Reservation: ಶೇ. 50ಕ್ಕಿಂತ ಹೆಚ್ಚು ಮೀಸಲಾತಿ ಬೇಕಾ? ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ

| Updated By: ganapathi bhat

Updated on: Apr 06, 2022 | 7:19 PM

ಮೀಸಲಾತಿ ಪ್ರಮಾಣ ಹೆಚ್ಚಳದ ವಿಚಾರವಾಗಿ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಬಯಸಿರುವ ಸುಪ್ರೀಂ ಕೋರ್ಟ್ ಶೇ. 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕಾ ಎಂದು ಪ್ರಶ್ನಿಸಿ, ನೋಟೀಸ್ ಜಾರಿಗೊಳಿಸಿದೆ.

Reservation: ಶೇ. 50ಕ್ಕಿಂತ ಹೆಚ್ಚು ಮೀಸಲಾತಿ ಬೇಕಾ? ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ಸುಪ್ರೀಂ ಕೋರ್ಟ್
Follow us on

ದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಹೋರಾಟಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆಯೊಂದನ್ನು ಮುಂದಿಟ್ಟಿದೆ. ಶೇ. 50ಕ್ಕಿಂತ ಹೆಚ್ಚು ಮೀಸಲಾತಿ ನೀಡಬೇಕಾ ಎಂಬ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ. ಮೀಸಲಾತಿ ಪ್ರಮಾಣ ಹೆಚ್ಚಳದ ವಿಚಾರವಾಗಿ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಬಯಸಿರುವ ಸುಪ್ರೀಂ ಕೋರ್ಟ್ ಶೇ. 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕಾ ಎಂದು ಪ್ರಶ್ನಿಸಿ, ನೋಟಿಸ್ ಜಾರಿಗೊಳಿಸಿದೆ. ಬಳಿಕ, ಮಾರ್ಚ್ 15ರಿಂದ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಪಂಚಮಸಾಲಿ ಮೀಸಲಾತಿ ಹೋರಾಟ ಸಂಚಲನ ಸೃಷ್ಟಿಸಿತ್ತು. ಪಾದಯಾತ್ರೆ, ಬೃಹತ್ ಸಮಾವೇಶದ ಮೂಲಕ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು, ಮುಖಂಡರು ಮೀಸಲಾತಿ ಬೇಡಿಕೆ ಇಟ್ಟಿದ್ದರು. ಆ ವೇಳೆ, ರಾಜಕೀಯ ಒತ್ತಡವೂ ಉಂಟಾಗಿತ್ತು. ಅದಕ್ಕೆ ಪ್ರತಿಯಾಗಿ ಮೀಸಲಾತಿಯ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಲಿಸ್ಟ್​ಗೆ ವೀರಶೈವ ಹಾಗೂ ಒಕ್ಕಲಿಗ ಸಮುದಾಯದ ಕೆಲ ಪಂಗಡಗಳನ್ನ ಸೇರಿಸಲಾಗಿದೆ. ಸುಪ್ರೀಂಕೋರ್ಟ್ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂದು ಹೇಳಿದೆ. ಇತರ ಕೆಲ ರಾಜ್ಯಗಳಲ್ಲಿ ಇದೇ ರೀತಿ ಬೇಡಿಕೆ ಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.

ರಾಜ್ಯದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿದ ಬಲಿಷ್ಠ ಸಮಾಜಗಳು 2ಎ ಮೀಸಲಾತಿ ಕೇಳುತ್ತಿವೆ. ಮೀಸಲಾತಿ ನೀಡಲು ಸರ್ಕಾರ ಕೂಡ ಆಸಕ್ತಿ ತೋರುತ್ತಿದೆ. ಆದರೆ, ಬಲಿಷ್ಠ ಸಮುದಾಯಗಳಿಗೆ 2ಎ ಮೀಸಲಾತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿತ್ತು. ಮೀಸಲಾತಿ ಪ್ರಬಲರ ಪಾಲಾಗ್ತಿದೆ. ಪರಿಶಿಷ್ಟ ಜಾತಿ ಮೀಸಲಾತಿ ಪ್ರಬಲರ ಪಾಲಾಗುತ್ತಿದೆ. ಇದರಿಂದ ಕನಿಷ್ಠ ಮಟ್ಟದಲ್ಲಿ ಜೀವನ ಮಾಡುವ ಮಾದಿಗರಿಗೆ ಅನ್ಯಾಯವಾಗುತ್ತಿದೆ ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕೋಡಿಹಳ್ಳಿ ಮಠದ ಶ್ರೀಗಳಾದ ಷಡಕ್ಷರಿಮುನಿ ಶ್ರೀಗಳು ಹೇಳಿದ್ದರು. ಮಾ.25ರಿಂದ ಮಾದಿಗ ಸಮುದಾಯದ ಸದಸ್ಯರು ಬೃಹತ್​ ಪಾದಯಾತ್ರೆಯನ್ನು ಆಯೋಜಿಸಿರುವ ಬಗ್ಗೆಯೂ ಹೇಳಿದ್ದರು.

ಪಂಚಮಸಾಲಿ, ಮಾದಿಗ, ಜತೆಗೆ ಲಿಂಗಾಯತ, ಕುರುಬ, ವಾಲ್ಮೀಕಿ ಸಮುದಾಯಗಳು ಕೂಡ ಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದಿದ್ದವು. ಮಡಿವಾಳ ಸಮುದಾಯ ST ಮೀಸಲಾತಿ ನೀಡಬೇಕೆಂದು ಬೇಡಿಕೆ ಇಟ್ಟಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶದ ಇತರೆ ರಾಜ್ಯಗಳಲ್ಲಿಯೂ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯ, ಹರ್ಯಾಣದಲ್ಲಿ ಜಾಟ್ ಸಮುದಾಯ ಮೀಸಲಾತಿ ಬೇಕೆಂದು ಬೇಡಿಕೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಡೆ ಬಹುಮುಖ್ಯವಾಗಿದೆ.

ಕಳೆದ 71 ವರ್ಷಗಳಿಂದ ಮೀಸಲಾತಿ ಇದೆಯಾದರೂ, ಸಿಗಬೇಕಾದ ಜನರಿಗೆ ಅಥವಾ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ವಲಸಿಗರು, ಕೊಳಗೇರಿಯಲ್ಲಿ ಬದುಕುತ್ತಿರುವವರು, ಆದಿವಾಸಿ ಜನಾಂಗದವರು, ದೇವದಾಸಿಗಳು ಇಂಥವರಿಗೆ ಮೀಸಲಾತಿ ಸಿಕ್ಕಿಲ್ಲ. ಹಾಗಾಗಿ ಮೊದಲು, ಈ ಸಮುದಾಯಗಳಿಗೆ ಮೀಸಲಾತಿ ತಲುಪಿಸುವುದು ಹೇಗೆ ಎಂಬ ಚರ್ಚೆ ನಡೆಯಬೇಕು ಎಂದು ಈ ಹಿಂದೆ ನಡೆದಿದ್ದ ಟಿವಿ9 ಡಿಜಿಟಲ್ ಲೈವ್ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಪರಿಶಿಷ್ಟ ಜಾತಿ ಮೀಸಲಾತಿ ಪ್ರಬಲರ ಪಾಲಾಗುತ್ತಿದೆ -ರಾಜ್ಯದಲ್ಲಿ ಆರಂಭವಾಗಲಿದೆ ಬೃಹತ್​ ಮಾದಿಗ ಪಾದಯಾತ್ರೆ

ವಿಶ್ಲೇಷಣೆ | ಪಂಚಮಸಾಲಿ ಮೀಸಲಾತಿ ಮೂಸೆಯಲ್ಲಿ ಬೇಯುವುದು ಯಾರ ಬೇಳೆ?

Published On - 12:02 pm, Mon, 8 March 21