ಮುಂಬೈ: ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶರದ್ ಪವಾರ್ ಅವರು 40 ಶಾಸಕರನ್ನು ಹೊಂದಿರುವ ವಸಂತದಾದಾ ಪಾಟೀಲ್ ನೇತೃತ್ವದ ಸರ್ಕಾರವನ್ನು ತೊರೆದು ನಂತರ 1978ರಲ್ಲಿ ಸ್ವತಃ ಮುಖ್ಯಮಂತ್ರಿಯಾದ ಬಗ್ಗೆ ಅಮಿತ್ ಶಾ ತಮ್ಮ ಹೇಳಿಕೆಗಳಲ್ಲಿ ಉಲ್ಲೇಖಿಸಿದ್ದರು. ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಅಮಿತ್ ಶಾ ತಮ್ಮ ಹುದ್ದೆಯ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ಭಾನುವಾರ ಶಿರಡಿಯಲ್ಲಿ ನಡೆದ ಬಿಜೆಪಿಯ ರಾಜ್ಯಮಟ್ಟದ ಸಮಾವೇಶದಲ್ಲಿ ಅಮಿತ್ ಶಾ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು 1978ರಿಂದ ಶರದ್ ಪವಾರ್ ಆರಂಭಿಸಿದ ಮೋಸದ ರಾಜಕೀಯವನ್ನು ಕೊನೆಗೊಳಿಸಿದೆ ಎಂದು ಹೇಳಿದ್ದರು. ಇದಕ್ಕೆ ಶರದ್ ಪವಾರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ‘ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ’; ಮಹಾರಾಷ್ಟ್ರ ಚುನಾವಣೆಗೂ ಮುನ್ನ ಶರದ್ ಪವಾರ್ ಮಹತ್ವದ ಘೋಷಣೆ
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಶರದ್ ಪವಾರ್, “ಅಮಿತ್ ಶಾ ಅವರ ಟೀಕೆ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರ ವಿಧಾನವು ವಿಭಿನ್ನವಾಗಿತ್ತು. ಅದರ ಫಲಿತಾಂಶವನ್ನು ಏನೆಂದು ನಾವೆಲ್ಲರೂ ನೋಡಿದ್ದೇವೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಅವರ ಪ್ರಯತ್ನಗಳು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಎನ್‌ಸಿಪಿ ಸಭೆಯಲ್ಲಿ ಆರ್ಎಸ್ಎಸ್ಗೆ ಶರದ್ ಪವಾರ್ ಪ್ರಶಂಸೆ
“ನಾನು 1978ರಲ್ಲಿ ಮುಖ್ಯಮಂತ್ರಿಯಾಗಿದ್ದೆ. ಆಗ ಅಮಿತ್ ಶಾ ಎಲ್ಲಿದ್ದರು ಎಂದು ನನಗೆ ತಿಳಿದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ, ಜನಸಂಘದ ಉತ್ತಮರಾವ್ ಪಾಟೀಲ್ ಅವರಂತಹವರು ಕೂಡ ನಾನು ಸಿಎಂ ಆಗಿದ್ದಾಗ ಸಂಪುಟದಲ್ಲಿ ಇದ್ದರು. ಈ ದೇಶವು ಅನೇಕ ಅತ್ಯುತ್ತಮ ಗೃಹ ಮಂತ್ರಿಗಳನ್ನು ಕಂಡಿದೆ, ಆದರೆ ಅವರಲ್ಲಿ ಯಾರನ್ನೂ ಅವರ ರಾಜ್ಯದಿಂದ ಹೊರಹಾಕಲಾಗಿಲ್ಲ” ಎಂದು ಅಮಿತ್ ಶಾ ವಿರುದ್ಧ ಶರದ್ ಪವಾರ್ ತೀವ್ರ ವಾಗ್ದಾಳಿ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ