ಅವರು ರಜೆಯ ಮೇಲೆ ತೆರಳಿದ್ದರು. ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ರಾಜ್ಯ ಪೊಲೀಸರು ಕಳೆದ ತಿಂಗಳು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು.

ಸುಲಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಅಪರಾಧ ವಿಭಾಗ, ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರವೂ ಐಪಿಎಸ್ ಅಧಿಕಾರಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಹೇಳುವ ಮೂಲಕ ಅವರ ವಿರುದ್ಧ ಘೋಷಣೆಯನ್ನು ಕೋರಿತ್ತು.

ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 82 ರ ಅಡಿಯಲ್ಲಿ, ನ್ಯಾಯಾಲಯವು ಆರೋಪಿಯ ವಿರುದ್ಧ ಹೊರಡಿಸಲಾದ ವಾರಂಟ್ ಅನ್ನು ಕಾರ್ಯಗತಗೊಳಿಸಲು ಸಾಧ್ಯವಾಗದಿದ್ದಲ್ಲಿ ಹಾಜರಾಗಲು ಅಗತ್ಯವಿರುವ ಘೋಷಣೆಯನ್ನು ಪ್ರಕಟಿಸಬಹುದು.

ಸೆಕ್ಷನ್ 83 ರ ಪ್ರಕಾರ ಅಂತಹ ಘೋಷಣೆಯನ್ನು ಹೊರಡಿಸಿದ ನಂತರ ನ್ಯಾಯಾಲಯವು ಅಪರಾಧಿಯ ಆಸ್ತಿಗಳನ್ನು ವಶಕ್ಕೆ ಪಡೆಯಲು ಆದೇಶಿಸಬಹುದು. ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಕೂಡ ಆರೋಪಿಯಾಗಿದ್ದಾರೆ.

ಇದನ್ನೂ ಓದಿ:  ಮುಂಬೈ ಮಾಜಿ ಪೊಲೀಸ್​ ಪರಮ್​ ಬೀರ್​ ಸಿಂಗ್ ವಿರುದ್ಧ ಜಾಮೀನು ರಹಿತ ವಾರೆಂಟ್​ ಜಾರಿ; ಮಾಜಿ ಅಧಿಕಾರಿ ನಾಪತ್ತೆ

Click on your DTH Provider to Add TV9 Kannada