ಭಾರತದಲ್ಲೇ ಉತ್ಪಾದನೆಯಾಗಲಿದೆ ನೊವಾವ್ಯಾಕ್ಸ್ ಲಸಿಕೆ; ಡಿಸೆಂಬರ್ ಹೊತ್ತಿಗೆ 20 ಕೋಟಿ ಡೋಸ್ ಲಭ್ಯವಾಗುವ ನಿರೀಕ್ಷೆ
Novavax Covid 19 Vaccine: ಅಮೆರಿಕದ ಮೆಕ್ಸಿಕೋದ ಸುಮಾರು 119 ಪ್ರದೇಶಗಳಲ್ಲಿ ನೊವಾವ್ಯಾಕ್ಸ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಗಿತ್ತು. ಈ ವ್ಯಾಕ್ಸಿನ್ ಕೊರೊನಾ ರೂಪಾಂತರಿ ವೈರಸ್ಗಳ ವಿರುದ್ಧವೂ ತುಂಬ ಪರಿಣಾಮಕಾರಿ ಎಂಬುದು ಕ್ಲಿನಿಕಲ್ ಟ್ರಯಲ್ನಲ್ಲಿ ಗೊತ್ತಾಗಿದೆ.
ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತದ ಬತ್ತಳಿಕೆ ಸೇರಲು ಇನ್ನೊಂದು ಲಸಿಕೆ ಸಜ್ಜಾಗಿದೆ. ಅದು ಅಮೆರಿಕ ಮೂಲದ ನೊವಾವ್ಯಾಕ್ಸ್ ಎಂಬ ಲಸಿಕೆ. ಯುಎಸ್ನ ಜೈವಿಕ ತಂತ್ರಜ್ಞಾನ ಕಂಪನಿಯಾದ ನೋವಾವಾಕ್ಸ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಕೊರೊನಾ ಸೋಂಕಿನ ವಿರುದ್ಧ ಶೇ.90.4ರಷ್ಟು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸಾಬೀತಾಗಿದೆ. ನೊವಾವ್ಯಾಕ್ಸ್ನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಸೀರಮ್ ಇನ್ಸ್ಟಿಟ್ಯೂಟ್ನೊಂದಿಗೆ ಯುಎಸ್ ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿ ಕೊವಾವ್ಯಾಕ್ಸ್ ಎಂಬ ಹೆಸರಿನಲ್ಲಿ ಉತ್ಪಾದನೆ, ಬಳಕೆಯಾಗಲಿದೆ.
20 ಕೋಟಿ ಡೋಸ್ಗಳಷ್ಟು ನೊವಾವ್ಯಾಕ್ಸ್ (ಕೊವಾವಾಕ್ಸ್) ಲಸಿಕೆ ಆಗಸ್ಟ್-ಡಿಸೆಂಬರ್ ಹೊತ್ತಿಗೆ ಭಾರತದಲ್ಲಿ ಲಭ್ಯವಾಗಲಿದೆ ಎಂದು ಭಾರತ ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಹಾಗಂತ ಈ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ಸಿಕ್ಕಿಲ್ಲ. ಯುಎಸ್ ಆಹಾರ ಮತ್ತು ಔಷಧ ಆಡಳಿತ ಅನುಮೋದನೆ ನೀಡಿದ ಬಳಿಕವಷ್ಟೇ ಭಾರತದಲ್ಲೂ ಬಳಕೆಗೆ ಅನುಮತಿ ದೊರೆಯಲಿದೆ.
ಭಾರತದ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿದೆ. ಇದು ಜಾಗತಿಕವಾಗಿ ಅತ್ಯಂತ ಹೆಚ್ಚು ಡೋಸ್ಗಳನ್ನು ಲಸಿಕೆ ಉತ್ಪಾದನೆ ಮತ್ತು ಮಾರಾಟ ಮಾಡುವ ಸಂಸ್ಥೆ. ಹಾಗೇ ನಮ್ಮ ಉತ್ಪಾದನಾ ಗುರಿಯನ್ನು ತಲುಪಲು ಸೀರಮ್ ಇನ್ಸ್ಟಿಟ್ಯೂಟ್ ನಿರ್ಣಾಯಕ ಪಾಲುದಾರ ರಂದು ನೊವಾವ್ಯಾಕ್ಸ್ ಕಂಪನಿ ಹೇಳಿಕೊಂಡಿದೆ. ಸದ್ಯ ಎಷ್ಟು ಲಸಿಕೆ ಉತ್ಪಾದನೆ ಮಾಡುತ್ತಿದೆ ಎಂಬುದನ್ನು ಇನ್ನೂ ಬಹಿರಂಗ ಪಡಿಸದ ನೊವಾವ್ಯಾಕ್ಸ್, ಭಾರತದಲ್ಲಿ ತಿಂಗಳಿಗೆ 50 ಮಿಲಿಯನ್ ಡೋಸ್ಗಳಷ್ಟು ಕೊವಾವ್ಯಾಕ್ಸ್ ಉತ್ಪಾದಿಸುವ ಗುರಿ ಹೊಂದಿರುವುದಾಗಿ ಮಾಹಿತಿ ನೀಡಿದೆ.
ಅಮೆರಿಕದ ಮೆಕ್ಸಿಕೋದ ಸುಮಾರು 119 ಪ್ರದೇಶಗಳಲ್ಲಿ ನೊವಾವ್ಯಾಕ್ಸ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಗಿತ್ತು. ಈ ವ್ಯಾಕ್ಸಿನ್ ಕೊರೊನಾ ರೂಪಾಂತರಿ ವೈರಸ್ಗಳ ವಿರುದ್ಧವೂ ತುಂಬ ಪರಿಣಾಮಕಾರಿ ಎಂಬುದು ಕ್ಲಿನಿಕಲ್ ಟ್ರಯಲ್ನಲ್ಲಿ ಗೊತ್ತಾಗಿದೆ ಎಂದು ಹೇಳಲಾಗಿದೆ. ಇನ್ನು ಮಾರ್ಚ್ನಲ್ಲಿಯೇ ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒ ಆದರ್ ಪೂನಾವಾಲಾ ಕೊವಾವ್ಯಾಕ್ಸ್ ಬಗ್ಗೆ ಮಾಹಿತಿ ನೀಡಿದ್ದರು. ಇದರ ಕ್ಲಿನಿಕಲ್ ಟ್ರಯಲ್ ಭಾರತದಲ್ಲಿ ಶುರುವಾಗಿದ್ದು, ಸೆಪ್ಟೆಂಬರ್ನಲ್ಲಿ ನಮ್ಮ ಕಂಪನಿ ಇದನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಮೇಡ್ ಇನ್ ಚೀನಾ ಉತ್ಪನ್ನಗಳ ಖರೀದಿಯಿಂದ ಹಿಂದಕ್ಕೆ ಸರಿದ ಶೇ 40ಕ್ಕೂ ಹೆಚ್ಚು ಭಾರತೀಯರು; ಸಮೀಕ್ಷೆಯಲ್ಲಿ ಕಂಡು ಬಂದಿದ್ದೇನು?
Serum Institute to manufacture US Based Novavax Covid vaccine in India