ಉಕ್ರೇನ್ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಪಂಜಾಬ್ ಮೂಲದ ಚಂದನ್ ಜಿಂದಾಲ್ (22) ಮೃತ ಯುವಕ. ಈತ ಉಕ್ರೇನ್(Ukraine)ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದ. ಚಂದನ್ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು(ಅಂದರೆ ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು).
ಪಂಜಾಬ್ನ ಬರ್ನಾಲಾದವರಾದ ಚಂದನ್ ಜಿಂದಾಲ್ಗೆ ಪಾರ್ಶವಾಯು ಉಂಟಾಗಿ ಅವರನ್ನು ವಿನ್ನಿಟ್ಸಿಯಾದ ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೂ ಈಗಾಗಲೇ ವಿಷಯ ತಿಳಿಸಲಾಗಿದ್ದು, ಚಂದನ್ ಮೃತದೇಹವನ್ನು ವಾಪಸ್ ತರಲು ಸಹಾಯ ಮಾಡುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ. ರಷ್ಯಾ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ನಲ್ಲಿ ಮೃತಪಡುತ್ತಿರುವ ಎರಡನೇ ವಿದ್ಯಾರ್ಥಿ ಚಂದನ್. ಹಾಗಂತ ಇವರು ರಷ್ಯಾದ ದಾಳಿಗೆ ಬಲಿಯಾಗಲಿಲ್ಲ ಎಂಬುದು ಸ್ಪಷ್ಟವಾಗಿದೆ.
ಮಾರ್ಚ್ 1ರಂದು ಹಾವೇರಿ ಮೂಲದ ನವೀನ್ ಖಾರ್ಕೀವ್ನಲ್ಲಿ ರಷ್ಯಾದ ಬಾಂಬ್ ದಾಳಿಗೆ ಬಲಿಯಾಗಿದ್ದರು. ಮುಂಜಾನೆ ಎದ್ದು ತಿಂಡಿ ತರಲೆಂದು ತಾವಿದ್ದ ಬಂಕರ್ನಿಂದ ಸ್ವಲ್ಪವೇ ದೂರದಲ್ಲಿದ್ದ ಸೂಪರ್ ಮಾರ್ಕೆಟ್ಗೆ ಹೋಗಿದ್ದ ನವೀನ್ ಮೃತಪಟ್ಟಿದ್ದರು. ಅವರ ಮೃತದೇಹವನ್ನೂ ವಾಪಸ್ ತರುವ ಪ್ರಯತ್ನಗಳು ನಡೆಯುತ್ತಿವೆ. ಕೊನೇಬಾರಿಗೆ ತಮ್ಮ ಮಗನ ಮುಖ ನೋಡಬೇಕು ಎಂದು ನವೀನ್ ಕುಟುಂಬದವರು ದುಃಖಿಸುತ್ತಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಪ್ರಾರಂಭಿಸಿದ್ದು, ಇದಕ್ಕೆ ಭಾರತೀಯ ವಾಯುಸೇನೆಯೂ ಸಾಥ್ ನೀಡಿದೆ. ಉಕ್ರೇನ್ನಲ್ಲಿರುವ ಪ್ರತಿಯೊಬ್ಬ ಭಾರತೀಯನನ್ನೂ ವಾಪಸ್ ಕರೆತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಮುಂದೆ ರಷ್ಯಾ ಗಡಿಯ ಮೂಲಕವೂ ಭಾರತೀಯರನ್ನು ಸ್ಥಳಾಂತರ ಮಾಡಲು ಅನುಮತಿ ಸಿಕ್ಕಿದ್ದು, ಕಾರ್ಯಾಚರಣೆ ಇನ್ನಷ್ಟು ಚುರುಕಾಗಿ ನಡೆಯಲಿದೆ.
ಇದನ್ನೂ ಓದಿ: ಅಣು ಯುದ್ಧದ ಭೀತಿ ವ್ಯಕ್ತಪಡಿಸ್ತಾ ಹಾಲಿ ಅಧ್ಯಕ್ಷ ಝೆಲೆನ್ಸ್ಕಿ ಪದಚ್ಯುತಿಗೆ ರಷ್ಯಾ ಹುನ್ನಾರ ನಡೆಸಿದೆ -ಉಕ್ರೇನ್ ಆತಂಕ
Published On - 5:03 pm, Wed, 2 March 22