25 ವರ್ಷಗಳ ನಂತರ ಎಲ್‌ಜೆಡಿ ಪಕ್ಷವನ್ನು ಆರ್‌ಜೆಡಿಯೊಂದಿಗೆ ವಿಲೀನಗೊಳಿಸಿದ ಶರದ್ ಯಾದವ್
ಇಬ್ಬರು ನಾಯಕರು ಬೇರೆಯಾಗಿ 25 ವರ್ಷಗಳ ನಂತರ ಈ ವಿಲೀನ ನಡೆದಿದೆ. ನಮ್ಮ ಪಕ್ಷವನ್ನು ಆರ್‌ಜೆಡಿಯೊಂದಿಗೆ ವಿಲೀನಗೊಳಿಸುವುದು ಪ್ರತಿಪಕ್ಷಗಳ ಒಗ್ಗಟ್ಟಿನತ್ತ ಮೊದಲ ಹೆಜ್ಜೆಯಾಗಿದೆ. ಬಿಜೆಪಿಯನ್ನು ಸೋಲಿಸಲು ಇಡೀ ಪ್ರತಿಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ...
ದೆಹಲಿ: ಹಿರಿಯ ಸಮಾಜವಾದಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶರದ್ ಯಾದವ್(Sharad Yadav) ಭಾನುವಾರ ನವದೆಹಲಿಯಲ್ಲಿ ತಮ್ಮ ಲೋಕತಾಂತ್ರಿಕ್ ಜನತಾ ದಳ (LJD) ಪಕ್ಷವನ್ನು ಲಾಲು ಪ್ರಸಾದ್ ಯಾದವ್ (Lalu Prasad Yadav) ನೇತೃತ್ವದ ರಾಷ್ಟ್ರೀಯ ಜನತಾ ದಳ (RJD) ಯೊಂದಿಗೆ ವಿಲೀನಗೊಳಿಸಿದ್ದಾರೆ. ಇಬ್ಬರು ನಾಯಕರು ಬೇರೆಯಾಗಿ 25 ವರ್ಷಗಳ ನಂತರ ಈ ವಿಲೀನ ನಡೆದಿದೆ. ನಮ್ಮ ಪಕ್ಷವನ್ನು ಆರ್‌ಜೆಡಿಯೊಂದಿಗೆ ವಿಲೀನಗೊಳಿಸುವುದು ಪ್ರತಿಪಕ್ಷಗಳ ಒಗ್ಗಟ್ಟಿನತ್ತ ಮೊದಲ ಹೆಜ್ಜೆಯಾಗಿದೆ. ಬಿಜೆಪಿಯನ್ನು ಸೋಲಿಸಲು ಇಡೀ ಪ್ರತಿಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ. ಈಗಿನಂತೆ, ಏಕೀಕರಣವು ನಮ್ಮ ಆದ್ಯತೆಯಾಗಿದೆ. ಅದರ ನಂತರವೇ ನಾವು ಸಂಯುಕ್ತ ವಿರೋಧ ಪಕ್ಷಗಳನ್ನು ಯಾರು ಮುನ್ನಡೆಸುತ್ತಾರೆ ಎಂಬುದರ ಕುರಿತು ನಾವು ಯೋಚಿಸುತ್ತೇವೆ ಎಂದು ಶರದ್ ಯಾದವ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಉಲ್ಲೇಖಿಸಿದೆ. ಇದು 2018 ರಲ್ಲಿ ಮೊದಲ ಬಾರಿಗೆ ರಚನೆಯಾದಾಗಿನಿಂದ, ಎಲ್‌ಜೆಡಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಶರದ್ 2019 ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಟಿಕೆಟ್‌ನಲ್ಲಿ ಮಧೇಪುರದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಈ ಹಿಂದೆ ತನ್ನ ಸ್ನೇಹಿತರಾಗಿದ್ದು ಆನಂತರ ಪ್ರತಿಸ್ಪರ್ಧಿಯಾಗಿ, ಅದೇ ಪ್ರತಿಸ್ಪರ್ಧಿ ನಂತರ ಸ್ನೇಹಿತರಾದ ಮೇಲೆ ಪಕ್ಷದೊಂದಿಗೆ ವಿಲೀನಗೊಳ್ಳುವ ನಿರ್ಧಾರವನ್ನು ಪ್ರಕಟಿಸಿದ ಶರದ್, ಇದು ಹಿಂದಿನ ಜನತಾದಳದ ವಿವಿಧ ಒಡೆದ ಬಣಗಳನ್ನು ಒಟ್ಟುಗೂಡಿಸುವ ಅವರ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಪ್ರಬಲ ಪ್ರತಿಪಕ್ಷವನ್ನು ಸ್ಥಾಪಿಸುವುದು ಇಂದಿನ ಅಗತ್ಯವಾಗಿದೆ. ಹಿಂದಿನ ಜನತಾ ದಳ ಮತ್ತು ಇತರ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಲು ನಾನು ಬಹಳ ಸಮಯದಿಂದ ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ನನ್ನ ಪಕ್ಷ ಎಲ್‌ಜೆಡಿಯನ್ನು ಆರ್‌ಜೆಡಿಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದೇನೆ ಎಂದು ಶರದ್ ಯಾದವ್ ಬುಧವಾರ ಟ್ವೀಟ್ ಮಾಡಿದ್ದರು.
देश में मजबूत विपक्ष स्थापित करना समय की मांग है।मैं इस दिशा में न केवल बिखरी हुई तत्कालीन जनता दल बल्कि अन्य समान विचारधारा वाली पार्टियों को एकजुट करने के लिए लंबे समय से काम कर रहा हूं और इसीलिए अपनी पार्टी एलजेडी का राजद में विलय करने का फैसला किया।
— SHARAD YADAV (@SharadYadavMP) March 16, 2022
ಆರ್‌ಜೆಡಿ ನಾಯಕ ಮತ್ತು ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ಶರದ್ ಅವರನ್ನು “ತಂದೆಗೆ ಸಮಾನರಾದ ಮತ್ತು ಸಮಾಜವಾದಿ ಐಕಾನ್” ಎಂದು ಬಣ್ಣಿಸಿದ್ದಾರೆ. “ಭಾರತೀಯ ರಾಜಕೀಯದಲ್ಲಿ ಹಿರಿಯ ಸಮಾಜವಾದಿ ಶರದ್ ಯಾದವ್ ಅವರ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿದೆ. ಅವರು ತಂದೆಗೆ ಸಮಾನರಾದ ವ್ಯಕ್ತಿ ಮತ್ತು ನಮಗೆ ಮಾರ್ಗದರ್ಶನ ನೀಡುತ್ತಾರೆ ”ಎಂದು ಅವರು ಇತ್ತೀಚೆಗೆ ಪಾಟ್ನಾದಲ್ಲಿ ಹೇಳಿದ್ದರು.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಸ್ವಪಕ್ಷೀಯರಿಂದಲೇ ಹೆಚ್ಚಿನ ಒತ್ತಡ
Published On - 2:57 pm, Sun, 20 March 22