ಭಾರತದ ಮುಖ್ಯ ನ್ಯಾಯಾಧೀಶ ನಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ಸುಪ್ರೀಂ ಕೋರ್ಟನ್ನು ತಮ್ಮ ಟ್ವೀಟ್ಗಳ ಮೂಲಕ ಹೆಸರಾಂತ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಟೀಕಿಸಿರುವುದು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿರುವ ಸರ್ವೋಚ್ಛ ನ್ಯಾಯಾಲಯವು ರೂ. 1 ಜುಲ್ಮಾನೆಯನ್ನು ಅವರಿಗೆ ವಿಧಿಸಿದೆ. ಒಂದು ಪಕ್ಷ ಭೂಷಣ್ ಸೆಪ್ಟಂಬರ್ 15ರೊಳಗಾಗಿ ತಮ್ಮ ಮೇಲೆ ವಿಧಿಸಿರುವ ದಂಡವನ್ನು ಭರಿಸದಿದ್ದರೆ ಮೂರು ತಿಂಗಳ ಸೆರೆವಾಸ ಇಲ್ಲವೆ ಮೂರು ತಿಂಗಳು ವಕೀಲಿಕೆಯನ್ನು ನಡೆಸದಿರುವ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.
‘‘ಬೇಷರತ್ ಕ್ಷಮಾಪಣೆ ಕೇಳಲು ಕೋರ್ಟ್ ಭೂಷಣ್ ಅವರಿಗೆ ಹಲವಾರು ಅವಕಾಶಗಳನ್ನು ನೀಡಿತು. ಆದರೆ ಅವರು ಹಾಗೆ ಮಾಡದೆ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದರಲ್ಲದೆ ತಾವು ಮಾಡಿದ ಟೀಕೆಗಳಿಗೆ ಪ್ರಚಾರವನ್ನು ಗಿಟ್ಟಿಸಿಕೊಂಡರು,’’ ಎಂದು ಕೋರ್ಟ್ ಹೇಳಿತು.
ಕ್ಷಮಾಪಣೆ ಕೇಳಲು ಶುಕ್ರವಾರದಂದು ನಿರಾಕರಿಸಿದ್ದ ಪ್ರಶಾಂತ್ ಭೂಷಣ್ ಅವರು, ‘ವಿಷಾದ ವ್ಯಕ್ತಪಡಿಸುವುದೂ ನ್ಯಾಯಾಂಗ ನಿಂದನೆ ಮತ್ತು ನನ್ನ ಅಂತರಾತ್ಮ ಜೊತೆ ರಾಜಿ ಮಾಡಿಕೊಂಡಂತೆ,’ ಎಂದಿದ್ದರು. ‘ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಬಹಿರಂಗ ಟೀಕೆಯ ಅವಶ್ಯಕತೆಯಿತ್ತು’ ಅಂತಲೂ ಭೂಷಣ್ ಹೇಳಿದ್ದರು.
ಸುಪ್ರೀಂ ಕೋರ್ಟ್ ಶಿಕ್ಷೆ ಪ್ರಕಟಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಭೂಷಣ್, ಜುಲ್ಮಾನೆ ಭರಿಸುವುದೋ ಅಥವಾ ಇತರ ಆದ್ಯತೆಗಳ ಬಗ್ಗೆ ಪರಿಶೀಲಿಸುವುದೋ ಎನ್ನುವುದರ ಬಗ್ಗೆ ಒಂದು ಸಾಮೂಹಿಕ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದರು.