ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ; ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ
ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರನ್ನು ವಿಚಾರಣೆಯಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆಯಾಗಿದೆ. ಮದ್ಯ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕೆಂಬ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಇಂದು ತಿರಸ್ಕರಿಸಿದ್ದಾರೆ. ಅವರ ವಾದಗಳಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 20: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ದೊಡ್ಡ ಹಿನ್ನಡೆಯಾಗಿದ್ದು, ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳ ಮೇಲೆ ಮಾಡಲಾದ ಪಕ್ಷಪಾತದ ಆರೋಪಗಳು ಯಾವುದೇ ವಾಸ್ತವಿಕ ಆಧಾರವನ್ನು ಹೊಂದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಾಗೇ, ಅರವಿಂದ್ ಕೇಜ್ರಿವಾಲ್ ಅವರ ಕೇಸಿನ ವಿಚಾರಣೆಯಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಘೋಷಿಸಿದ್ದಾರೆ.
ಬದಲಿ ನ್ಯಾಯಾಧೀಶರನ್ನು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪು ನೀಡಿದ ನ್ಯಾಯಮೂರ್ತಿ ಸ್ವರಣ್ ಕಾಂತ ಶರ್ಮಾ ಅವರು ಆ ಅರ್ಜಿಯನ್ನು ವಜಾಗೊಳಿಸಿದರು. “ನಾನು ಈ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ. ಈ ಪ್ರಕರಣವನ್ನು ನಾನು ವಿಚಾರಣೆ ನಡೆಸುತ್ತೇನೆ” ಎಂದು ಅವರು ಘೋಷಿಸಿದರು. ಇದಕ್ಕೂ ಮೊದಲು, ಕೇಜ್ರಿವಾಲ್ ಅವರ ಅರ್ಜಿಯ ಕುರಿತು ತೀರ್ಪು ನೀಡುತ್ತಾ, ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ತಮ್ಮ ನಿಷ್ಪಕ್ಷಪಾತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಆರ್‌ಎಸ್‌ಎಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ; ನ್ಯಾಯಾಧೀಶರ ಕುರಿತು ಕೇಜ್ರಿವಾಲ್ ಆರೋಪ
ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಅಧಿವಕ್ತ ಪರಿಷತ್ ಕಾರ್ಯಕ್ರಮಗಳಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಭಾಗಿಯಾಗಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ, ಕಾರ್ಯಕ್ರಮಗಳು ರಾಜಕೀಯವಲ್ಲ. ಕಾನೂನು ವಿಷಯಗಳ ಕುರಿತು ಮಾತನಾಡಲು ಭಾಷಣಕಾರರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ನಾನು ಪಾಲ್ಗೊಂಡಿದ್ದೆ ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಚುನಾವಣೆ ನಡೆದು, ಬಿಜೆಪಿ 10ಕ್ಕೂ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯವನ್ನೇ ಬಿಡುತ್ತೇನೆ; ಕೇಜ್ರಿವಾಲ್ ಶಪಥ
“ನಮ್ಮನ್ನು ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ಈ ಸಂವಾದದಲ್ಲಿ ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಅವಕಾಶವಿರುವುದಿಲ್ಲ. ಬಾರ್ ಮತ್ತು ಬೆಂಚ್ ನಡುವಿನ ಸಂಬಂಧವು ನ್ಯಾಯಾಲಯದ ಕೊಠಡಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಾರ್ ಅಸೋಸಿಯೇಷನ್‌ಗಳು ಕಾರ್ಯಗಳನ್ನು ಆಯೋಜಿಸುವುದು ಅಸಾಮಾನ್ಯವೇನಲ್ಲ. ಅದರಲ್ಲಿ ಭಾಗಿಯಾಗಿದ್ದೇವೆ ಎಂದ ಮಾತ್ರಕ್ಕೆ ಪಕ್ಷಪಾತ ಮಾಡುತ್ತಿದ್ದೇವೆ ಎಂದರ್ಥವಲ್ಲ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Mon, 20 April 26




