ಲಖನೌ ಮೂಲದ ಸಾಗರ್​ಗೆ ಮೈಸೂರು ಎಂಪಿ ಪಾಸ್‌ ಸಿಕ್ಕಿದ್ದೇಗೆ? ಸ್ಪೀಕರ್​ಗೆ ಪ್ರತಾಪ್‌ ಸಿಂಹ ಕೊಟ್ಟ ವಿವರಣೆ ಇಲ್ಲಿದೆ

|

Updated on: Dec 13, 2023 | 10:54 PM

Security breach in Lok Sabha: ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದುಕೊಂಡು ಬಂದಿದ್ದ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ್ದು, ಇದೀಗ ಪಾಸ್ ಕೊಟ್ಟಿದ್ದ ಪ್ರತಾಪ್ ಸಿಂಹ ಕುತ್ತಿಗೆಗೆ ಬಂದಿದೆ. ಲಖನೌ​ ಮೂಲದ ಸಾಗರ್ ಶರ್ಮಾಗೆ ಹೇಗೆ ಪಾಸ್​ ಸಿಕ್ತು ಎನ್ನುವ ಚರ್ಚೆ ನಡೆಯುತ್ತಿದ್ದು, ಇದಕ್ಕೆ ಸ್ವತಃ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ. ಅದು ಈ ಕೆಳಗಿನಂತಿದೆ.

ಲಖನೌ ಮೂಲದ ಸಾಗರ್​ಗೆ ಮೈಸೂರು ಎಂಪಿ ಪಾಸ್‌ ಸಿಕ್ಕಿದ್ದೇಗೆ? ಸ್ಪೀಕರ್​ಗೆ ಪ್ರತಾಪ್‌ ಸಿಂಹ ಕೊಟ್ಟ ವಿವರಣೆ ಇಲ್ಲಿದೆ
ಸಾಗರ್ ಶರ್ಮಾ, ಪ್ರತಾಪ್ ಸಿಂಹ
Follow us on

ನವದೆಹಲಿ, (ಡಿಸೆಂಬರ್ 13): ಲೋಕಸಭೆ ಭದ್ರತೆಯನ್ನು ಭೇದಿಸಿ(Security breach) ಸದನದೊಳಗೆ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಇನ್ನು ಪಾಸ್ ಕೊಟ್ಟಿರುವ  ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ. ಇದರ ಮಧ್ಯೆ ಪ್ರತಾಪ್ ಸಿಂಹ ಅವರು ಇಂದಿನ ಘಟನೆಯ ಕುರಿತು ಲೋಕಸಭಾ ಸ್ಪೀಕರ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿದ್ದು, ಲಖನೌ​ ಮೂಲದ ಬಂಧಿತ ಆರೋಪಿ ಸಾಗರ್ ಶರ್ಮಾಗೆ ಹೇಗೆ ತಮ್ಮ ಪಾಸ್  ಇಶ್ಯೂ ಆಗಿದೆ ಎನ್ನುವುದರ ಬಗ್ಗೆ ವಿವರಣೆ ನೀಡಿದ್ದಾರೆ.

ಘಟನೆ ಬಳಿಕ ಸಂಸದ ಪ್ರತಾಪ್ ಸಿಂಹ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವರನ್ನು ಭೇಟಿ ಮಾಡಿದ್ದು, ಆರೋಪಿ ಸಾಗರ್ ಶರ್ಮಾ ತಂದೆ ಲಖನೌ ಮೂಲದವರಾಗಿದ್ರೂ ಸಹ ನಮ್ಮ ಕ್ಷೇತ್ರದಲ್ಲಿದ್ದಾರೆ. ಹೊಸ ಸಂಸತ್ ಭವನಕ್ಕೆ ಭೇಟಿ ನೀಡಲು ಪಾಸ್‌ಗೆ ಮನವಿ ಮಾಡಿದ್ದರು. ಸಂಸತ್ತಿಗೆ ಭೇಟಿ ನೀಡಲು ತಮ್ಮ ಆಪ್ತ ಸಹಾಯಕ ಮತ್ತು ಅವರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅವರು ಹಂಚಿಕೊಂಡದ್ದನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಇಂದಿನ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಭದ್ರತಾ ಲೋಪ: ಪಾಸ್​ ನೀಡುವಂತೆ ಮೈಸೂರು ಕಚೇರಿಯಿಂದಲೇ ಹೋಗಿತ್ತು ಫೋನ್ ಕರೆ

ಇನ್ನು ಘಟನೆ ನಡೆದ ಆರಂಭದಲ್ಲಿ ಪ್ರತಾಪ್‌ ಸಿಂಹಗೂ ಸಾಗರ್‌ ಶರ್ಮಾ ಜತೆ ಗ್ಯಾಲರಿಗೆ ಬಂದು ಸಿಕ್ಕಿಬಿದ್ದ ಮೈಸೂರಿನ ಮನೋರಂಜನ್‌ಗೂ ಪರಿಚಯ ಇರಬಹುದು ಎಂದು ಭಾವಿಸಲಾಗಿತ್ತು. ಅದೇ ಪರಿಚಯದಲ್ಲಿ ಮನೋರಂಜನ್‌, ಸಾಗರ್‌ ಶರ್ಮಾ ಪಾಸ್‌ ಪಡೆದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಪ್ರತಾಪ್‌ಸಿಂಹ ಹೇಳುವ ಪ್ರಕಾರ, ಅವರ ಕಚೇರಿಯಿಂದ ಪಾಸ್‌ ಇಶ್ಯೂ ಆಗಿದ್ದು ಸಾಗರ್‌ ಶರ್ಮಾಗೆ. ಸಾಗರ್‌ ಶರ್ಮಾನ ತಮ್ಮ ತಂದೆ ಶಂಕರ್‌ಲಾಲ್‌ ಶರ್ಮಾ ಮೂಲಕ ಪ್ರತಾಪ್ ಸಿಂಹ ಪಾಸ್ ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ. ಶಂಕರ್‌ಲಾಲ್‌ ಶರ್ಮಾ ಮೂಲತಃ ಲಖನೌ​ನವರಾಗಿದ್ದರೂ ಪ್ರಸ್ತುತ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದ್ರೆ, ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಇದುವರೆಗೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯಿಯೆ ನೀಡಿಲ್ಲ.

ಲೋಕಸಭೆ ಭದ್ರತೆಯನ್ನು ಭೇದಿಸಿ ಆತಂಕಕ್ಕೆ ಸೃಷ್ಟಿದ ಪ್ರಕರಣದಲ್ಲಿ ನಾಲ್ವರು ಎಂದು ಭಾವಿಸಲಾಗಿತ್ತು. ಆದರೆ, ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರಿನ ಡಿ. ಮನೋರಂಜನ್, ಉತ್ತರ ಪ್ರದೇಶದ ಸಾಗರ್ ಶರ್ಮಾ ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ (Amol Shinde) ಮತ್ತು ಹರ್ಯಾಣದ ಹಿಸಾರ್‌ನ ನೀಲಮ್ ದೇವಿ(Neelam Devi), ಗುರುಗ್ರಾಮದ ಲಲಿತ್ ಝಾ (Lalit Jha) ಮತ್ತು ವಿಕ್ಕಿ ಶರ್ಮಾ (Vicky Sharma) ಅವರನ್ನು ಬಂಧಿಸಲಾಗಿದೆ. ಮನೋರಂಜನ್ ಹಾಗೂ ಸಾಗರ್ ಶರ್ಮಾ ಪ್ರತಾಪ್ ಸಿಂಹ ಅವರ ಪಾಸ್ ಮೂಲಕ ಕಲಾಪ ವೀಕ್ಷಣೆಗೆ ಹೋಗಿದ್ದರು. ಇನ್ನುಳಿದ ನಾಲ್ವರು ಸಂಸತ್​ ಆವರಣದಲ್ಲಿದ್ದರು ಎಂದು ತಿಳಿದುಬಂದಿದೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:45 pm, Wed, 13 December 23