ಪುಣೆ ಆಗಸ್ಟ್ 14: ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವುದಕ್ಕಾಗಿ ವಿಐಪಿ ವಾಹನಗಳ (VIP vehicles) ಸೈರನ್ ಸದ್ದು ಬದಲಿಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಶನಿವಾರ ಪುಣೆಯ ಚಾಂದಿನಿ ಚೌಕ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಬ್ದ ಮಾಲಿನ್ಯವನ್ನು ನಿಯಂತ್ರಿಸುವುದು ಬಹಳ ಮುಖ್ಯ. ವಿಐಪಿಗಳ ವಾಹನದ ಮೇಲಿನ ಕೆಂಪುಗೂಟಕ್ಕೆ (beacon) ಬ್ರೇಕ್ ಹಾಕಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈಗ, ನಾನು ವಿಐಪಿ ವಾಹನಗಳ ಸೈರನ್‌ಗಳನ್ನು ಬದಲಿಸುವುದರ ಬಗ್ಗೆ ಯೋಜಿಸುತ್ತಿದ್ದೇನೆ ಎಂದಿದ್ದಾರೆ.
ಹಾರ್ನ್, ಸೈರನ್‌ಗಳ ಶಬ್ದವನ್ನು ಭಾರತೀಯ ಸಂಗೀತ ವಾದ್ಯಗಳ ಹಿತವಾದ ಸಂಗೀತದೊಂದಿಗೆ ಬದಲಾಯಿಸಲು ನಾನು ಬಯಸುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ. ನಾನು ಸೈರನ್ ಶಬ್ದವನ್ನು ಕೊಳಲು, ತಬಲಾ ಮತ್ತು ‘ಶಂಖ’ ಶಬ್ದದಿಂದ ಬದಲಾಯಿಸುವ ನೀತಿಯನ್ನು ಮಾಡುತ್ತಿದ್ದೇನೆ. ಜನರು ಶಬ್ದ ಮಾಲಿನ್ಯದಿಂದ ಮುಕ್ತರಾಗಬೇಕೆಂದು ನಾನು ಬಯಸುತ್ತೇನೆ. ಮಲ್ಟಿ-ಲೆವೆಲ್ ಫ್ಲೈಓವರ್‌ಗಳ ಯೋಜನೆ ಎಂದು ಕರೆಯಲ್ಪಡುವ ಬಹು ನಿರೀಕ್ಷಿತ ಪುಣೆಯ ಚಾಂದಿನಿ ಚೌಕ್ ಉದ್ಘಾಟಿಸಿ ಮಾತನಾಡುತ್ತಿದ್ದರವರು . ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಸೇರಿದಂತೆ ಸ್ಥಳೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂಪೂರ್ಣ ಯೋಜನೆಯಲ್ಲಿ ಒಟ್ಟು 4 ಮೇಲ್ಸೇತುವೆಗಳು, 1 ಅಂಡರ್‌ಪಾಸ್ ಅಗಲೀಕರಣ ಮತ್ತು 2 ಹೊಸ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಚಾಂದಿನಿ ಚೌಕ್ ಮೇಲ್ಸೇತುವೆ ಯೋಜನೆಯು ಮಹಾರಾಷ್ಟ್ರದ ಪುಣೆ ನಗರದಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
865 ಕೋಟಿ ವೆಚ್ಚದ 16.98 ಕಿ.ಮೀ ಉದ್ದದ ಈ ಸೇತುವೆಯಿಂದಾಗಿ ಪುಣೆ ನಗರ ಮತ್ತು ಜಿಲ್ಲೆಯ ಸಂಚಾರ ದಟ್ಟಣೆಯ ಪ್ರಮುಖ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಒಟ್ಟು 16 ಕಿ.ಮೀ ಉದ್ದದ ಈ ಯೋಜನೆಯಡಿ 2.2 ಕಿ.ಮೀ ಉದ್ದದ ಚಾಂದಿನಿ ಚೌಕ್ ಇಂಟರ್ ಚೇಂಜ್ ಕಾಮಗಾರಿ ಪೂರ್ಣಗೊಂಡಿದೆ. ಮುಂಬೈ-ಬೆಂಗಳೂರು ಹೆದ್ದಾರಿಯ ಎರಡೂ ಬದಿಗಳು 2-ಲೇನ್ ಆಂತರಿಕ ಮತ್ತು 2-ಲೇನ್ ಬಾಹ್ಯ ಸೇವೆಯನ್ನು ಹೊಂದಿವೆ. ಒಂದೇ ಇಂಟರ್‌ಚೇಂಜ್‌ನಿಂದ 8 ವಿಭಿನ್ನ ದಿಕ್ಕುಗಳಲ್ಲಿ ಹೋಗಲು ಒಟ್ಟು 8 ರ‍್ಯಾಂಪ್‌ಗಳನ್ನು ನಿರ್ಮಿಸಲಾಗಿದೆ, ಇದು ವಿವಿಧ ಪ್ರದೇಶಗಳಿಗೆ ಬಲವಾದ ಸಂಪರ್ಕವನ್ನು ಒದಗಿಸುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ: ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಪುಣೆ ಬೆಂಗಳೂರು ಹೆದ್ದಾರಿ NH-48 ಮತ್ತು ಹೆದ್ದಾರಿಯ ಹತ್ತಿರದ ಸ್ಥಳೀಯ ಪ್ರದೇಶದಲ್ಲಿ ಟ್ರಾಫಿಕ್ ಅವ್ಯವಸ್ಥೆಯನ್ನು ನಿವಾರಿಸಲು ಈ ಬಹು-ಹಂತದ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಈ ಯೋಜನೆಗೆ ಶಂಕುಸ್ಥಾಪನೆಯಾಗಿ ಐದು ವರ್ಷಗಳಾಗಿವೆ. ರಾಜ್ಯ ಸರ್ಕಾರ ಮತ್ತು ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಸಹಾಯದಿಂದ ಕೈಗೊಂಡ ಯೋಜನೆಯ ಅಂದಾಜು ವೆಚ್ಚ 865 ಕೋಟಿ ರೂ. ಬವಧಾನ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಪಾಶನ್, ಮುಲ್ಶಿ ರಸ್ತೆ, ಪುಣೆ ನಗರದ ಪೌಡ್ ರಸ್ತೆ ಮತ್ತು ಮುಂಬೈ-ಬೆಂಗಳೂರು ಬೈಪಾಸ್‌ನಂತಹ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿ ಚಾಂದಿನಿ ಚೌಕ್ ಕಾರ್ಯನಿರ್ವಹಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ